ಕಾರವಾರ

ಪ್ರಾದೇಶಿಕ ಭಾಷೆಗಳಿಗೆ ಇಂಗ್ಲಿಷ್ ಭಾಷೆಯಿಂದ ಅಪಾಯ

ಪ್ರಾದೇಶಿಕ ಭಾಷೆಗಳಿಗೆ ಇಂಗ್ಲಿಷ್ ಭಾಷೆಯಿಂದ ಅಪಾಯ

ಕಾರವಾರ 6: ಪ್ರಾದೇಶಿಕ ಭಾಷೆಗಳು ಇಂದು ಇಂಗ್ಲೀಷ್ ಭಾಷೆಯಿಂದ ಅಪಾಯ ಎದುರಿಸುತ್ತಿವೆ. ಈ ಅಪಾಯದಿಂದ ಮೊದಲು ನಾವು ನಮ್ಮ ಮಕ್ಕಳನ್ನು ತಪ್ಪಿಸಬೇಕಿದೆ ಎಂದು ಅರೆಭಾಷಾ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ಕಚೆಗದ್ದೆ ಅಭಿಪ್ರಾಯಪಟ್ಟರು. 

ಕಾರವಾರ ಜಿಲ್ಲಾ ರಂಗಮಂದಿರದಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ, ತುಳು, ಕೊಂಕಣಿ, ಅರೆಭಾಷೆ, ಕೊಡವ ಸಾಹಿತ್ಯ ಅಕಾಡೆಮಿ, ಹೃದಯವಾಹಿನಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಬಹುಭಾಷಾ ಸಾಂಸ್ಕೃತಿ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸುಳ್ಯ, ಪುತ್ತೂರು, ಮಂಗಳೂರು ಪ್ರದೇಶದಲ್ಲಿ ಅರೆ ಭಾಷೆ ಮಾತನಾಡುವ ಜನ ಈಗಲೂ ಇದ್ದಾರೆ. ನಮ್ಮ ತಾಯಂದಿರು, ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಅರೆಭಾಷೆ ಮಾತನಾಡುತ್ತಾ, ಅದರ ಸೊಗಡು ಉಳಿಸಿದ್ದಾರೆ ಎಂದರು.

ಇಂಗ್ಲಿಷ್ ಭಾಷೆಯ ಅಬ್ಬರದಲ್ಲಿ ನಮ್ಮ ಪ್ರಾದೇಶಿಕ ಭಾಷೆಯ ಸೊಗಸು ಉಳಿಸಿಕೊಳ್ಳಲು ನಾವು ಕಲಾ ಪ್ರಕಾರಗಳನ್ನು ಬಳಸುತ್ತಿದ್ದೇವೆ. ಕಲಾ ಪ್ರಕಾರಗಳಿಂದ ಸಹ ಅರೆಭಾಷೆ ಉಳಿಸಿ, ಬೆಳೆಸುವ ಪ್ರಯತ್ನಗಳು ನಡೆದಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ, ವಿವಿಧ ಪ್ರಾದೇಶಿಕ ಭಾಷೆಗಳ ಒಡನಾಟದ ಮೂಲಕ, ಯಕ್ಷಗಾನದ ಮೂಲಕ ಅರೆಭಾಷೆ ಬೆಳೆಸುವ ಪ್ರಯತ್ನವನ್ನು ಅರೆ ಭಾಷಾ ಅಕಾಡೆಮಿ ಮಾಡುತ್ತಿದೆ ಎಂದರು.

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮತಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಕೊಡವ ಸುಂದರ ಭಾಷೆ. ಅದು ಅನುಪಮ ಸೌಂದರ್ಯ ಹೊಂದಿದೆ. ಕೊಡವರ ವೈಶಿಷ್ಟ್ಯತೆ ಕೊಡವ ಸಂಸ್ಕೃತಿಯಲ್ಲಿದೆ. ಭಾಷೆಯನ್ನು ಮಾತನಾಡುವ ಮೂಲಕ ಅದನ್ನು ಸದಾ ಜೀವಂತವಾಗಿಡಬೇಕು. ಭಾಷೆ ಉಳಿಸಿಕೊಳ್ಳುವಲ್ಲಿ  ಕೊಡವರು ಹಿಂದೆ ಬಿದ್ದಿಲ್ಲ ಎಂದರು. 

ಬ್ಯಾರಿ ಸಾಹಿತ್ಯ ಅಕಾಡೆಮಿ ಆಧ್ಯಕ್ಷ ಜ.ರಹೀಂ ಉಚ್ಚಿ ಪ್ರಾಸ್ತವಾಗಿ ಮಾತನಾಡಿದರು. ಇದಕ್ಕೂ ಮುನ್ನ ತುಳು ಭಾಷಾ ಅಕಾಡೆಮಿ, ಕೊಂಕಣಿ, ಬ್ಯಾರಿ,ಕೊಡವ, ಅರೆಭಾಷೆ ಅಕಾಡೆಮಿ ಅಧ್ಯಕ್ಷರು ಸಂಯುಕ್ತವಾಗಿ ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದರು. 

ಹೃದಯವಾಹಿನಿಯ ಅಧ್ಯಕ್ಷ ಮಂಜುನಾಥ ಸಾಗರ ಸಹ ಮಾತನಾಡಿದರು. ಇಬ್ರಾಹಿ ಕಲ್ಲೂರು, ಸೋಶಿಯಲ್ ಫಾರೂಕ್, ಪ್ರಭಾಕರ ಕಲ್ಯಾಣಿ, ಓಡಿಯಂಡ ಪೊನ್ನಪ್ಪ, ಕಲಾವಿದೆ  ಮಿಲನ್ ಭರತ್ ಅವರನ್ನು ವಿವಿಧ ಅಕಾಡೆಮಿಗಳ ವತಿಯಿಂದ ಸನ್ಮಾನಿಸಲಾಯಿತು. ನಂತರ ವಿಚಾರಗೋಷ್ಠಿ,ಬಹುಭಾಷಾ ಕವಿಗೋಷ್ಠಿ, ನಡೆದವು. ಶಿರಸಿಯ ಅನುರಾಧ ಹೆಗಡೆ ನೂಪುರ ನೃತ್ಯಶಾಲೆ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಮನೋಜ ಶರ್ಮ ಗೂರೂಜಿ, ದಯಾನಂದ ಕತ್ತಲ್‍ಸಾರ್, ಅರೆ ಭಾಷಾ ಅಕಾಡೆಮಿ ಸದಸ್ಯೆ, ಕವಯಿತ್ರಿ ಸ್ಮಿತಾ ಅಮೃತರಾಜ್ ,  ಕನ್ನಡ ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಎನ್.ಜಿ.ನಾಯ್ಕ, ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ವೇದಿಕೆಯಲ್ಲಿದ್ದರು. 

ಸುದ್ದಿ ಓದಿ