ಗ್ರಾಮೀಣ ಪ್ರತಿಭೆ, ರಾಜ್ಯಕ್ಕೆ ಪ್ರಥಮ,
ತಾಳಿಕೋಟೆ 10: ಆನ್ಲೈನ್ ತರಗತಿಗಳಿಂದ ಮಕ್ಕಳಿಗೆ ಮೊಬೈಲ್ ಹುಚ್ಚು ಅಂಟಿಕೊಳ್ಳುತ್ತದೆ ಎನ್ನುವ ಕಾಲಗಟ್ಟದಲ್ಲಿ ಆನ್ಲೈನ ತರಗತಿಗಳನ್ನೇ ಬಳಸಿಕೊಂಡು ಶ್ರದ್ದೆಯಿಂದ ಓದಿದ ತಾಲೂಕಿನ ಮೈಲೇಶ್ವರ ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಪಟ್ಟಣದ ಆಕರ್ಷಸಂಜಯ ಹಣಮಂತ್ರಾಯ ಕರೇಕಲ್ಲ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಆನ್ಲೈನ ತರಗತಿಗಳು ಶಾಪವಾಗುವದಿಲ್ಲ ಎನ್ನುವದನ್ನು ಸಾಧಿಸಿ ತೋರಿಸಿದ್ದಾನೆ.
ಕರೋನಾದಿಂದ ಶೈಕ್ಷಣಿಕ ಗುಣಮಟ್ಟ ಕುಸಿದೇ ಹೋಗಿದೆ, ಮಕ್ಕಳು ಓದುತ್ತಿಲ್ಲ, ಆನ್ ಲೈನ್ ತರಗತಿ ತುಂಬಾ ಬೋರು, ಗ್ರಾಮೀಣ ಮಕ್ಕಳು ಎಂಬಿತ್ಯಾದಿಯಾದ ವಿಚಾರಗಳನ್ನು ಹಿಂದಿಕ್ಕಿ 625 ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಆನ್ಲೈನ್ ಕ್ಲಾಸ್ಗಳು ಮುನ್ನಲೆಗೆ ಬಂದಿದ್ದೆ ಕೊರೊನಾ ಕಾಲಗಟ್ಟದಲ್ಲಿ, ಆದರೆ ಸುಮಾರು ನಾಲ್ಕೈದು ವರ್ಷಗಳಿಂದ ಆನ್ಲೈನ್ ತರಗತಿ, ಸಿಡಿ ಆಧಾರಿತ ಕ್ಲಾಸ್ಗಳ ಅಧ್ಯಯನ ಮಾಡುತ್ತಾ ಅಭ್ಯಾಸ ಮಾಡುತ್ತಿದ್ದರಿಂದ ಆನ್ಲೈನ ಕ್ಲಾಸ್ಗೆ ಅತಿ ಬೇಗ ಆಕರ್ಷಸಂಜಯ ಹೊಂದಿಕೊಂಡನು. ಕೊರೊನಾ ಅಲೆಯಿಂದಾಗಿ ಶಾಲೆಯಲ್ಲಿ ತರಗತಿಗಳು ನಡೆದಿದ್ದೇ ನಾಲ್ಕು ತಿಂಗಳು ಮಾತ್ರ. ನಂತರ ನಡೆಯುತ್ತಿರುವ ಆನ್ಲೈನ್ ತರಗತಿಗಳ ಲಾಭವನ್ನು ಪಡೆದು ತಮ್ಮ ಶಾಲೆಯ ಜೊತೆಗೆ ಬೇರೆ ಶಾಲೆಯ ಆನ್ಲೈನ್ ತರಗತಿಗಳಿಗೂ ಸಹ ಹಾಜರಾಗಿ ಶಿಸ್ತಿನಿಂದ ಅಭ್ಯಾಸ ಮಾಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.
ಸರಕಾರಿ ಪ್ರೌಢ ಶಾಲೆಯ ಶಿಕ್ಷಕರಾಗಿರುವ ಹಣಮಂತ್ರಾಯ ಕರೇಕಲ್ಲ ಹಾಗೂ ತಾಯಿ ಗೀರೀಜಾ ಕರೇಕಲ್ಲ ದಂಪತಿಗಳ ಸುಪುತ್ರನಾಗಿರುವ ಆಕರ್ಷಸಂಜಯ ಓದಿನಲ್ಲಿ ಶಿಸ್ತು ಮೂಡಿಸಲು ತಂದೆ-ತಾಯಿ ಪಟ್ಟ ಶ್ರಮ ಬಹಳಷ್ಟಿದೆ. ಬೆಳಿಗ್ಗೆ 5 ಗಂಟೆಗೆ ಏಳುವುದು, ರಾತ್ರಿ 10:30 ಮಲಗುವುದು, ಸತತ ಅಧ್ಯಯನ, ಗೊಂದಲವಿಲ್ಲದ ನಿರಮ್ಮಳ ಕಲಿಕೆ ನನ್ನ ರೂಢಿಯಾಗಿತ್ತು. ಹಳೆ ಹಾಗೂ ಬದಲಾದ ಹೊಸ ಮಾದರಿಯ ಪರೀಕ್ಷಾ ಪದ್ದತಿಯಲ್ಲೂ ಈ ಪ್ರಥಮ ಸ್ಥಾನ ಪಡೆಯವ ಆಕಾಂಕ್ಷೆ ನನ್ನದಾಗಿತ್ತು ಇದಕ್ಕೆ ನನ್ನ ತಂದೆ ತಾಯಿಯರ ಪರಿಶ್ರಮ ಸಾಕಷ್ಟಿದೆ. ಏನನ್ನು? ಹೇಗೆ? ಎಷ್ಟು ಸಮಯ ಓದಬೇಕು ಎಂಬುದಕ್ಕೆ ತಂದೆತಾಯಿಗಳು ಗುರುವಿನ ಸ್ಥಾನದಲ್ಲಿ ನಿಂತು ನನ್ನನ್ನು ಸಿದ್ಧಗೊಳಿಸಿದ್ದಾರೆ. ನನ್ನನ್ನು ಓದಲು ಹಚ್ಚಿ, ತಾವು ಸಹ ಓದುತ್ತ ಕುಳಿತು, ನನಗೆ ಜೋಡಿಯಾಗಿ ಆತ್ಮಸ್ಥೈರ್ಯ ತುಂಬಿದ ಪರಿಗೆ ನಾನು ಯಾವತ್ತು ಋಣಿಯಾಗಿರುವೆ ಎಂದು ಆಕರ್ಷಸಂಜಯ ತಿಳಿಸಿದರು.