ಸರ್ವರ್ ಸಮಸ್ಯೆ: ಪಡಿತರ ಸಿಗದೆ ಜನರ ಪರದಾಟ
ಘಟಪ್ರಭಾ 23: ಜೂನ್ ತಿಂಗಳಲ್ಲಿ ಪಡಿತರವನ್ನು ಕೇವಲ ದಿ.27 ರ ವರೆಗೆ ನೀಡಲಾಗುವುದು ಎಂದು ಆಹಾರ ಇಲಾಖೆ ಘೋಷಿಸಿದ್ದು, ಜನರು ಮುಗಿಬಿದ್ದು ಪಡಿತರ ಪಡೆಯಲು ಪಡಿತರ ಅಂಗಡಿಗಳತ್ತ ದೌಡಾಯಿಸುತ್ತಿದ್ದು, ಆದರೆ ಸರ್ವರ್ ಸಮಸ್ಯೆಯಿಂದ ಪಡಿತರ ಸಿಗದೆ ಪಟ್ಟಣದ ಜನರು ಪರದಾಡುತ್ತಿದ್ದಾರೆ.
ಪಡಿತರ ಅಂಗಡಿಗಳಿಗೆ ಬರುವ ಪಡಿತರ ಚೀಟಿದಾರರಿಗೆ ಸರ್ವರ್ ಸಮಸ್ಯೆ ಕಾಡುತ್ತಿದ್ದು, ಜನರು ಗಂಟೆಗಟ್ಟಲೆ ಪಡಿತರ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ. ಕಳೆದು ಎರಡು ದಿನಗಳಿಂದ ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ ಎದುರಾಗಿದೆ. ಸರಕಾರ ಈ ತಿಂಗಳ ದಿ. 27ರ ವರೆಗೆ ಮಾತ್ರ ಪಡಿತರ ವಿತರಿಸುವುದಾಗಿ ಹೇಳಿದ ಕಾರಣ ಜನರು ಮುಂಜಾನೆಯಿಂದ ಸಂಜೆಯ ವರೆಗೆ ಪಡಿತರಕ್ಕಾಗಿ ನ್ಯಾಯ ಬೆಲೆ ಅಂಗಡಿಗಳಿಗೆ ಅಲೆದಾಡಿದರೆ ಕೆಲವರು ಅಂಗಡಿಯಲ್ಲಿ ಸರತಿ ಸಾಲಿನಲ್ಲಿ ನಿಂತು ಕಾಯುವಂತೆ ಆಗಿದೆ.
ಸರ್ವರ್ ಸಮಸ್ಯೆ ಇರುವ ಕುರಿತು ಗ್ರಾಹಕರಿಗೆ ಮನವರಿಕೆ ಮಾಡುವಲ್ಲಿ ಕೆಲವು ನ್ಯಾಯ ಬೆಲೆ ಅಂಗಡಿ ಮಾಲೀಕರು ಬೇಸತ್ತು ಹೋಗಿದ್ದು, ಕೆಲವರು ಅಂಗಡಿಗಳನ್ನು ಬಂದು ಮಾಡಿದ್ದಾರೆಂದು ತಿಳಿದು ಬಂದಿದೆ.
ಸರಕಾರ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಕೂಡಲೆ ಸರ್ವರ್ ಸಮಸ್ಯೆಯಿಂದ ಬಡವರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಲು ಮುಂದಾಗಬೇಕು ಹಾಗೂ ಸರಕಾರ ನಿಗದಿಪಡಿಸಿದ ಪಡಿತರ ವಿತರಣೆ ದಿನಾಂಕವನ್ನು ಮುಂದೂಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ. ಪಡಿತರ ವಿತರಿಸುವ ಸರ್ವರದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಗಮನಕ್ಕೆ ಬಂದಿದೆ. ಪಡಿತರ ವಿತರಣೆಯನ್ನು ಮುಂದೂಡುವ ಬಗ್ಗೆ ಮೇಲಾಧಿಕಾರಿಗಳು ನಿರ್ಧರಿಸುತ್ತಾರೆ.
ತಹಶೀಲ್ದಾರರು, ಗೋಕಾಕ