ಮಾರುಕಟ್ಟೆ ಗಿಜಿಗುಡುವಾಗ ಚಿತ್ರಮಂದಿರವೇಕೆ ಖಾಲಿಯಿರಬೇಕು? ಸರ್ಕಾರಕ್ಕೆ ಸ್ಯಾಂಡಲ್ ವುಡ್ ಪ್ರಶ್ನೆ
ಬೆಂಗಳೂರು, ಫೆ 03: “ಬಸ್ ಫುಲ್ ಫುಲ್, ಮಾರ್ಕೆಟ್ ಗಿಜಿ ಗಿಜಿ ಆದರೆ ಚಿತ್ರ ಮಂದಿರಗಳೇಕೆ ಬಣಗುಡಬೇಕು” ಎಂದು ನಟ ಧ್ರುವ ಸರ್ಜಾ ಟ್ವೀಟ್ ಗೆ ಸ್ಯಾಂಡಲ್ ವುಡ್ ನ ಬಹುತೇಕ ನಟ, ನಿರ್ದೇಶಕರು ಬೆಂಬಲ ನೀಡಿದ್ದಾರೆ.ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಿರುವಾಗ ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಮಾತ್ರ ಪ್ರೇಕ್ಷಕರಿಗೆ ಅವಕಾಶ ನೀಡಿರುವ ಸರ್ಕಾರದ ನಿಲುವಿಗೆ ಸ್ಯಾಂಡಲ್ ವುಡ್ ಬೇಸರ ವ್ಯಕ್ತಪಡಿಸಿದೆ. ನೆರೆಯ ರಾಜ್ಯಗಳಲ್ಲಿ ಚಿತ್ರಮಂದಿರಗಳಲ್ಲಿ ನೂರಕ್ಕೆ ನೂರರಷ್ಟು ಭರ್ತಿಗೆ ಅವಕಾಶವಿರುವಾಗ ರಾಜ್ಯದಲ್ಲೇಕೆ ಈ ಬಗೆಯ ನೀತಿ ಎಂದು ಪ್ರಶ್ನಿಸಿದೆ. ಥಿಯೇಟರ್ ಗಳಲ್ಲಿ ಪ್ರೇಕ್ಷಕರ ಚಪ್ಪಾಳೆ, ಶಿಳ್ಳೆ ಹಿಂದಿನಂತೆ ಕೇಳಿಬರಬೇಕು. ಇದಕ್ಕಾಗಿ ಕೇಂದ್ರ ಸರ್ಕಾರದ ಕೊರೋನಾ ನಿಯಮಾವಳಿಯನ್ನು ಖಂಡಿತಾ ಅನುಸರಿಸಲಾಗುತ್ತದೆ ಎಂದು ‘ಪೊಗರು’ ನಿರ್ದೇಶಕ ನಂದಕಿಶೋರ್ ಸೇರಿದಂತೆ ಹಲವು ನಟರು, ನಿರ್ದೇಶಕರು ಹೇಳಿದ್ದಾರೆ.
ನಿರ್ಮಾಪಕರು ಹಾಕಿರುವ ಹಣ ವಾಪಸ್ ಬರಬೇಕಿದ್ದರೆ ಚಿತ್ರಮಂದಿರ ಭರ್ತಿಯಾಗಬೇಕು. ಕೊರೋನಾ ಲಾಕ್ ಡೌನ್ ಸಡಿಲಿಕೆಯ ಬಳಿಕ ಬಸ್ ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ದೈಹಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಯಾವ ನಿಯಮವನ್ನೂ ಪಾಲಿಸಲಾಗುತ್ತಿಲ್ಲ. ಹೀಗಿರುವಾಗ ಚಿತ್ರಮಂದಿರಗಳಲ್ಲಿಯೂ ಶೇಕಡ 100ರಷ್ಟು ಭರ್ತಿಗೆ ಅವಕಾಶ ನೀಡಬೇಕು ಎಂದು ನಟ ಧ್ರುವ ಸರ್ಜಾ ಇಂದು ಬೆಳಗ್ಗೆ ಟ್ವೀಟ್ ಮಾಡಿದ ಬೆನ್ನಲ್ಲೇ ನಟರುಗಳಾದ ಡಾಲಿ ಧನಂಜಯ್, ದುನಿಯಾ ವಿಜಯ್ ಸೇರಿದಂತೆ ಹಲವರು ಸಾಥ್ ನೀಡಿ ದನಿಯೆತ್ತಿದ್ದಾರೆ.ಏತನ್ಮಧ್ಯೆ ಚಿತ್ರಮಂದಿಗಳಲ್ಲಿ ಶೇಕಡ 100ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡುವಂತೆ ಕೋರಿ, ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಜೈರಾಜ್ ಅವರು ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.