ಬಾಲಕರ ಜ್ಯೂನಿಯರ್ ಕಬಡ್ಡಿ ಪಂದ್ಯಾವಳಿಗೆ ಆಯ್ಕೆ ಪ್ರಕ್ರಿಯೆ
ಬ್ಯಾಡಗಿ 02: ಉದಾತ್ತ ಗುರಿಯನ್ನು ಹೊಂದಿರುವ ಹಾವೇರಿ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಕಳೆದ 22 ವರ್ಷದಿಂದ ಜಿಲ್ಲೆಯಲ್ಲಿನ ನೂರಾರು ಬಡ ಕಬಡ್ಡಿ ಕ್ರೀಡಾಪಟುಗಳಿಗೆ ಬದುಕಿನ ಮಾರ್ಗವನ್ನು ತೋರಿಸುವ ಮೂಲಕ ಕ್ರೀಡೆಗಿರುವ ತಾಕತ್ತನ್ನು ಸಾಬೀತುಪಡಿಸಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಏಸು ಬೆಂಗಳೂರು ಹೇಳಿದರು.
ಉತ್ತರಖಂಡದ ಹರಿದ್ವಾರದಲ್ಲಿ ನ.17 ರಿಂದ 20 ರವರೆಗೆ ನಡೆಯಲಿರುವ ಬಾಲಕರ ಜ್ಯೂನಿಯರ್ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಪಟ್ಟಣದ ಎಸ್ಜೆಜೆಎಂ ತಾಲ್ಲೂಕ ಕ್ರೀಡಾಂಗಣದಲ್ಲಿ ಜಿಲ್ಲೆಯ ಕ್ರೀಡಾಪಟುಗಳಿಗೆ ಏರ್ಪಡಿಸಿದ್ದ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.
ನಿಸ್ವಾರ್ಥ ಮನಸ್ಸುಗಳೇ ಕಾರಣ:ಎರಡು ದಶಕಗಳಿಗೂ ಹೆಚ್ಚು ಕಾಲ ಕ್ರೀಡಾ ಸಂಸ್ಥೆಗಳನ್ನು ಉಳಿಸಿ ಬೆಳೆಸಿ ಸುಸೂತ್ರವಾಗಿ ನಡೆಸಿಕೊಂಡು ಬರುವುದೂ ಸಹ ಮಹತ್ತರ ಸಾಧನೆ, ಇಂತಹುದರಲ್ಲಿ ಹಾವೇರಿ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿ ಯೇಶನ್ ಸರ್ಕಾದ ಯಾವುದೇ ಬಿಡಿಗಾಸಿನ ನೆರವಿಲ್ಲದೇ ಕೋಟಿಗೂ ಅಧಿಕ ಮೌಲ್ಯದ ಸ್ವಂತ ನಿವೇಶನ ಹೊಂದುವ ಮೂಲಕ ಕಬಡ್ಡಿ ಕ್ರೀಡೆಯನ್ನು ಸಮರ್ಥವಾಗಿ ನಡೆಸಿಕೊಂಡು ಬಂದಿದ್ದು ಇದಕ್ಕೆ ಸಂಸ್ಥೆಯಲ್ಲಿನ ನಿಸ್ವಾರ್ಥ ಮನಸ್ಸುಗಳೇ ಕಾರಣವಾಗಿದೆ ಎಂದರು.
ಕ್ರೀಡಾಪಟುಗಳಿಗೆ ಸರ್ಕಾರ ಬೆಳಕಾಗಲಿ:ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಖಜಾಂಚಿ ಗಂಗಾಧರ ಎಲಿ ಮಾತನಾಡಿ, ಪ್ರೋ-ಕಬಡ್ಡಿ ಕ್ರೀಡಾ ಆಯೋಜನೆಯಿಂದ ವಿಶ್ವದ ಇನ್ನಿತರ ರಾಷ್ಟ್ರಗಳು ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದೇನೋ ಸರಿ, ಆದರೆ ಉದ್ಯೋಗ ಭರವಸೆಯಿಲ್ಲದೆ, ಬಹಳಷ್ಟು ಕ್ರೀಡಾಪಟುಗಳ ಬದುಕು ಕತ್ತಲೆಯಂತಾಗಿದೆ, ಇತ್ತೀಚೆಗೆ ಸರ್ಕಾರಿ ಉದ್ಯೋಗದಲ್ಲಿ ರಾಜ್ಯ ಸರ್ಕಾರವು ಶೇ.2 ರಷ್ಟು ಕ್ರೀಡಾಪಟುಗಳಿಗೆ ನೇಮಕಾತಿಯಲ್ಲಿ ಮೀಸಲು ಪ್ರಕಟಿಸಿದೆ ಆದರೆ ಅಧೀಕೃತವಾಗಿರುವ ಒಟ್ಟು 32 ಕ್ರೀಡೆಗಳಿಗೆ ಸಾಕಾಗುವುದಿಲ್ಲ ಕೂಡಲೇ ಇದನ್ನು ಶೇ.13ಕ್ಕೆ ಹೆಚ್ಚಿಸುವುದು ಸೂಕ್ತವೆಂದು ಸರ್ಕಾರಕ್ಕೆ ಸಲಹೆ ನೀಡಿದರು.
ಹಿಂದುರುಗಿ ನೋಡುವ ಪ್ರಶ್ನೆಯಿಲ್ಲ: ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಲ್ಲನಗೌಡ್ರ ಮಾತನಾಡಿ, ಅಸೋಸಿಯೇಶನ್ ಕಾರ್ಯವೈಖರಿಯ ಕುರಿತು ಸಂಪೂರ್ಣ ಅರಿವಿದ್ದರೂ ಸಂಸ್ಥೆಯ ಏಳಿಗೆಯನ್ನು ನೋಡಿ ಸಹಿಸಲಾಗದ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥ ಸಾಧನೆಗೆ ಸಂಸ್ಥೆಯ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ, ಕಬಡ್ಡಿ ಅಸೋಸಿಯೇಶನ್ ತನ್ನದೇ ಆದ ಸಾಮಥ್ರ್ಯ ಮತ್ತು ಗೌರವ ಹೊಂದಿದ್ದು ಹಿಂತಿರುಗಿ ನೋಡುವ ಪ್ರಶ್ನೆಯಿಲ್ಲ ಯಾವು ದೇ ಕಾರಣಕ್ಕೂ ಜಿಲ್ಲೆಯಲ್ಲಿ ಕಬಡ್ಡಿ ಬೆಳವಣಿಗೆ ಮಾತ್ರ ಸಂಸ್ಥೆಯು ನಿಲ್ಲಿಸುವುದಿಲ್ಲ ಎಂದರು.
ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲೆಯ ಒಟ್ಟು 156 ಕ್ರೀಡಾಪಟುಗಳು ಪಾಲ್ಗೊಂಡಿದ್ದು ಒಟ್ಟು 12 ಜನ ಆಟಗಾರರ ಹೆಸರನ್ನು ಅಂತಿಮಗೊಳಿಸಲಾಯಿತು.
ವೇದಿಕೆಯಲ್ಲಿ ಕಬಡ್ಡಿ ತೀರ್ಪುಗಾರರ ಮಂಡಳಿ ಛೇರಮನ್ ಸಿ.ಜಿ.ಚಕ್ರಸಾಲಿ ಪುರಸಭೆ ಸದಸ್ಯರಾದ ಸುಭಾಸ್ ಮಾಳಗಿ, ಹನುಮಂತ ಮ್ಯಾಗೇರಿ, ಪುರಸಭೆ ಲೆಕ್ಕ ಪರಿಶೋಧಕ ಪರುಶರಾಮ್ ಧನೋಜಿ, ಹಿರಿಯ ಕಬಡ್ಡಿ ಕ್ರೀಡಾಪಟುಗಳಾದ ಶಿವಪುತ್ರ ದೊಡ್ಮನಿ, ವಿಜಯ ಮಾಳಗಿ, ಮಲ್ಲೇಶ ಭಂಡಾರಿ, ಸಂಸ್ಥೆಯ ಮಲ್ಲಿಕಾರ್ಜುನ್ನ ಬಳ್ಳಾರಿ, ರಾಜೇಶ್ ಮಾಳಗಿ, ಮಾರುತಿ ಜನ್ನು, ಬಿ.ಸಿ.ದಾಣಗಲ್, ಬಿ.ಎನ್.ಹೊಸಪೇಟಿ, ಕಿರಣ ಕಂಬಳಿ, ಮಲ್ಲಿಕಾರ್ಜುನ್ನ ಅಂಗಡಿ, ಶಿವಯೋಗಿ ಎಲಿ, ತೀರ್ಪುಗಾರರ ಮಂಡಳಿ ಸದಸ್ಯರಾದ ಕುಮಾರಸ್ವಾಮಿ ಹಿರೆಮಠ, ಶಿವಕುಮಾರ ಸೋಮನಹಳ್ಳಿ, ವಿರೇಶ್, ಬಸವರಾಜ ಸೊಟ್ಟಮ್ಮನವರ, ಎಂ.ಬಸವ ರಾಜಪ್ಪ ಎ.ಟಿ.ಪೀಠದ ಎಂ.ಆರ್.ಕೋಡಿಹಳ್ಳಿ, ಪುನೀತ್ ಲಕ್ಷ್ಮೇಶ್ವರ, ಕೋಚ್ ಮಂಜುಳ ಭಜಂತ್ರಿ ಹಾಗೂ ಇನ್ನಿತರರಿದ್ದರು.