ಕಾರವಾರ

ಬಾಲಮಂದಿರ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

ಬಾಲಮಂದಿರ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

ಲೋಕದರ್ಶನ ವರದಿ 

ಕಾರವಾರ 04: ಎಜ್ಯುಕೇಶನ್ ಸೊಸೈಟಿಯ ಬಾಲಮಂದಿರ ಪ್ರೌಢಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯನ್ನು ತೋರಣ, ಹೂವಿನ ಅಲಂಕಾರ ಹಾಗೂ ಸ್ವಾಗತ ಫಲಕಗಳಿಂದ ಸಿಂಗರಿಸಲಾಗಿತ್ತು. ಬೇಸಿಗೆ ರಜೆಯ ಬಳಿಕ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿ ಸಿಹಿ ಹಂಚಿದರು. ಕಾರ್ಯಕ್ರಮವು ಗಣೇಶ ಹಾಗೂ ಶಾರದಾ ಮಾತೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮತ್ತು ಆರತಿ ಬೆಳಗುವ ಮೂಲಕ ಆರಂಭಗೊಂಡಿತು. 

ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಮಾತನಾಡಿ, 2025-26ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಶಾಲೆಯು ಶೇ.99 ಫಲಿತಾಂಶ ಪಡೆದಿರುವುದನ್ನು ತಿಳಿಸಿದರು. ಕು. ಸಾಯಿಗಣೇಶ ಆರ್‌. ಮಡಿವಾಳ 622 ಅಂಕಗಳೊಂದಿಗೆ ರಾಜ್ಯಕ್ಕೆ 4ನೇ, ಜಿಲ್ಲೆಗೆ 3ನೇ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದು, ಇತರ ವಿದ್ಯಾರ್ಥಿಗಳೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಒಟ್ಟು 32 ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಎಸ್‌.ಎಸ್‌.ಎಲ್‌.ಸಿ. ಸಾಧಕರ ಫಲಕಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ವಿಭಾಗ ಮುಖ್ಯಸ್ಥ ನಜಿರುದ್ಧೀನ್ ಸೈಯದ್, ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ ಆರ್‌. ನಾಯ್ಕ, ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಉತ್ಸಾಹಭರಿತ ವಾತಾವರಣದಲ್ಲಿ ಶಾಲಾ ಪ್ರಾರಂಭೋತ್ಸವ ಯಶಸ್ವಿಯಾಗಿ ನೆರವೇರಿತು. 


ಸುದ್ದಿ ಓದಿ