ಕಾರವಾರ

ಕಣ್ಮರೆಯಾದವರಿಗೆ ಹುಡುಕಾಟ, ನೆರೆಗೆ 81 ಗ್ರಾಮಗಳು ತತ್ತರ : 12733 ಜನ ಕಾಳಜಿ ಕೇಂದ್ರಗಳಲ್ಲಿ ವಸತಿ

ಕಣ್ಮರೆಯಾದವರಿಗೆ ಹುಡುಕಾಟ, ನೆರೆಗೆ 81 ಗ್ರಾಮಗಳು ತತ್ತರ : 12733 ಜನ ಕಾಳಜಿ ಕೇಂದ್ರಗಳಲ್ಲಿ ವಸತಿ

ಕಾರವಾರ : ಉತ್ತರ ಕನ್ನಡದಲ್ಲಿ ಶುಕ್ರವಾರ ಸುರಿದ ಭಾರೀ ಮಳೆಗೆ ಜಿಲ್ಲೆಯ ಕಾರವಾರ ತಾಲೂಕಿನ 25 ಗ್ರಾಮಗಳು, ಅಂಕೋಲಾದ 32 ಗ್ರಾಮಗಳು ನೆರೆಗೆ ತುತ್ತಾಗಿವೆ. ಅಂಕೋಲಾದ ಗ್ರಾಮಗಳ 5800 ಜನ ಹಾಗೂ ಕಾರವಾರದ 4460 ಜನ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರೆ, ಜಿಲ್ಲೆಯ ದಾಂಡೇಲಿ, ಕುಮಟಾ, ಮುಂಡಗೊಡ, ಶಿರಸಿ, ಸಿದ್ದಾಪುರ, ಯಲ್ಲಾಪುರ 4 ಗ್ರಾಮಗಳ ಜನರೂ ಸೇರಿದಂತೆ 12733 ಜನ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇವರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಿದೆ. ಕದ್ರಾದಲ್ಲಿ ಸಹಾಯಕ ಕಮಿಷನರ್ ವಿದ್ಯಾಶ್ರೀ ಚಂದರಗಿ ಕಳೆದ ಎರಡು ದಿನಗಳಿಂದ ಸ್ಥಳದಲ್ಲೇ ಇದ್ದು, ಜನರ ಯೋಗ ಕ್ಷೇಮ ವಿಚಾರಿಸುತ್ತಿದ್ದಾರ. ಕದ್ರಾದಿಂದ ಹೆಚ್ಚುವರಿ ನೀರನ್ನು ಹೊರಗೆ ಬಿಡಲು ಕೆಪಿಸಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಮಳೆ ಕಡಮೆಯಾಗಿದ್ದು, ಶನಿವಾರ ಸಂಜೆ ಆರಕ್ಕೆ ಕದ್ರಾ ಅಣೆಕಟ್ಟಿನ ಎಲ್ಲಾ 10 ಕ್ರಸ್ಟಗೇಟ್ ತೆರೆದು 82463 ಕ್ಯೂಸೆಕ್ಸ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಅಣೆಕಟ್ಟಿಗೆ ಬರುವ ನೀರಿನ ಒಳ ಹರಿವು 32042 ಇದ್ದು, ನೀರಿದ ಸಂಗ್ರಹ 30 ಮೀಟರ್ ದಾಟದಂತೆ ನೋಡಿಕೊಳ್ಳಲಾಗುತ್ತಿದೆ.  

ಜಿಲ್ಲೆಯಲ್ಲಿ ಭಾರಿ ಮಳೆಗೆ ನಾಲ್ಕು ಸಾವು ಸಂಭವಿಸಿದ್ದು, 3 ಜನ ನಾಪತ್ತೆಯಾಗಿದ್ದಾರೆ. ಕಾಣೆಯಾದವರಿಗೆ ಹುಡುಕಾಟ ಮುಂದುವರಿದಿದೆ. ಭೈರುಂಬೆ, ಜಾಜಿಗುಡ್ಡ, ಅಣಶಿ,  ಅರಬೈಲ್, ಕಳಚೆ,ದಬ್ಗುಳಿ, ತಳಕೆ ಬೈಲ್‌ನಲ್ಲಿ ಮಣ್ಣು ಕುಸಿತವಾಗಿದೆ. ಅಣಶಿ ಮಾರ್ಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಶಿರಸಿ ಕುಮಟಾ ಮಾರ್ಗ ಸಹ ವಾಹನ ಸಂಚಾರಕ್ಕೆ ಸುಗಮವಾಗಿದೆ. ಅರಬೈಲ್ ಮಾರ್ಗ ರಿಪೇರಿಗೆ 7 ದಿನಕ್ಕೂ ಹೆಚ್ಚು ದಿನ ಬೇಕಾಗಬಹುದು ಎನ್ನಲಾಗುತ್ತಿದೆ. ಹಾಗೆ ಕೈಗಾ ಕಳಚೆ ಯಲ್ಲಾಪುರ ಮಾರ್ಗ ರಸ್ತೆ ಸಂಚಾರಕ್ಕೆ ಮರು ಸಜ್ಜುಗೊಳಿಸಲು ಯೋಚಿಸಲಾಗುತ್ತಿದ್ದು, ಮಳೆ ಪೂರ್ಣವಾಗಿ ನಿಂತಮೇಲೆ ರಿಪೇರಿ ಕಾರ್ಯ ಆರಂಭವಾಗಲಿದೆ.  

30 ಸೇತುವೆಗಳಿಗೆ ಧಕ್ಕೆ :  

ಸಿದ್ದಾಪುರ ತಾಲೂಕಿನಲ್ಲಿ 10, ಶಿರಸಿಯಲ್ಲಿ 7, ಯಲ್ಲಾಪುರ ತಾಲುಕಿನಲ್ಲಿ 9, ಜೊಯಿಡಾದಲ್ಲಿ 2, ಮುಂಡಗೊಡದಲ್ಲಿ 1 ಸೇತುವೆ ಭಾರಿ ಮಳೆಗೆ ಹಾನಿಯಾಗಿವೆ. 148.2 ಕಿ.ಮೀ. ರಸ್ತೆ ಹಾಳಾಗಿದ್ದು, 7 ಶಾಲೆ, 1 ಪ್ರಾಥಮಿಕ ಆರೋಗ್ಯ ಕೇಂದ್ರ ಮಳೆಗೆ ತುತ್ತಾಗಿವೆ. 50 ಮನೆ ಪೂರ್ಣ ನಾಶವಾಗಿವೆ. 146 ಮನೆ ಭಾಗಶಃ ನಾಶವಾಗಿವೆ. ಇವುಗಳ ನಷ್ಟದ ಅಂದಾಜು ನಡೆದಿದೆ. 5 ಜಾನುವಾರು ಸಾವನ್ನಪ್ಪಿವೆ. 113 ಕಾಳಜಿ ಕೇಂದ್ರಗಳಲ್ಲಿ 9518 ಜನ ಆಶ್ರಯ ಪಡೆದಿದ್ದಾರೆಂದು ಜಿಲ್ಲಾಡಳಿತದ ಅಪರ ಜಿಲ್ಲಾಧಿಕಾರಿ ಎಚ್‌.ಕೆ.ಕೃಷ್ಣಮೂರ್ತಿ ತಿಳಿಸಿದ್ದಾರೆ.  910 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 53 ಹೆಕ್ಟೇರ್ ತೋಟಗಾರಿಕಾ ಬೆಳೆ ನಷ್ಟವಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ನಷ್ಟದ ಅಂದಾಜು ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಮಳೆ ಹಾಗೂ ಪ್ರವಾಹದಿಂದ ಕೋಟ್ಯಾಂತರ ರೂ.ನಷ್ಟವಾಗಿದೆ. ನಿಖರ ಮಾಹಿತಿ ದೊರೆಯಲು ಇನ್ನೆರಡು ದಿನಗಳು ಬೇಕಾಗುತ್ತದೆ. ರಜೆಯಲ್ಲೂ ಅಧಿಕಾರಿ, ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಪ್ರವಾಹ ಪೀಡಿತ ಜನರಿಗೆ ನೆರವಾಗುತ್ತಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಪ್ರವಾಹ ನೆರವು ಕಂಟ್ರೋಲ್ ರೂಂ ಸಹ ತೆರೆಯಲಾಗಿದೆ. ತಾಲೂಕಾ ಆಡಳಿತಗಳು ಕ್ಷಣ ಕ್ಷಣದ ಮಾಹಿತಿಯನ್ನು ಜಿಲ್ಲಾ ಕೇಂದ್ರಕ್ಕೆ ನೀಡುತ್ತಿವೆ. ಕಾಳಜಿ ಕೇಂದ್ರಗಳಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೆರಡು ದಿನ ಮಳೆಯ ಸೂಚನೆ ಇದೆ. ಹಾಗಾಗಿ ಪರಿಸ್ಥಿತಿಯ ಮೇಲೆ ನಿಗಾ ಇಡಲಾಗಿದೆ. ಮಳೆ ಕಡಿಮೆಯಾಗಿದ್ದರೂ ಸಹ ನೆರೆಯ ಮಹಾರಾಷ್ಟ್ರ, ಗೋವಾದಲ್ಲಿ, ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಸುರಿಯುತ್ತಿದೆ. ಅದರ ಪರಿಣಾಮ ಕಾರವಾರ ಅಂಕೋಲಾ ತಾಲೂಕಿನ ಮೇಲಾಗುತ್ತದೆ. ಶಿರಸಿ, ಸಿದ್ದಾಪುರದಲ್ಲಿ ಮಳೆಯಾದರೆ, ಕುಮಟಾ ತಾಲೂಕಿನ ಅಘನಾಶಿನಿ ಪಕ್ಕದ ಗ್ರಾಮಗಳಿಗೆ ನೆರೆ ಬರುತ್ತದೆ. ಹಾಗಾಗಿ ಹೆಚ್ಚಿನ ನಿಗಾ ಇಡಲಾಗಿದೆ ಎಂದರು. 


ಸುದ್ದಿ ಓದಿ