ಹಾಳು ಕೊಂಪೆಯಾದ ಸತ್ತಿಗೇರಿ ಬಸ್ ನಿಲ್ದಾಣ
ನಿಲ್ದಾಣದೆಲ್ಲೆಡೆ ಕಸದ ರಾಶಿ, ಮುಳ್ಳುಕಂಟಿ, ಗಬ್ಬೆದ್ದು ನಾರುತ್ತಿದೆ ಮೂತ್ರದ ಘಾಟು
ವರದಿ: ಈರಣ್ಣಾ ಹೂಲ್ಲೂರ
ಯರಗಟ್ಟಿ: ಎಲ್ಲೆಂದರಲ್ಲಿ ಕಸದ ರಾಶಿ, ಬೆಳೆದು ನಿಂತ ಮುಳ್ಳುಕಂಟಿ, ಆವರಣದಕ್ಕೆ ಕಾಲಿಟ್ಟರೆ ಸಾಕು ಮೂಗಿಗೆ ರಾಚುವ ಮೂತ್ರ ವಿಸರ್ಜನೆ ಘಾಟು, ಸ್ವತ್ಛತೆಗೆ ಅದೆಷ್ಟೋ ಮೈಲು ದೂರದಲ್ಲಿದೆ ಎಂಬ ಭಾವನೆ. ಇದು ಸಮೀಪದ ಸತ್ತಿಗೇರಿ ಗ್ರಾಮದ ಬಸ್ ನಿಲ್ದಾಣದ ಚಿತ್ರಣ. ನಿಲ್ದಾಣ ವ್ಯಾಪ್ತಿಯಲ್ಲಿ ವಿಶಾಲ ಜಾಗವಿದೆ. ಆದರೆ ಅರ್ಧದಷ್ಟು ಜಾಗ ಗಿಡಗಂಟಿಗಳಿಂದ ತುಂಬಿದೆ. ಮೂತ್ರ ವಿಸರ್ಜನೆ, ಬಯಲು ಬಹಿರ್ದೆಸೆಗೆ ಬಳಕೆಯಾಗುತ್ತಿದೆ.ಕೇವಲ ಸಾರ್ವಜನಿಕರಷ್ಟೇ ಅಲ್ಲದೆ ಸಾರಿಗೆ ಸಿಬ್ಬಂದಿ ಸಹ ಬಯಲಲ್ಲಿಯೇ ಮೂತ್ರ ವಿಸರ್ಜನೆ ಮಾಡುವುದು ಕಂಡುಬರುತ್ತದೆ. ಆವರಣದಲ್ಲಿ ಅಲ್ಲಲ್ಲಿ ಕಸದ ರಾಶಿ, ಕಂಡ ಕಂಡ ಕಡೆ, ಸಾರಾಯಿ ಪಾಕೇಟ್, ಗುಟಕಾ, ಎಲೆ-ಅಡಿಕೆ ತಿಂದು ಉಗಿದ ಕಲೆ ರಾಚುತ್ತವೆ. ಬಸ್ ನಿಲ್ದಾಣವೋ ಅಥವಾ ಕಸದ ತಿಪ್ಪೆ ಗುಂಡಿಯೋ ಎನ್ನುವಂತಾಗಿದೆ. ಸಾರಿಗೆ ಸಹಾಯಕರ ಕಚೇರಿಗೆ ಆಗಮಿಸದ ಅಧಿಕಾರಿಗಳು ಸುಮಾರು ವರ್ಷಗಳಿಂದ ಬೀಗ ಹಾಕಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕಚೇರಿ ಗ್ರಾಮದಲ್ಲಿ ಇದ್ದು ಇಲ್ಲದಂತಾದ ಬಸ್ ನಿಲ್ದಾಣ ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದರು.
ಬಸ್ ನಿಲ್ದಾಣದ ಸುತ್ತಮುತ್ತ ಕಸಬೀಳುತ್ತಿದ್ದು, ಇದು ವಿಲೇವಾರಿಯಾಗದ ಪರಿಣಾಮ ಅನೈರ್ಮಲ್ಯ ಹೆಚ್ಚಾಗಲಿದೆ. ಕಸ ವಿಲೇವಾರಿಯಾಗದೇ ಗಬ್ಬುನಾರುತ್ತಿದೆ. ಬಸ್ ನಿಲ್ದಾಣದಲ್ಲಿ ಯಾವುದೇ ಬಸ್ ನಿಲ್ಲಿಸುತ್ತಿಲ್ಲ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಬಸ್ ನಿಲ್ದಾಣವನ್ನು ಸರಿಪಡಿಸಲು ಮುಂದಾಗಬೇಕು.
ಗುರು ವಾಲಿ, ಗ್ರಾಮ ಪಂಚಾಯತ ಉಪಾಧ್ಯಕ್ಷ
ಸತ್ತಿಗೇರಿ ಗ್ರಾಮದ ಬಸ್ ನಿಲ್ದಾಣದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಶೀಘ್ರವೇ ಸಿಬ್ಬಂದಿ ನಿಯೋಜನೆ ಮಾಡಲಾಗುವುದು.
ದೀಪಿಕ ಜಾಧವ,
ಡಿಪೋ ಮ್ಯಾನೇಜರ್, ಸವದತ್ತಿ