ಇಂಡಿ

ಶಾಲಾ ಸಂಸತ್ ಚುನಾವಣೆ: ಮಕ್ಕಳಿಗೆ ವಿಶೇಷ ಅನುಭವ

ಶಾಲಾ ಸಂಸತ್ ಚುನಾವಣೆ: ಮಕ್ಕಳಿಗೆ ವಿಶೇಷ ಅನುಭವ

ಇಂಡಿ 18: ಶಾಲೆಗಳಲ್ಲಿ ಶಾಲಾ ಸಂಸತ್ ಚುನಾವಣೆ ನಡೆಸುವುದು ಮಕ್ಕಳಿಗೆ ವಿಶೇಷ ಅನುಭವ ನೀಡುತ್ತದೆ. ಪ್ರತೀ ಮಗು ಉಲ್ಲಾಸ ಹಾಗೂ ಕುತೂಹಲದಿಂದ ಮತದಾನ ಮಾಡುವುದನ್ನು ಹತ್ತಿರದಿಂದ ಕಂಡಿದ್ದೇನೆ. ಶಾಲೆಯಲ್ಲಿ ಇಂತಹ ವಿಶೇಷ ಕಾರ್ಯಕ್ರಮಗಳನ್ನು ನಡೆಸುವುದರಿಂದ ಮಕ್ಕಳ ಕುತೂಹಲ ಹೆಚ್ಚಿಸಿದು ಶಾಲಾ ದಾಖಲಾತಿ ಕೂಡ ಹೆಚ್ಚಳವಾಗುತ್ತದೆ. ಸರಕಾರಿ ಶಾಲೆಗಳು ಗುಣಮಟ್ಟದಲ್ಲಿ ಉತ್ತಮವಾಗಿದ್ದು ಮಕ್ಕಳ ಸರ್ವತೋಮುಖ ಪ್ರಗತಿಗೆ ಶಾಲಾ ಶಿಕ್ಷಕರು ಶ್ರಮಿಸುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆಯ ಸಿಆರ್‌ಪಿ  ಶ್ರೀಧರ ಹಿಪ್ಪರಗಿ ಹೇಳಿದರು. 

ಸೋಮವಾರ ಪಟ್ಟಣದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಚುನಾವಣೆ ಕುರಿತು ಪ್ರಕ್ರಿಯಿಸಿದ ಶಾಲೆಯ ಮುಖ್ಯ ಗುರು ಯು.ಎಚ್‌. ರಾಠೋಡ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜ ಹಾಗೂ ದೇಶ ಮುನ್ನಡೆ ಸಾಧಿಸಬೇಕಾದರೆ ಮಕ್ಕಳಲ್ಲಿ ಚುನಾವಣೆಯ ಪರಿಕಲ್ಪನೆ ಕುರಿತು ಸ್ಪಷ್ಟತೆ ಬರಬೇಕು. ಜತೆಗೆ ಮೂಲಭೂತ ಹಕ್ಕುಗಳ ಬಗ್ಗೆ ಅರಿತು ಮೂಡಿಸಬೇಕು. ಆ ದಿಸೆಯಲ್ಲಿ ಇಂತಹದೊಂದು ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು. 

ಬಿಆರ್‌ಪಿ ಆರ್‌.ಸಿ. ಮೇತ್ರಿ ಮಾತನಾಡಿ, ಚುನಾವಣಾ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿ ಪ್ರತಿ ವರ್ಷ ಚುನಾವಣೆ ನಡೆಸಿಕೊಂಡು ಬರಲಾಗುತ್ತಿದೆ. ಶಾಲೆ ಆರಂಭವಾಯಿತೆಂದರೆ ಪ್ರತೀ ಶಾಲೆಗಳಲ್ಲಿ ಶಾಲಾ ಸಂಸತ್ ಚುನಾವಣೆಗೆ ತಯಾರಿ ನಡೆಯುತ್ತದೆ. ಆಯಾ ವರ್ಷದ ವಿದ್ಯಾರ್ಥಿ ನಾಯಕನ ಆಯ್ಕೆ ಪ್ರಕ್ರಿಯೆ ಚುನಾವಣೆಯ ಮೂಲಕ ಸಾಗುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಚುನಾವಣೆಯ ಅರಿವು ಮೂಡಿಸುವ ಪ್ರಯುಕ್ತ ಶಾಲಾ ಸಂಸತ್ ರಚನೆ ನಡೆಸುವಂತೆ ಶಿಕ್ಷಣ ಇಲಾಖೆ ಆದೇಶಿಸಿದ್ದು ಮಕ್ಕಳಿಗೆ ದೇಶದ ರಾಜಕೀಯ ವ್ಯವಸ್ಥೆಯನ್ನು ತಿಳಿಯುವಲ್ಲಿ ಸಹಕಾರಿಯಾಗಿದೆ ಎಂದರು. 

ಚುನಾವಣೆ ಪ್ರಕ್ರಿಯೆಯಲ್ಲಿ ಎಸ್‌.ಡಿ.ಎಂ.ಸಿ ಅಧ್ಯಕ್ಷ ಶ್ರೀಣಿಕರಾಜ ಹಳ್ಳಿ, ಸುಶ್ಮಿತಾ ಮೇತ್ರಿ, ಪ್ರಶಾಂತ ಗುಂದಗಿ, ರಮೇಶ ರಾಠೋಡ, ಆನಂದ ಕಂಬಾರ, ಸಂತೋಷ ಮೋರೆ, ಮಲ್ಲು ಗುಡ್ಲ, ಮಹ್ಮದರಫೀಕ ದಡೇದ ಸೇರಿದಂತೆ ಶಾಲಾ ಶಿಕ್ಷಕರು ಚುನಾವಣೆ ಪ್ರಕ್ರಿಯದಲ್ಲಿ ಭಾಗಿಯಾಗಿದ್ದರು. 

. 


ಬಾಕ್ಸ-1: 

ನಮ್ಮ ಶಾಲೆಯಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಮತದಾನ ಮಾಡಿದ್ದು ಬಹಳ ಖುಸಿ ನೀಡಿತು. ಅಲ್ಲದೇ ಚುನಾವಣೆ ಹೇಗೆ ನಡೆಸುತ್ತಾರೆ ಎಂಬ ಕುತೂಹಲ ದೂರವಾಯಿತು. ಶಾಲೆಯಲ್ಲಿನ ಎಲ್ಲಾ ಮಕ್ಕಳು ಮತದಾನ ಮಾಡಿದೆವು. ಶಿಕ್ಷಕರು ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. 

ಪ್ರೀತಿ ಕಾಲೇಬಾಗ ವಿದ್ಯಾರ್ಥಿನಿ. 


ಸುದ್ದಿ ಓದಿ