ತಾಳಿಕೋಟಿ

ಮೂಕಿಹಾಳ ತಾಳಿಕೋಟೆ ರಸ್ತೆ ನಿರ್ಮಾಣಕ್ಕೆ 9 ಕೋಟಿ ಮಂಜೂರು

ಮೂಕಿಹಾಳ ತಾಳಿಕೋಟೆ ರಸ್ತೆ ನಿರ್ಮಾಣಕ್ಕೆ 9 ಕೋಟಿ ಮಂಜೂರು

ತಾಳಿಕೋಟೆ22: ಹಡಗಿನಾಳ ರಸ್ತೆಯಲ್ಲಿ ಡೋಣಿ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿಯನ್ನು 15 ದಿನಗಳಲ್ಲಿ ಮುಕ್ತಾಯಗೊಳಿಸಿ ಸಾರ್ವಜನಿಕರಿಗೆ ಸಂಚಾರಕ್ಕೆ ಅನಕೂಲ ಕಲ್ಪಿಸಬೇಕು ಎಂದು ಮುದ್ದೇಬಿಹಾಳ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದರು. 

ಅವರು ಪಟ್ಟಣದಿಂದ ಹಡಗಿನಾಳಕ್ಕೆ ಸಂಪರ್ಕ ಕಲ್ಪಿಸುವ ಡೋಣಿ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ವಿಕ್ಷಣೆ ಮಾಡಿ ಮಾತನಾಡಿದರು. 

ಈಗಾಗಲೇ ಡೋಣಿ ನದಿ ಸೇತುವೆ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಮಳೆಗಾಲ ಆರಂಭವಾದರೆ ಡೋಣಿ ನದಿಗೆ ಪ್ರವಾಹ ಬರುತ್ತದೆ. ಇದರಿಂದ ಹಡಗಿನಾಳ, ಕಲ್ಲದೇವನಹಳ್ಳಿ, ಮೂಕಿಹಾಳ, ಹರನಾಳ, ನಾಗೂರ ಗ್ರಾಮಗಳಿಗೆ ಹೋಗಲು ತೊಂದರೆ ಆಗುತ್ತದೆ. ಇದಲ್ಲದೇ ಬಿಜಾಪೂರ ರಾಜ್ಯ ಹೆದ್ದಾರಿಯಲ್ಲಿರುವ ಡೋಣಿ ಸೇತುವೆ ಶಿಥಲವಾಗಿದ್ದರಿಂದ ಪ್ರವಾಹ ಹೆಚ್ಚಾದರೆ ರಸ್ತೆ ಬಂದ್ ಆಗಲಿದೆ. ಇದರಿಂದ ಮಳೆಗಾಲ ಆರಂಭವಾಗಿ ಡೋಣಿ ನದಿಗೆ ಪ್ರವಾಹ ಬರುವದರೊಳಗೆ ರಸ್ತೆ ಸೇತುವೆ ಕಾಮಗಾರಿ ಮುಕ್ತಾಯಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೇವಲ ಅವಸರದಲ್ಲಿ ಕಾಮಗಾರಿ ಮಾಡಿದರೂ ಸಹಿತ ಎಂತಹ ಪ್ರವಾಹ ಬಂದರೂ ಜಗ್ಗದ ಹಾಗೆ ಸೇತುವೆ ಸುತ್ತಲೂ ಪಿಚಿಂಗ್ ಮಾಡಬೇಕು. ಸೇತುವೆ ಕಾಮಗಾರಿಗಾಗಿ ವಶಪಡಿಸಿಕೊಂಡ ಭೂಮಿಯ ರೈತರಿಗೆ ಸೂಕ್ತವಾದ ಪರಿಹಾರವನ್ನು ನೀಡಬೇಕು. ಡೋಣಿ ನದಿಯಲ್ಲಿರುವ ಮುಳ್ಳು ಕಂಠಿಗಳನ್ನು ತೆಗೆದರೆ ಸೇತುವೆ ಪಕ್ಕದ ಜಮೀನು ಮಾಲಿಕರಿಗೆ ತೊಂದರೆಯಾಗುವದು ತಪ್ಪುತ್ತದೆ. ಹಿಗಾಗಿ ಮುಳ್ಳು ಕಂಠಿಗಳನ್ನು ತೆಗೆಯಲು ಹೇಳಿದರು. ತಾಳಿಕೋಟೆಯಿಂದ ಹಡಗಿನಾಳ, ಮೂಕಿಹಾಳ ರಸ್ತೆ ನಿಮಾಣಕ್ಕೆ 9 ಕೋಟಿ ಮಂಜೂರು ಆಗಿದ್ದು ಟೆಂಡರ್ ಪ್ರಕೀಯೆಗಳು ಆರಂಭವಾಗಿವೆ. ಈ ರಸ್ತೆ ಕಾಮಗಾರಿಯಿಂದ ಮುದ್ದೇಬಿಹಾಳ, ಬಾಗಲಕೋಟೆ, ಇಲಕಲ್ಲಗೆ ಹೋಗಲು ಸುಮಾರು 10 ಕೀಮಿ ಉಳಿತಾಯ ಆಗಲಿದೆ ಎಂದರು. 

ಈ ಸಂದರ್ಭದಲ್ಲಿ ಕೆಆರ್‌ಡಿಸಿಎಲ್‌ನ ಸಹಾಯಕ ಕಾರ್ಯನಿವಾರ್ಹಕ ಅಭಿಯಂತರ ಎಸ್‌ಜಿ.ಪಾಟೀಲ, ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ನಿಂಗರಾಜ ಕುಂಟೋಜಿ, ಜೈಸಿಂಗ ಮೂಲಿಮನಿ, ಮುದಕಪ್ಪ ಬಡಿಗೇರ, ರಾಘವೇಂದ್ರ ವಿಜಾಪೂರ, ಶರಣು ಗೋಟಖಂಡಗಕಿ, ಶಿವಶಂಕರ ಹಿರೇಮಠ, ಈಶ್ವರ ಹೂಗಾರ, ಬಸವರಾಜ ಕಶೇಟ್ಟಿ, ಸಾಗರ ಕಟ್ಟಿಮನಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ