ಕಾರವಾರ

ದಾಖಲಾದ ಜಾತಿ ನಿಂದನೆ, ದೌರ್ಜನ್ಯ ಪ್ರಕರಣಗಳಿಗೆ ಶೀಘ್ರ ಪರಿಹಾರ ಒದಗಿಸಿ

ದಾಖಲಾದ ಜಾತಿ ನಿಂದನೆ, ದೌರ್ಜನ್ಯ ಪ್ರಕರಣಗಳಿಗೆ ಶೀಘ್ರ ಪರಿಹಾರ ಒದಗಿಸಿ

ಕಾರವಾರ 25: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಎಲ್ಲ ರೀತಿಯ ಮತ್ತು ಎಲ್ಲ ಆಯಾಮಗಳಲ್ಲಿ  ಅವರಿಗೆ ನ್ಯಾಯ ಒದಗಿಸುವುದರೊಂದಿಗೆ ಜಾತಿ ನಿಂದನೆ ಮತ್ತು ದೌರ್ಜನ್ಯ ಕುರಿತು ದಾಖಲಾದ ಪ್ರಕರಣಗಳಿಗೆ ಶೀಘ್ರ ಪರಿಹಾರ ಧನ ನೀಡಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಇತ್ತಿಚಿಗೆ ನಡೆದ ದೌರ್ಜನ್ಯ ನಿಯಂತ್ರಣ ಕಾಯ್ದೆ 1995 ರ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರಕರಣಗಳು ದಾಖಲಾದಾರೆ ಸಂತ್ರಸ್ತರಿಗೆ ನೀಡಬೇಕಾದ ಪರಿಹಾರ ಧನವನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ಪರಿಹಾರ ನೀಡಲು ಒತ್ತು ನೀಡಬೇಕೆಂದರು. 

ಸಭೆಯಲ್ಲಿ ಸಿದ್ಧಿ ಜನಾಂಗದ ಮುಖಂಡ ದಿಯೋಗ ಸಿದ್ಧಿ ಮಾತನಾಡಿ ಜನಾಂಗದವರಿಗೆ ಆದ ಅನ್ಯಾಯದ ಬಗ್ಗೆ ವಿವರಿಸಿದರು. ಸಿದ್ಧಿ ಜನರನ್ನು ಸುಳ್ಳು ಆರೋಪ ಹೊರಿಸಿ ಜೈಲು ವಾಸಕ್ಕೆ ಕಳುಹಿಸಲಾದ ಬಗ್ಗೆ ನಿಖರ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಕಂಡುಬಂದಲ್ಲಿ ಸರಿಯಾದ ಮಾಹಿತಿ ಹಾಗೂ ನಿಖರ ಸಾಕ್ಷ್ಯಾಧಾರಗಳನ್ನು ನೀಡದಿದ್ದಲ್ಲಿ  ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು. ಸಭೆಯಲ್ಲಿ ಪಾಲ್ಗೊಂಡಂತಹ ಸದಸ್ಯರು ಎಲ್ಲ ದಾಖಾಲಾತಿಗಳು ಹಾಗೂ ಮೂಲ ದತ್ತಾಂಶಗಳನ್ನು ಇಟ್ಟುಕೊಂಡು ಚರ್ಚಿಸಬೇಕು ಎಂದು ಸಲಹೆ ನೀಡಿದರು. 

ಚರ್ಚೆಗೆ ಗ್ರಾಸವಾದ ಪೌರಕಾರ್ಮಿಕರ ಅನುದಾನಗಳ ಹಾಗೂ ವೇತನದ ವಿಷಯಕ್ಕೆ ಸಂಬಂಧಿಸಿದಂತೆ  ಸಮಸ್ಯೆಯನ್ನು ಪರಿಶೀಲಿಸಲಾಗುವುದು. ಅಲ್ಲದೇ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಪರಿಹಾರ  ಒದಗಿಸಲು ಕ್ರಮ ಕೈಗೊಳ್ಳಲಾಗುವುದೆಂದರು.  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲೆ ದಾಖಲಾದ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಿಗೆ ನೀಡಬೇಕೆಂದು ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಶಿವಪ್ರಕಾಶ ದೇವರಾಜ ಮಾತನಾಡಿ ಯಾವುದೇ ವಿಷಯಗಳಾಗಲಿ ಸೂಕ್ಷ್ಮವಾಗಿ ಪರೀಶಿಲಿಸಿದ ನಂತರವೇ  ಕಾನೂನಿನ ಚೌಕಟ್ಟಿನಲ್ಲಿಯೇ ಬಗೆಹರಿಯಬೇಕು ಹೊರತು ಸಾಮಾನ್ಯ ಚರ್ಚೆಯಾಗಬಾರದು, ಜಾತಿ ದೌರ್ಜನ್ಯ ವಿಷಯಗಳು ತುಂಬಾ ಸೂಕ್ಷ್ಮವಾದ ವಿಚಾರಗಳಾಗಿದ್ದು ಪೊಲೀಸ್ ಇಲಾಖೆಯು  ಕೂಡಾ ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಕಾರ್ಯನಿಹಿಸುತ್ತಿದೆ. ಕೆಲವು ಪ್ರಕರಣಗಳಲ್ಲಿ ಸ್ವತಃ ಸ್ಥಳಕ್ಕೆ ಬೇಟಿ ಕೊಟ್ಟು, ವಿಷಯಗಳನ್ನು ಅಲ್ಲಿನ ಸನ್ನಿವೇಶ ಪರೀಶಿಲಿಸಿ ಕ್ರಮ ಕೈಗೊಂಡಿದ್ದೆವೆ, ಕೆಲವು ವಿಷಯಗಳನ್ನು ನೇರಾ-ನೇರ ಕೂತು ಸಮಾಲೋಚನೆ ನಡೆಸಿದ್ದಲ್ಲಿ ಮಾತ್ರ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ ಎಂದರು. 

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಸ್. ಪುರುಷೋತ್ತಮ ಅವರು ಸಭೆಗೆ ಮಾಹಿತಿ ನೀಡಿ, 2020ರ  ಅಕ್ಟೋಬರ್‍ನಿಂದ ಮಾರ್ಚ್ 2021ರ ವರೆಗೆ ಒಟ್ಟು 16 ಪ್ರಕರಣಗಳು ದಾಖಲಾಗಿರುತ್ತವೆ. ಈ ಎಲ್ಲ ಪ್ರಕರಣಗಳ  ತನಿಖೆ ಕೈಗೊಳಳ್ಳಲಾಗಿದೆ.   ಇದರಲ್ಲಿ ಎಫ್.ಐ.ಆರ್ ಹಂತದಲ್ಲಿರುವ 13 ಪ್ರಕರಣಗಳು  ಹಾಗೂ ಚಾರ್ಜ್‍ಶೀಟ್ ಹಂತದಲ್ಲಿರುವ 3 ಪ್ರಕರಣಗಳಿಗೆ ಪರಿಹಾರಧನ ಈಗಾಗಲೇ ನೀಡಲಾಗಿದೆ ಮತ್ತು ಬಿ ವರದಿ ಸಲ್ಲಿಸಿದ ಪ್ರಕರಣಗಳು ಯಾವುದೇ ಇರುವುದಿಲ್ಲ ಎಂದರು.  

ಸಭೆಯಲ್ಲಿ ಸಮಿತಿಯ ಸದಸ್ಯರಾದ  ಮಂಜುನಾಥ ಕುಮಾರ್ ಆಗೇರ, ಎಸ್. ಫಕ್ಕೀರಪ್ಪ, ದಿಯೋಗ ಸಿದ್ದಿ,  ಗೀತಾ ರಾಮಣ್ಣ ಭೋವಿ, ತುಳಸಿದಾಸ್ ಗಣಪತಿ ಪಾವುಸ್ಕರ್, ಯಮುನಾ ಗಾಂವ್ಕರ್, ಡಾ. ವೆಂಕಟೇಶ ನಾಯ್ಕ,  ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್. ಬದರಿನಾಥ, ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ,  ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎನ್.ಬಗಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಜಿ. ನಾವಿ, ಮುಂಡಗೋಡ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಾಲಕೃಷ್ಣ ಡಿ. ಸೇರಿದಂತೆ ಇತರರು  ಹಾಜರಿದ್ದರು. 

ಸುದ್ದಿ ಓದಿ