ಸಮಾಜಕ್ಕೆ ಜವಾಬ್ದಾರಿಯುತರಾಗಿ ನಡೆದುಕೊಂಡಾಗ ಮಾತ್ರ ನ್ಯಾಯಾಲಯ ಹಾಗೂ ವಕೀಲರಿಗೆ ಗೌರವ : ನ್ಯಾಯಾಧೀಶ ಬಿರಾದಾರ
ಶಿಗ್ಗಾವಿ 01: ವಕೀಲರು ಕಕ್ಷೀದಾರರ ನಂಬಿಕೆ ಉಳಿಸಿಕೊಂಡು, ಸಮಾಜಕ್ಕೆ ಜವಾಬ್ದಾರಿಯುತರಾಗಿ ನಡೆದುಕೊಂಡಾಗ ಮಾತ್ರ ನ್ಯಾಯಾಲಯ ಹಾಗೂ ವಕೀಲರಿಗೆ ಗೌರವ ಪ್ರಧಾನವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ದೇವಿಂದ್ರ್ಪ ಬಿರಾದಾರ ಹೇಳಿದರು. ಪಟ್ಟಣದ ನ್ಯಾಯಾಲಯ ಆವರಣದಲ್ಲಿ ನೂತನ ಶಿಗ್ಗಾವಿ ನ್ಯಾಯವಾದಿಗಳ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಶಿಗ್ಗಾವಿಗೆ ಸಿವಿಲ್ ನ್ಯಾಯಾಲಯದ ಬೇಡಿಕೆ ಇದೆ. ಅದನ್ನು ಸಾಕಾರಗೊಳಿಸಲು ಬೇಕಾಗಬಹುದಾದ ಕಾರ್ಯ ಗಳನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದರು. ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ ಭಾರತದ ಸಂವಿಧಾನವು ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದ್ದು ಅದರ ರಕ್ಷಕರಾದ ವಕೀಲರ ಮೂಲಕ ಜನಸಾಮಾನ್ಯರಿಗೆ ಕಾನೂನು ಪರಿಚಯಿಸುವ ಕೆಲಸ ಮಾಡಬೇಕು. ಪ್ರಜಾಪ್ರಭುತ್ವದ ಸೌಂದರ್ಯವನ್ನು ಶಿಕ್ಷಣದ ಮೂಲಕ ಎಲ್ಲರಿಗೂ ತಿಳಿಸುವ ಕಾರ್ಯಗಳಾಗಬೇಕು ಹಾಗೂಸ್ವತಂತ್ರ ಭಾರತಕ್ಕೆ ಕಾನೂನು ರಚಿಸುವ ಸಂದರ್ಭದಲ್ಲಿ ಕರಡು ಸಮಿತಿಯಲ್ಲಿ ಬಹಳಷ್ಟು ಜನ ವಕೀಲರೇ ಇದ್ದುದ್ದರಿಂದ ಈ ಸುಂದರ ವ್ಯವಸ್ಥೆಯನ್ನು ನಾವು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದರು. ಶಾಸಕ ಯಾಸೀರಖಾನ್ ಪಠಾಣ ಮಾತನಾಡಿ ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನದ ರಕ್ಷಕರಾದ ವಕೀಲರಗಳು ರಾಜಕೀಯ ಕ್ಷೇತ್ರದಲ್ಲಿ ಸಕ್ರೀಯರಾದಾಗ ಅತ್ಯುತ್ತಮ ಕಾನೂನುಗಳನ್ನು ರಚಿಸುವಲ್ಲಿ ಸಾಧ್ಯವಾಗುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತದೆ ಎಂದರು.ಶಿಗ್ಗಾವಿ ವಕೀಲರ ಸಂಘದವರು ಹಲವಾರು ಬೇಡಿಕೆಗಳನ್ನು ಸಲ್ಲಿಸಿದ್ದು, ಅವುಗಳನ್ನು ಪೂರೈಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು. ವಕೀಲರ ಪರಿಷತ್ತಿನ ಸದಸ್ಯಬಿ.ವಿ. ಕೋರಿಮಠ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷಸೋಮಣ್ಣ ಬೇವಿನಮರದ ಮಾತನಾಡಿದರು. ನ್ಯಾಯಾಧೀಶರಾದ ಸುನೀಲ ತಳವಾರ, ಶಿಗ್ಗಾವಿಯ ನ್ಯಾಯವಾದಿ ಸಂಘದ ಅಧ್ಯಕ್ಷಎಸ್.ಬಿ. ಲಕ್ಕಣ್ಣನವರ, ಭೂ ದಾನಿಗಳಾದ ಸುಶೀಲಕ್ಕಾ ಶಂಕರಗೌಡ ಪಾಟೀಲ, ಸಿದ್ಧಾರ್ಥಗೌಡ್ರ ಪಾಟೀಲ, ವಕೀಲರಾದ ವಿಎಂ. ರಾಮಗೇರಿ, ಎಸ್.ಜಿ. ಟೋಪಣ್ಣನವರ, ಎಂ.ಎಲ್. ಕಳಸದ, ಸಿ.ಬಿ. ವಾಲ್ಮೀಕಿ, ಜಿ.ಐ. ಸಜ್ಜನಗೌಡ್ರ, ಎಫ್.ಎಸ್. ಕೋಣನವರ, ಕೆ.ಎಸ್. ಪಾಟೀಲ, ಲೋಕಪಯೋಗಿ ಇಲಾಖೆಯ ಶಿವಪ್ಪ ಎಚ್., ಎನ್.ಎನ್. ಪಾಟೀಲ ಸೇರಿದಂತೆ ಇತರರಿದ್ದರು.