ಚಿಕ್ಕಬೇವನೂರ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ
ಇಂಡಿ: ನಿತ್ಯ ಮಕ್ಕಳ ಕಲರವದಿಂದ ತುಂಬಿರುತ್ತಿದ್ದ ಭೀಮೆ ಒಡಲಿನ ಆ ಶಾಲೆಯಲ್ಲಿ ಗುರುವಾರ ಗಂಬೀರ ಮೌನ ಮನೆ ಮಾಡಿತ್ತು. ಆಟಗಳಲ್ಲಿ ಮೈ ಮರೆಯಬೇಕಿದ್ದ ಮಕ್ಕಳೆಲ್ಲ ಮತದಾರರಾಗಿ ಬದಲಾಗಿ ಮತ ಚಲಾವಣೆಗೆ ಮತಗಟ್ಟೆ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತಿದ್ದರು. ಶಾಲೆಯ ರಾಜಕೀಯಕ್ಕೆ ಧುಮಕ್ಕಿದ್ದ ವಿದ್ಯಾರ್ಥಿಗಳೆಲ್ಲ ಥೇಟ್ ರಾಜಕಾರಣಿಗಳಂತೆ ಸಹಪಾಠಿ ಮತದಾರರ ಮನ ಓಲೈಸುವ ಕಸರತ್ತು ಗಮನ ಸೆಳೆಯುತ್ತಿತ್ತು.
ಭದ್ರತಾ ಸಿಬ್ಬಂದಿ ನಿಯೋಜನೆ ಇಲ್ಲದಿದ್ದರೂ ಮತದಾನ ಶಾಂತಿಯುತವಾಗಿ ನಡೆಯಿತು. ಯಾವುದೇ ಅಹಿತಕರ ಘಟನೆ ನಡೆಯಲ್ಲಿಲ್ಲ! ಇದೆಲ್ಲ ಕಂಡುಬಂದ್ದದ್ದು ತಾಲೂಕಿನ ಚಿಕ್ಕಬೇವನೂರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಸಂಸತ್ ಚುಯನಾವಣೆಯಲ್ಲಿ. ಕೇಕೆ ಹಾಕಿ ಆಡುತ್ತಿರುವರೆಲ್ಲ ಚುನಾವಣೆಯ ಸಂದರ್ಭದಲ್ಲಿ ಗಂಭೀರವಾಗಿ ಗುಸು ಗುಸು ಮಾತನಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಚುನಾವಣೆಯ ಕಣದಲ್ಲಿ ಒಟ್ಟು 14 ಅಭ್ಯರ್ಥಿಗಳಿದ್ದರು. ಮತದಾನಕ್ಕಾಗಿ 2 ಮತಗಟ್ಟೆಗಳನ್ನು ಸ್ಥಾಪಿಸಿ, ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಬೆಳಿಗ್ಗೆ 11:30ಕ್ಕೆ ರಿಂದ 12:30 ರವರೆಗೆ ನಡೆದ ಮತದಾನ ಬಹು ಶಿಸ್ತಿನಿಂದಲೇ ಮಸಿ ಹಾಕಿಕೊಂಡು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಚಲಾಯಿಸಿದರು. ಒಟ್ಟು 150 ಮತಗಳು ಚಲಾವಣೆಯಾದವು.
ಮತದಾನ ಮುಗಿಯುತ್ತಿದಂತೆ ಪ್ರಕಟವಾಗಬೇಕಿದ್ದ ಫಲಿತಾಂಶ ವಿದ್ಯಾರ್ಥಿ ಮತ್ತು ಶಿಕ್ಷಕ ವೃಂದದಲ್ಲಿ ತೀವ್ರ ಕುತೂಹಲ ಮೂಡಿಸಿತು. ಮತ ಎಣಿಕೆ ಮುಗಿದ ಫಲಿತಾಂಶ ಪ್ರಕಟವಾದಾಗ 51 ಮತಗಳನ್ನು ಪಡೆದ 7ನೇ ತರಗತಿಯ ವಿದ್ಯಾರ್ಥಿನಿ ಸೌಂದರ್ಯ ಮದರಖಂಡಿ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆಯಾದರೆ. 48 ಮತಗಳನ್ನು ಪಡೆದ 7 ನೇ ತರಗತಿಯ ಆದಿತ್ಯ ಮದರಖಂಡಿ ಉಪ ಪ್ರಧಾನ ಕಾರ್ಯದರ್ಶಿ ಹಾಗೂ ದೀಪಾಲಿ ಅಗಸರ ಆರೋಗ್ಯ ಮಂತ್ರಿಯಾಗಿ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಚುನಾವಣೆ ಕುರಿತು ಪ್ರಕ್ರಿಯಿಸಿದ ಶಾಲೆಯ ಮುಖ್ಯ ಗುರು ಎ.ಎ. ಮುಲ್ಲಾ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜ ಹಾಗೂ ದೇಶ ಮುನ್ನಡೆ ಸಾಧಿಸಬೇಕಾದರೆ ಮಕ್ಕಳಲ್ಲಿ ಚುನಾವಣೆಯ ಪರಿಕಲ್ಪನೆ ಕುರಿತು ಸ್ಪಷ್ಟತೆ ಬರಬೇಕು. ಜತೆಗೆ ಮೂಲಭೂತ ಹಕ್ಕುಗಳ ಬಗ್ಗೆ ಅರಿತು ಮೂಡಿಸಬೇಕು. ಆದಿಸೆಯಲ್ಲಿ ಇಂತಹದೊಂದು ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
ಶಿಕ್ಷಕಿ ಸರೋಜನಿ ಮಾವಿನಮರ ಮಾತನಾಡಿ, ಚುನಾವಣಾ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿ ಪ್ರತಿ ವರ್ಷ ಚುನಾವಣೆ ನಡೆಸಿಕೊಂಡು ಬರಲಾಗುತ್ತಿದೆ. ಶಾಲೆ ಆರಂಭವಾಯಿತೆಂದರೆ ಪ್ರತೀ ಶಾಲೆಗಳಲ್ಲಿ ಶಾಲಾ ಸಂಸತ್ ಚುನಾವಣೆಗೆ ತಯಾರಿ ನಡೆಯುತ್ತದೆ. ಆಯಾ ವರ್ಷದ ವಿದ್ಯಾರ್ಥಿ ನಾಯಕನ ಆಯ್ಕೆ ಪ್ರಕ್ರಿಯೆ ಚುನಾವಣೆಯ ಮೂಲಕ ಸಾಗುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಚುನಾವಣೆಯ ಅರಿವು ಮೂಡಿಸುವ ಪ್ರಯುಕ್ತ ಶಾಲಾ ಸಂಸತ್ ರಚನೆ ನಡೆಸುವಂತೆ ಶಿಕ್ಷಣ ಇಲಾಖೆ ಆದೇಶಿಸಿದ್ದು ಮಕ್ಕಳಿಗೆ ದೇಶದ ರಾಜಕೀಯ ವ್ಯವಸ್ಥೆಯನ್ನು ತಿಳಿಯುವಲ್ಲಿ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಎನ್.ಬಿ. ದೇಶಮುಖ್, ಆರ್.ಎಂ. ಮುಜಾವರ್, ಬಿ.ಎನ್. ಜಮಾದಾರ, ಎ.ಜಿ. ಆನೆಗುಂದಿ, ಕೆ.ಎನ್. ಅವಟ್ಟಿ, ದ್ರಾಕ್ಷಾಯಣಿ ಕೋಳಿ, ಸಿದ್ದಮ್ಮ ಬಿರಾದಾರ ಚುನಾವಣೆಯ ಪ್ರಕ್ರಿಯದಲ್ಲಿ ಭಾಗಿಯಾಗಿದ್ದರು.