ಧಾರವಾಡ - ಹುಬ್ಬಳ್ಳಿ

ಶರಣಬಸವ ಚೋಳಿನ ಸೇವಾ ನಿವೃತ್ತಿ; ಬೀಳ್ಕೊಡುಗೆ

ಶರಣಬಸವ ಚೋಳಿನ ಸೇವಾ ನಿವೃತ್ತಿ; ಬೀಳ್ಕೊಡುಗೆ

ಲೋಕದರ್ಶನ ವರದಿ 

ಧಾರವಾಡ   30: ನಗರದ ಕೃಷಿ ವಿಶ್ವವಿದ್ಯಾಲಯ ಹಾಗೂ ಆಕಾಶವಾಣಿ ಕೇಂದ್ರಗಳು, ನಾಡಿನ ಜ್ಞಾನದ ಕೇಂದ್ರಗಳಾಗಿವೆ. ಕೃಷಿ ರಂಗ ಕಾರ್ಯಕ್ರಮಗಳ ಮೂಲಕ ಆಕಾಶವಾಣಿ ಕೃಷಿಕರಿಗೆ ಮಾಹಿತಿಯ ಮೂಲವಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾಕ್ಟರ ಪಿ.ಎಲ್ ಪಾಟೀಲ್ ಹೇಳಿದರು. ಧಾರವಾಡ ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕ ಹಾಗೂ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ, ಭಾರತೀಯ ಪ್ರಸಾರ ಸೇವೆ (ಐ.ಬಿ.ಪಿ.ಎಸ್‌.) ಹಿರಿಯ ಅಧಿಕಾರಿ, ಇಂದು (ಮಾರ್ಚ್‌ 31 ರಂದು) ನಿವೃತ್ತರಾಗಲಿರುವ ಶರಣ ಬಸವ ಚೋಳಿನ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಹಲವು ವಿಷಯಗಳ ಬಗ್ಗೆ ತಜ್ಞತೆ ಹೊಂದಿರುವ ಶರಣಬಸವ ಚೋಳಿನ ಅವರು, ಜನಪರ ಕಾರ್ಯಕ್ರಮಗಳ ಮೂಲಕ ಹೆಸರಾಗಿದ್ದಾರೆ ಎಂದರು.  ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮನಗುಂಡಿ, ಶ್ರೀ ಗುರು ಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ ಮಾತನಾಡಿ, ಸೃಜನಶೀಲ ಹಾಗೂ ಕ್ರಿಯಾಶೀಲ  ಕಾರ್ಯಕ್ರಮ ಅಧಿಕಾರಿಯಾಗಿ, ಆಕಾಶವಾಣಿ ಧಾರವಾಡ ಕೇಂದ್ರವನ್ನು ಜನಾನುರಾಗಿಯಾಗಿ ರೂಪಿಸಿದ ಕೀರ್ತಿ ಶರಣಬಸವ ಚೋಳಿನ ಅವರಿಗೆ ಸಲ್ಲುತ್ತದೆ ಎಂದು, ಅಭಿನಂದನೆ ಸಲ್ಲಿಸಿದರು. 

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಉಪ ಕುಲಪತಿ, ಪ್ರೊಫೆಸರ್ ಎ.ಎಂ. ಖಾನ್ ಮಾತನಾಡಿ, ವಿಶ್ವವಿದ್ಯಾಲಯ ಪ್ರಾಯೋಜಿತ ಆಕಾಶವಾಣಿ ಕಾರ್ಯಕ್ರಮಗಳು ಉತ್ತಮವಾಗಿ ಮೂಡಿಬರುತ್ತಿವೆ. ಈ ಕಾರ್ಯಕ್ರಮಗಳು ಇನ್ನು ಮುಂದೆಯೂ ಮುಂದುವರೆಯಲಿವೆ ಎಂದರು. ನಿವೃತ್ತಿ ಹೊಂದಲಿರುವ ಶರಣಬಸವ ಚೋಳಿನ ಅವರನ್ನು ಶಬ್ದಗಳ ಭಂಡಾರ ಎಂದು ಉಲ್ಲೇಖಿಸಿದ ಅವರು, ನಿವೃತ್ತಿ ಜೀವನ ಸಂತಸದಾಯಕವಾಗಿರಲಿ ಎಂದು ಹಾರೈಸಿ, ಅಭಿನಂದಿಸಿದರು. ಸಮಾರಂಭದಲ್ಲಿ ಆಕಾಶವಾಣಿ ಕೇಂದ್ರದ ತಾಂತ್ರಿಕ ವಿಭಾಗದ ಉಪ ಮಹಾನಿರ್ದೇಶಕ ಅರುಣ ಪ್ರಭಾಕರ, ಹಿರಿಯ ಕಾರ್ಯಕ್ರಮ ನಿರ್ವಾಹಕಿ, ಮಂಜುಳಾ ಪುರಾಣಿಕ ಸೇರಿದಂತೆ, ಕೇಂದ್ರದ ಅಧಿಕಾರಿಗಳು, ಸಿಬ್ಬಂದಿ, ವಿಶೇಷ ಆಹ್ವಾನಿತ ಗಣ್ಯರು, ಶರಣ ಬಸವ ಚೋಳಿನ ಅವರಿಗೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಆಕಾಶವಾಣಿಯ ಅಭಿಮಾನಿ ಕೇಳುಗರು ಇದ್ದರು.  ಸದಾಶಿವ ಐಹೊಳೆ ಪ್ರಾರ್ಥನಾ ಗೀತೆ ಹಾಡಿದರು, ಹಿರಿಯ ಉದ್ಘೋಷಕಿ ಮಾಯಾ ರಾಮನ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಅಭಿಯಂತರ ಎಸ್‌. ವೈ ಕಾಂಬಳೆ ಧನ್ಯವಾದ ಸಲ್ಲಿಸಿದರು. 


ಸುದ್ದಿ ಓದಿ