ಮಾ.11 ರಿಂದ ಶೆಜ್ಜೇಶ್ವರ ಜಾತ್ರಾ ಮಹೋತ್ಸವ
ಕಾರವಾರ 10: ತಾಲೂಕಿನ ಶೇಜವಾಡದ ಶ್ರೀ ಶೆಜ್ಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.11 ರಿಂದ ಮಾ.15 ರವರೆಗೆ ನೆರವೇರಲಿದೆ.
ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೊಳಪಟ್ಟಿರುವ ಶೇಜ್ಜೇಶ್ವರ ದೇವಸ್ಥಾನದಲ್ಲಿ ಈ ಬಾರಿ ಸರಕಾರದ ಮಾರ್ಗಸೂಚಿಯಂತೆ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಜಾತ್ರೆ ನೆರವೇರಲಿದೆ. ಮಾ. 11 ರಂದು ಮಹಾಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ 4 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪಂಚಾಮೃತ ಅಭಿಷೇಕ ನೆರವೇರಲಿದೆ. ಬಳಿಕ 7 ಗಂಟೆಯಿಂದ ಲೋಕ ಕಲ್ಯಾಣಾರ್ಥವಾಗಿ ಶತರುದ್ರಾಭಿಷೇಕ ನಡೆಯಲಿದೆ. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಮಾ.12 ರಂದು ಮಧ್ಯಾಹ್ನ ವಿಶೇಷ ಪೂಜೆ ಹಾಗೂ ರಾತ್ರಿ 8 ಗಂಟೆಗೆ ಪಲ್ಲಕ್ಕಿ ಮೆರವಣಿಗೆ, ಬಳಿಕ ಆರತಿ, ಪೂಜೆ ನೆರವೇರಲಿದೆ. ಮಾ.13 ರಂದು ಬೆಳಿಗ್ಗೆ 7 ಗಂಟೆಗೆ ಶ್ರೀ ದೇವರ ಪಲ್ಲಕ್ಕಿಯು ಸಮುದ್ರ ಸ್ನಾನಕ್ಕೆ ತೆರಳಿದೆ. ಮಧ್ಯಾಹ್ನ ದೇವಸ್ಥಾನದಲ್ಲಿ ಪೂಜೆ ಹಾಗೂ ಪ್ರಸಾದ ವಿತರಣೆ, ರಾತ್ರಿ ಪಲ್ಲಕ್ಕಿ ಮೆರವಣಿಗೆ, ರಂಗ ಪೂಜೆ, ಅಷ್ಟಾವಧಾನ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಮಾ.14 ರಂದು ಮಧ್ಯಾಹ್ನ 2 ಗಂಟೆಗೆ ಹೋಮ ಹವನ, ಸಂಜೆ 5 ಗಂಟೆಗೆ ರಥಾರೋಹಣ, ರಥದಲ್ಲಿ ಭಕ್ತರಿಂದ ಹಣ್ಣು ಕಾಯಿ ಸೇವೆ ಹಾಗೂ ದರ್ಶನ ನಡೆಯಲಿದೆ. ಈ ಮಧ್ಯೆ 10 ಗಂಟೆಗೆ ಪಂಚವಾದ್ಯದೊಂದಿಗೆ ಹೀಲಾಮತಿ ಮೆರವಣಿಗೆ, ಫಲಪುಷ್ಪ ಲೀಲಾವು ನಡೆಯಲಿದೆ. ಬಳಿಕ ಮನರಂಜನೆಗಾಗಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಮಾ.15 ರಂದು ಬೆಳಿಗ್ಗೆ 4 ಗಂಟೆಗೆ ಶೆಜ್ಜೇಶ್ವರ ರಥೋತ್ಸವ ನಡೆಯಲಿದೆ. ಸಂಜೆ 4 ಗಂಟೆಗೆ ವಿಶಿಷ್ಟ ಡೊಳ್ಳು ವಾದ್ಯಗಳ ಕುಣಿತದ ಮೂಲಕ ದೇವರ ಓಕುಳಿ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಬಳಿಕ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 9 ಗಂಟೆಗೆ ಶೇಜವಾಡದ ಅಭಿನವ ನಾಟ್ಯ ಮಂಡಳಿಯವರಿಂದ 'ಚಲಿ ಮಾಗೆಲ್ ಪಿಷಿ ಲಗ್ನ ಜಾತಲ್ ಕಶಿ?' ಎಂಬ ಹಾಸ್ಯಮಯ ಕೊಂಕಣಿ ನಾಟಕ ಪ್ರದರ್ಶನ ನಡೆಯಲಿದೆ.
ಭಕ್ತಾದಿಗಳು ಕೋವಿಡ್ ಮುಂಜಾಗೃತಾ ಕ್ರಮವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಅರ್ಚಕರು, ಉಪಾಧಿವಂತರು, ದೇವಳಿಯರು ಹಾಗೂ ಊರ ನಾಗರಿಕರು ಕೋರಿದ್ದಾರೆ.