ಮನರಂಜನೆ

ರೋಮ್‌ನಲ್ಲಿ ‘ರಾಮಾಯಣ’ ವಿಶೇಷ ಪ್ರದರ್ಶನಕ್ಕೆ ಕಾರ್ಡಿನಲ್ ಟರ್ಕ್ಸನ್ ಮೆಚ್ಚುಗೆ

ರೋಮ್‌ನಲ್ಲಿ ‘ರಾಮಾಯಣ’ ವಿಶೇಷ ಪ್ರದರ್ಶನಕ್ಕೆ ಕಾರ್ಡಿನಲ್ ಟರ್ಕ್ಸನ್ ಮೆಚ್ಚುಗೆ

ರೋಮ್, ನ. 23 : ಭಾರತೀಯ ಮಹಾಕಾವ್ಯವನ್ನು ಆಧರಿಸಿ ನಮಿತ್ ಮಲ್ಹೋತ್ರಾ ನಿರ್ಮಿಸಿರುವ ‘ರಾಮಾಯಣ’ ಚಿತ್ರದ ವಿಶೇಷ ಪ್ರದರ್ಶನ ರೋಮ್‌ನಲ್ಲಿ ನಡೆಯಿತು. ಚಿತ್ರವನ್ನು ವೀಕ್ಷಿಸಿದ ಕಾರ್ಡಿನಲ್ ಪೀಟರ್ ಕೊಡ್ವೋ ಟರ್ಕ್ಸನ್ ಮೆಚ್ಚುಗೆ ವ್ಯಕ್ತಪಡಿಸಿ, ರಾಮಾಯಣದ ಕಥೆಗೂ ಬೈಬಲ್‌ನ ಕಥೆಗಳಿಗೂ ಇರುವ ಸಾಮ್ಯಗಳನ್ನು ವಿವರಿಸಿದರು.

ಪಾಂಟಿಫಿಕಲ್ ವಿಜ್ಞಾನ ಅಕಾಡೆಮಿಯ ಚಾನ್ಸಲರ್ ಆಗಿರುವ ಟರ್ಕ್ಸನ್, ಪ್ರೀತಿ, ದ್ರೋಹ ಮತ್ತು ಸಹೋದರ ಬಾಂಧವ್ಯದಂತಹ ವಿಷಯಗಳು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗಳ ಕಥೆಗಳಲ್ಲಿ ಕಂಡುಬರುತ್ತವೆ ಎಂದರು. ಮಹಾಕಾವ್ಯದ ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳು ವಿಶ್ವದಾದ್ಯಂತ ಪ್ರೇಕ್ಷಕರ ಮನಸೆಳೆಯಬಲ್ಲವು ಎಂದು ಅವರು ಅಭಿಪ್ರಾಯಪಟ್ಟರು.

ರಾಮ–ಲಕ್ಷ್ಮಣರ ಸಹೋದರ ಬಾಂಧವ್ಯ ಹಾಗೂ ರಾಮ–ಸೀತೆಯರ ನಡುವಿನ ಸಂಬಂಧವನ್ನು ಚಿತ್ರದಲ್ಲಿ ಮೂಡಿಸಿರುವ ರೀತಿಯನ್ನು ಟರ್ಕ್ಸನ್ ವಿಶೇಷವಾಗಿ ಪ್ರಶಂಸಿಸಿದರು. ಯುದ್ಧದ ದೃಶ್ಯಗಳು, ಸಂಗೀತ, ಧ್ವನಿ ವಿನ್ಯಾಸ, ದೃಶ್ಯ ಪರಿಣಾಮಗಳು ಮತ್ತು ಛಾಯಾಗ್ರಹಣಕ್ಕೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವ್ಯಾಟಿಕನ್ ಮತ್ತು ಕ್ಯಾಥೊಲಿಕ್ ಚರ್ಚ್‌ನ ಪ್ರತಿನಿಧಿಗಳಿಗಾಗಿ ಆಯೋಜಿಸಿದ್ದ ಈ ಪ್ರದರ್ಶನದಲ್ಲಿ ಪಾಂಟಿಫಿಕಲ್ ವಿಜ್ಞಾನ ಅಕಾಡೆಮಿಯ ಅಧಿಕಾರಿಗಳು ಹಾಗೂ ಹೋಲಿ ಸೀಗೆ ಘಾನಾದ ರಾಯಭಾರಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಸೀತೆಯ ಅಪಹರಣದೊಂದಿಗೆ ಚಿತ್ರದ ಮೊದಲ ಭಾಗ ಮುಕ್ತಾಯಗೊಳ್ಳುತ್ತದೆ. ಮುಂದಿನ ಭಾಗದಲ್ಲಿ ಸೀತೆಯನ್ನು ರಕ್ಷಿಸಲು ರಾಮ ನಡೆಸುವ ಹೋರಾಟವನ್ನು ಚಿತ್ರಿಸುವ ನಿರೀಕ್ಷೆಯಿದೆ.

ಸುದ್ದಿ ಓದಿ