ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಿ: ಯೋಗಾನಂದ ಶ್ರೀ
ಬ್ಯಾಡಗಿ 14: ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸುವಂತಾಗಬೇಕೆಂಬ ಸದುದ್ದೇಶದಿಂದ ಸ್ವಸಹಾಯ ಸಂಘಗಳ ರಚನೆಗೆ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಂದಾಗಿದೆ ಎಂದು ಯಳವತ್ತಿ ಮಠದ ಯೋಗಾನಂದ ಶ್ರೀಗಳು ಹೇಳಿದರು.
ತಾಲೂಕಿನ ಚಿಕ್ಕಳ್ಳಿ ಮತ್ತು ಹಿರೇಹಳ್ಳಿ ಗ್ರಾಮಗಳಲ್ಲಿ ಸುಕ್ಷೇತ್ರ ಪುಷ್ಪಗಿರಿ ಸಂಸ್ಥಾನ ಮಠದ 10ನೇ ವರ್ಷದ ಪಟ್ಟಾಧಿಕಾರದ ಸವಿನೆನಪಿಗಾಗಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೂಲಕ ಮಹಿಳಾ ಸ್ವಸಹಾಯ ಸಂಘಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ 20 ರೈತ ಮಹಿಳೆಯರನ್ನು ಒಳಗೊಂಡ ಸದಸ್ಯರ ಸಂಘಗಳನ್ನು ಪ್ರತಿ ಗ್ರಾಮದಲ್ಲಿ ಅಸ್ತಿತ್ವಕ್ಕೆ ತರುವ ಮೂಲಕ ಜನರಿಗೆ ಆರ್ಥಿಕ ಸಬಲತೆ, ಆರೋಗ್ಯ, ಶೈಕ್ಷಣಿಕ, ಪರಿಸರ ರಕ್ಷಣೆ ಸೇರಿದಂತೆ ಸಾವಯವ ಕೃಷಿಗೆ ಒತ್ತು ನೀಡುವ ದೇಸಿ ತಳಿಯ ಜಾನುವಾರು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಹಲವಾರು ಯೊಜನೆಗಳನ್ನು ಒಂದೇ ಸೂರಿನಲ್ಲಿ ತರುವ ಯೋಜನೆಯನ್ನು ಹಾಸನ ಜಿಲ್ಲೆಯ ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮಿಜಿಗಳು ಕೈಗೊಂಡಿದೆ. ಹಾವೇರಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಬ್ಯಾಡಗಿ ತಾಲೂಕಿನಲ್ಲಿ ಸ್ವಸಹಾಯ ಸಂಘಗಳ ರಚನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸ್ವಸಹಾಯ ಸಂಘಗಳನ್ನು ರಚಿಸಿದ ಸಂದರ್ಭದಲ್ಲಿ ಪ್ರತಿ ಸಂಘಕ್ಕೆ ತಲಾ ಐದು ಸಾವಿರ ರೂ.ಗಳ ವೆಚ್ಚದಲ್ಲಿ ಬುಕ್, ಬ್ಯಾಡ್ಜ್, ಇತರ ಪರಿಕರಗಳನ್ನು ಮಠದ ಸಂಸ್ಥೆಯ ವತಿಯಿಂದ ನೀಡಲಾಗುವುದು. 10 ಸಾವಿರ ರೂ.ಗಳ ಸಹಾಯ ಧನ ನೀಡಲಿದ್ದು, ಇದಕ್ಕೆ ಯಾವುದೇ ಬಡ್ಡಿ ನೀಡಬೇಕಿಲ್ಲ. ಗ್ರಾಮೀಣ ಪ್ರದೇಶದಲ್ಲಿ ರಚಿಸುತ್ತಿರುವ ಸ್ವಸಹಾಯ ಸಂಘಗಳಲ್ಲಿ ಯಾವುದೇ ಜನಾಂಗದವರು ಸಹ ಜಾತಿ ಭೇದವಿಲ್ಲದೆ ಸಹ ಪಾಲ್ಗೊಂಡು ಸಂಘದ ಸಹಾಯ ಪಡೆಯಬಹುದಾಗಿದೆ ಎಂದು ತಿಳಿಸಿದರು. ಸಂಸ್ಥೆಯ ಜಿಲ್ಲಾ ನಿರ್ದೇಶಕ ನಾಗಯ್ಯ ಅಡ್ಮನಿ ಪುಷ್ಪಗಿರಿ ಸಂಸ್ಥಾನದ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಭಿವೃದ್ಧಿಯ ಕುರಿತು ಸಂಕ್ಷಿಪ್ತ ಪರಿಚಯವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರೇಹಳ್ಳಿ ಗ್ರಾಪಂ ಅಧ್ಯಕ್ಷ ಮಲ್ಲನಗೌಡ್ರ ಚಿಕ್ಕಳ್ಳಿ, ವೀರಪ್ಪ ದೊಡ್ಡಬಸನಗೌಡರ, ಗಣೇಶಪ್ಪ ಚಿಕ್ಕಳ್ಳಿ, ಈರಪ್ಪ ಬಣಕಾರ, ಬಿ.ಎಂ. ಗೌರಾಪುರ ಹಾಗೂ ಸದಸ್ಯರು ದೇವಸ್ಥಾನ ಸಮಿತಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.