ಅಥಣಿ

ಕನಿಷ್ಠ 2 ಟಿಎಮ್‌ಸಿ ನೀರು ಹರಿಸಲು ಸಚಿವ ಖಾಡೆಗೆ ಮನವಿ

ಕನಿಷ್ಠ 2 ಟಿಎಮ್‌ಸಿ ನೀರು ಹರಿಸಲು ಸಚಿವ ಖಾಡೆಗೆ ಮನವಿ

ಅಥಣಿ 19: ಕರ್ನಾಟಕ ವ್ಯಾಪ್ತಿಯ ಕೃಷ್ಣಾ ನದಿಗೆ ಜನ, ಜಾನುವಾರುಗಳ ಕುಡಿಯುವ ನೀರಿಗಾಗಿ ಕನಿಷ್ಠ 2 ಟಿಎಮ್‌ಸಿ ನೀರು ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕೃಷ್ಣಾ ನದಿ ನೀರು ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸನಗೌಡಾ ಪಾಟೀಲ (ಬೊಮ್ನನಾಳ) ನೇತೃತ್ವದಲ್ಲಿ ಸಾಂಗಲಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ ಖಾಡೆ ಹಾಗೂ ಸಾಂಗಲಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ರಾಜ್ಯ ಸರಕಾರಕ್ಕೆ ಆಗ್ರಹಿಸಿದರು.  

ಕಳೆದ ಒಂದು ತಿಂಗಳಿನಿಂದ ಕರ್ನಾಟಕ ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ ನೀರಿನ ಕೊರತೆಯಿಂದ ಸಂಪೂರ್ಣ ಒಣಗಿ ಹೋಗಿದ್ದು, ಇದರಿಂದ ಅಥಣಿ ಹಾಗೂ ಕಾಗವಾಡ ತಾಲೂಕುಗಳ ವ್ಯಾಪ್ತಿಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾದ ಪರಿಣಾಮ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ನೀರಿನ ಸಮಸ್ಯೆ ಬಗೆ ಹರಿಯದಿದ್ದಲ್ಲಿ ಕುಡಿಯುವ ನೀರಿಗಾಗಿ ಮತ್ತಷ್ಟು ಹಾಹಾಕಾರ ಉಂಟಾಗುವ ಸಾಧ್ಯತೆ ಇದ್ದುದರಿಂದ ತಕ್ಷಣ ಕೊಯಿನಾ ಡ್ಯಾಂ ಮೂಲಕ ನೀರು ಬಿಡಬೇಕು ಎಂದು ಆಗ್ರಹಿಸಿದರು.  

ಮನವಿ ಸ್ವೀಕರಿಸಿ ಮಾತನಾಡಿದ ಸಾಂಗಲಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಖಾಡೆ, ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಕೊಯಿನಾ ಡ್ಯಾಂ ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಆದರೂ ತಮ್ಮ ಮನವಿಗೆ ಸ್ಪಂದಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.  ಶಬ್ಬೀರ ಸಾತಬಚ್ಚೆ, ವೆಂಕಟೇಶ ದೇಶಪಾಂಡೆ, ಸೊಯಿಲ್ ಅಕ್ಕಿವಾಟೆ, ಸುಭಾಶ ಕಾಂಬಳೆ, ಆನಂದ ಜಾಧವ, ಬಾಳು ಖಾಡೆ, ಮಾಣಿಕ ಮಾನೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ