ಕಾರವಾರ

ಕ್ಷೇತ್ರದ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದ ರೂಪಾಲಿ ಎಸ್.ನಾಯ್ಕ

ಕ್ಷೇತ್ರದ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದ  ರೂಪಾಲಿ ಎಸ್.ನಾಯ್ಕ

ಮರಳು ಗಣಿಗಾರಿಕೆ, ನಗರೋತ್ಥಾನದಲ್ಲಿ ಹಣ ಬಿಡುಗಡೆ ಮುಖ್ಯಮಂತ್ರಿ ಭರವಸೆ ;

ಕಾರವಾರ 26: ಕಾಳಿ ನದಿಯಲ್ಲಿ ಮರಳು ಗಣಿಗಾರಿಕೆಗೆ ಇರುವ ನಿಷೇಧ ಸಮಸ್ಯೆ ನಿವಾರಣೆ ಹಾಗೂ ನಗರೋತ್ಥಾನ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,  ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ  ರೂಪಾಲಿ ಎಸ್.ನಾಯ್ಕ ಅವರಿಗೆ ಭರವಸೆ ನೀಡಿದ್ದಾರೆ. 

ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು  ಶಾಸಕರ ಜತೆ ನಡೆಸಿದ ಸಭೆಯ ಸಂದರ್ಭದಲ್ಲಿ ಶಾಸಕಿ ರೂಪಾಲಿ ಎಸ್.ನಾಯ್ಕ ಕ್ಷೇತ್ರದ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. 

ಕಾಳಿ ನದಿಯಲ್ಲಿ ವಿವಿಧ ಕಾರಣಗಳಿಂದ ಮರಳು ಗಣಿಗಾರಿಕೆ ನಡೆಯುತ್ತಿಲ್ಲ. ಇದರಿಂದ ನಿರ್ಮಾಣ ಕಾಮಗಾರಿಗಳಿಗೆ ಸಮಸ್ಯೆ ಉಂಟಾಗಿದೆ. ಪ್ರವಾಹ ಬಂದಿದ್ದರಿಂದ ಮರಳಿನ ದಿಬ್ಬಗಳೂ ಹೆಚ್ಚು ನಿರ್ಮಾಣವಾಗಿವೆ. ಅಲ್ಲಿ ಮರಳು ಗಣಿಗಾರಿಕೆಗೆ ಇರುವ ತೊಡಕುಗಳನ್ನು ನಿವಾರಿಸಿ, ಅನುಮತಿ ನೀಡುವಂತೆ ಶಾಸಕಿ ರೂಪಾಲಿ ಎಸ್.ನಾಯ್ಕ ವಿನಂತಿಸಿದರು. 

ಕಾರವಾರ  ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಕಾರವಾರ ನಗರಸಭೆ ಹಾಗೂ ಅಂಕೋಲಾ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಈ ಬಾರಿ ಹಣ ಬಿಡುಗಡೆಯಾಗಿಲ್ಲ. ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ಹಾಗೂ ಸಕಾಲದಲ್ಲಿ ನಡೆಯುವಂತಾಗಲು ಹಣ ಬಿಡುಗಡೆ ಮಾಡುವಂತೆ ಶಾಸಕರು ಮನವಿ ಮಾಡಿದರು. 

ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಕಾಳಿ ನದಿಯಲ್ಲಿ ಮರಳು ಗಣಿಗಾರಿಕೆಗೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ 10 ದಿನಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ ಬಗೆಹರಿಸುವಂತೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಸಚಿವರಾದ  ಮುರುಗೇಶ ನಿರಾಣಿ ಅವರಿಗೆ ಸೂಚಿಸಿದರು. ನಗರೋತ್ಥಾನದಡಿ ಒಂದು ವಾರದೊಳಗೆ ಹಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು,  ಶಾಸಕರಾದ ರೂಪಾಲಿ ಎಸ್.ನಾಯ್ಕ ಅವರಿಗೆ ಭರವಸೆ ನೀಡಿದರು.

ಸುದ್ದಿ ಓದಿ