ಸುರಕ್ಷಿತ ಮಧ್ಯೆ ಎಸ್ಎಸ್ಎಲ್ಸಿ ಪರೀಕ್ಷೆ ಯಶಸ್ವಿ
ಬ್ಯಾಡಗಿ 20: ಮೊದಲ ದಿನ ನಿರಾತಂಕವಾಗಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಸುರಕ್ಷಿತ ವಾತಾವರಣದಲ್ಲಿ ಅತ್ಯಂತ ಉತ್ಸಾಹ ಮತ್ತು ಲವಲವಿಕೆಯಿಂದ ಬರೆದಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಕೆ.ರುದ್ರಮುನಿ ತಿಳಿಸಿದ್ದಾರೆ. ನಿನ್ನೆ ಪರೀಕ್ಷೆಗಳು ಮುಗಿದ ನಂತರ ಮಾತನಾಡಿದ ಅವರು, ಎಲ್ಲರ ಸಹಕಾರದೊಂದಿಗೆ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಾವುದೇ ಆತಂಕವಿಲ್ಲದೆ ಸುರಕ್ಷಿತವಾಗಿ ಬರೆದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಇಂದು ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿಯನ್ನು ಹೊರತುಪಡಿಸಿ ಎಲ್ಲಾ ವಿದ್ಯಾರ್ಥಿಗಳು ಹಾಜರಾಗಿದ್ದರು. ಪುರಸಭೆ ಮತ್ತು ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಬಿಸ್ಕಿಟ್ ಮತ್ತು ಬಾಳೆಹಣ್ಣನ್ನು ವಿತರಿಸಲಾಗಿತ್ತು.ಇಂದಿನ ಪರೀಕ್ಷೆಗಳು ನಿರಾತಂಕವಾಗಿ ನಡೆಯಲು ತಾಲೂಕಾ ಆಡಳಿತ ಹಾಗೂ ಮಾಧ್ಯಮದ ಪರಿಶ್ರಮ ಪರಿಣಾಮಕಾರಿಯಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತ್ಮಸ್ಥೈರ್ಯವನ್ನು ತುಂಬಿ ಪರೀಕ್ಷಾ ಸಿದ್ಧತೆಗೆ ಯಶಸ್ಸನ್ನು ನೀಡಿದಂತಾಗಿತ್ತು. ಗುರುವಾರವೂ ಸಹ ಎರಡನೇ (ದಿ.22) ದಿನದ ಪರೀಕ್ಷಾ ಕಾರ್ಯ ನಡೆಯಲಿದ್ದು, ಎಲ್ಲರೂ ಮತ್ತೊಮ್ಮೆ ಹೆಚ್ಚಿನ ಸಹಕಾರವನ್ನು ನೀಡುವ ಮೂಲಕ ಎಲ್ಲ ವಿದ್ಯಾರ್ಥಿಗಳೂ ಪರೀಕ್ಷೆಯನ್ನು ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.ಶಾಸಕರ ಭೇಟಿ..!!ಸೋಮವಾರ ತಾಲೂಕಿನಾದ್ಯಂತ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಆಯಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರು ವಿದ್ಯಾರ್ಥಿಗಳು ಯಾವುದೇ ಆತಂಕ ಪಡದೇ ನಿರ್ಭಯವಾಗಿ ಪರೀಕ್ಷೆಯನ್ನು ಬರೆದು ಯಶಸ್ಸನ್ನು ಸಾಧಿಸಲು ಪ್ರೋತ್ಸಾಹಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ರವಿಕುಮಾರ ಕೊರವರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಎನ್.ತಿಮ್ಮಾರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಕೆ. ರುದ್ರಮೂರ್ತಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಫ್.ಬಾರ್ಕಿ, ಪಿಎಸ್’ಐ ಮಹಾಂತೇಶ್, ಸುರೇಶ ಯತ್ನಳ್ಳಿ, ಸುರೇಶ ಉದ್ಯೋಗಣ್ಣನವರ, ಜಿತೇಂದ್ರ ಸುಣಗಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.