ಬೈಲಹೊಂಗಲ

247 ಕೋಟಿ ರೂ. ಯೋಜನೆಗಳು ಪ್ರಗತಿಯಲ್ಲಿ

247 ಕೋಟಿ ರೂ. ಯೋಜನೆಗಳು ಪ್ರಗತಿಯಲ್ಲಿ

ಶಾಸಕ ಮಹಾಂತೇಶ ಕೌಜಲಗಿ ಹೇಳಿಕೆ | ಸಂಗೊಳ್ಳಿ ರಾಯಣ್ಣ ಉತ್ಸವ-2021 ಕಾರ್ಯಕ್ರಮ 

ಬೈಲಹೊಂಗಲ 12 : ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಬಲಿದಾನಗೈದ ವೀರರ ಸ್ಮರಣೆ ಇಂದು ಅತ್ಯವಶ್ಯವಾಗಿದ್ದು, ಸಂಗೊಳ್ಳಿ ರಾಯಣ್ಣನ ಇತಿಹಾಸ ಸಾರುವ ನಿಟ್ಟಿನಲ್ಲಿ 247 ಕೋಟಿ ರೂ. ಯೋಜನೆಗಳು ಪ್ರಗತಿಯಲ್ಲಿವೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಮಂಗಳವಾರ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2021 ಕಾರ್ಯಕ್ರಮದಲ್ಲಿ ರಾಯಣ್ಣನ ಸಮಾಧಿಯ ಪುಣ್ಯಭೂಮಿ ನಂದಗಡದಿಂದ ಆಗಮಿಸಿದ ಜ್ಯೋತಿ ಭರಮಾಡಿಕೊಂಡು, ರಾಕ್ ಗಾರ್ಡನ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದರು.

ಈಗಾಗಲೇ ಸಂಗೊಳ್ಳಿಯಲ್ಲಿ 100 ಏಕರೆ ಪ್ರದೇಶದಲ್ಲಿ 165 ಕೋಟಿ ರೂ.ದಲ್ಲಿ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಸೈನಿಕ ಶಾಲೆ ನಿರ್ಮಾಣದ ಕಾರ್ಯ ಪ್ರಗತಿ ಹಂತದಲ್ಲಿದ್ದು, ಮುಂದಿನ ವರ್ಷ ಲೋಕಾರ್ಪಣೆಗೊಳ್ಳಲಿದೆ.. 15 ಏಕರೆ ಜಾಗೆಯಲ್ಲಿ 12 ಕೋಟಿ ರೂ.ಗಳಲ್ಲಿ ರಾಕ್ ಗಾರ್ಡನ್ ನಿರ್ಮಾಣ ಕಿತ್ತೂರು ಚನ್ನಮ್ಮ, ರಾಯಣ್ಣ ಅವರ ಬಾಲ್ಯ, ಯವ್ವನ, ಹೋರಾಟ, ಬ್ರಿಟೀಷರ ಜೊತೆಗೆ ಯುದ್ದ ಮಾಡಿದ ಸನ್ನೀವೇಶದ ಚಿತ್ರಣಗಳ ವೈಭವ ಮೂಡಿಬರಲಿದೆ. 70 ಕೋಟಿ ರೂ.ವೆಚ್ಚದಲ್ಲಿ ನಂದಗಡದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಅಂತರಾಷ್ಟ್ರೀಯ ಮಟ್ಟದ ರಾಯಣ್ಣನ ಇತಿಹಾಸವನ್ನು ಬಿಂಬಿಸುವ ಮ್ಯೂಜಿಯಂಗಳನ್ನು ಶೀಘ್ರದಲ್ಲಿ ಜನತೆಗೆ ಮುಟ್ಟಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಮಾತನಾಡಿದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಕಿತ್ತೂರು ಸಾಮ್ರಾಜ್ಯದ ಕೀರ್ತಿಯನ್ನು ಬೆಳಗಿಸುವಲ್ಲಿ ಸಂಗೊಳ್ಳಿ ರಾಯಣ್ಣ ಅವರು ಕೊಡುಗೆ ಅಪಾರವಾಗಿದೆ ಎಂದರು. 

ಸಂಗೊಳ್ಳಿಯ ಗುರು ಸಿದ್ಧಲಿಂಗೇಶ್ವರ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಸಂಗೊಳ್ಳಿ ರಾಯಣ್ಣ ಅಭಿವೃದ್ದಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟ, ಜಿಪಂ ಸದಸ್ಯರಾದ ಶಂಕರ ಮಾಡಲಗಿ, ಅನಿಲ ಮೇಕಲಮರಡಿ, ತಾಪಂ ಸದಸ್ಯರಾದ ಗೌಸಸಾಬ ಬುಡ್ಡೆಮುಲ್ಲಾ, ಎಸಿ ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ ಡಾ.ದೊಡ್ಡಪ್ಪ ಹೂಗಾರ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ತಾಪಂ ಇಓ ಸುಭಾಷ ಸಂಪಗಾಂವಿ, ಸಮಾಜ ಕಲ್ಯಾಣ ಮಹೇಶ ಉಣ್ಣಿ, ಸಿಡಿಪಿಓ ಮಹಾಂತೇಶ ಭಜಂತ್ರಿ, ಸಹಾಯಕ ಕೃಷಿ ನಿರ್ದೇಶಕಿ ಪ್ರತಿಭಾ ಹೂಗಾರ ಬಿಇಓ ಗುರುನಾಥ ಹೂಗಾರ, ತಾಲೂಕಾ ಆರೋಗ್ಯ ಅಧಿಕಾರಿ ಎಸ್.ಎಸ್. ಸಿದ್ದನ್ನವರ ಉಪಸ್ಥಿತರಿದ್ದರು.

ಸುದ್ದಿ ಓದಿ