ಕಾರವಾರ

ರಿಶೇಲ್ ಆತ್ಮಹತ್ಯೆ ಪ್ರಕರಣ; ಚಿರಾಗ್ ಜಾಮೀನು ತಿರಸ್ಕೃತ

ರಿಶೇಲ್ ಆತ್ಮಹತ್ಯೆ ಪ್ರಕರಣ; ಚಿರಾಗ್ ಜಾಮೀನು ತಿರಸ್ಕೃತ

ಕಾರವಾರ 10:  ಉತ್ತರಕನ್ನಡ ಜಿಲ್ಲೆಯ ಕಾರವಾರದ ಕದ್ರಾ ನಿವಾಸಿ ರಿಶೆಲ್ ಡಿ’ಸೋಜಾ ಆತ್ಮಹತ್ಯೆ ಪ್ರಕರಣದ ಆರೋಪಿ ಚಿರಾಗ್ ಕೊಠಾರಕರ್ ಜಾಮೀನು ಅರ್ಜಿಯನ್ನು ಕಾರವಾರದ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ. ಜನವರಿ 9ರಂದು ರಿಶೆಲ್ ಕ್ರಿಸ್ತೋದ್ ಡಿಸೋಜಾ ಆತ್ಮಹತ್ಯೆ ಬಳಿಕ ಆರೋಪಿ ಚಿರಾಗ್ ತಲೆಮರೆಸಿಕೊಂಡಿದ್ದ. ಸಾಕಷ್ಟು ಸಮಯಗಳ ಬಳಿಕ ಜ.30 ರಂದು ಚೆನ್ನೈನಲ್ಲಿ ಅಂಕಲ್ ಮನೆಯಲ್ಲಿ ಪೊಲೀಸರು ಬಂಧಿಸಿದ್ದರು. ಆರೋಪಿ ಚಿರಾಗ್ ಕೊಠಾರ್ಕರ್ನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಲ್ಲದೇ, ಹೆಚ್ಚಿನ ವಿಚಾರಣೆಗೆ 9 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದು , ವಿಚಾರಣೆ ನಡೆಸಿದ್ದರು.

ನ್ಯಾಯಾಲಯವು ಫೆ.10ರವರೆಗೆ ಆರೋಪಿ ಚಿರಾಗ್ನನ್ನು ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಿತ್ತು. ಜಾಮೀನು ಅರ್ಜಿಯ ವಿಚಾರಣೆಯನ್ನು ಫೆ.10ರಂದು ಪ್ರಕಟಿಸುವುದಾಗಿ ಹೇಳಿತ್ತು. ಅಂತೆಯೇ ನ್ಯಾಯಾಲಯ ಇಂದು (ಫೆ.10ರಂದು) ತೀಪು ಪ್ರಕಟಿಸಿದ್ದು, ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಪ್ರಕರಣದಲ್ಲಿ ಚಿರಾಗ್ ಹಾಗೂ ರಿಶೆಲ್ ಮೊಬೈಲ್ಗಳ ಎಫ್‌ಎಸ್‌ಎಲ್ ರಿಪೋರ್ಟ್‌ ಬರಲು ಬಾಕಿಯಿದೆ. ಇನ್ನು ರಿಶೆಲ್ ಮನೆಯವರು ಮಾಡಿರುವ ರೇಪ್ ಆರೋಪದ ಹಿನ್ನೆಲೆಯಲ್ಲೂ ಎರಡನೇ ಪೋಸ್ಟ್‌ ಮಾರ್ಟಂ ರಿಪೋರ್ಟ್‌ ವರದಿ ಪೊಲೀಸರ ಕೈಗೆ ಇನ್ನಷ್ಟೇ ಸೇರಬೇಕಿದೆ.

ಪ್ರಕರಣ ಗಂಭೀರತೆ, ಆರೋಪಿ ತಲೆ ಮರೆಸಿಕೊಂಡಿದ್ದ ವಿಚಾರ ಮುಂತಾದವುಗಳನ್ನು ಗಮನಿಸಿದ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಬಿ. ಅವರು ಚಿರಾಗ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ತನುಜಾ ಹೊಸಪಟ್ಟಣ ಅವರು ವಾದಿಸಿದ್ದರು. ತನಿಖಾಧಿಕಾರಿ ಕದ್ರಾ ಪೊಲೀಸ್ ನೀರೀಕ್ಷಕ ಪ್ರಭಾಕರ್ ತನಿಖಾ ವರದಿಗಳನ್ನು ಸಲ್ಲಿಸಿದ್ದರು. ಕಾರವಾರ ಜಿಲ್ಲಾ ನ್ಯಾಯಾಲಯದಲ್ಲಿ ಚಿರಾಗ್, ತಿರಸ್ಕಾರಗೊಂಡ ಹಿನ್ನೆಲೆಯಲ್ಲಿ , ಚಿರಾಗ್ ಕೊಠಾರ್ಕರ್ ಕುಟುಂಬ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದೆ. 


ಸುದ್ದಿ ಓದಿ