ರೈತ ವಿರೋಧಿ ಕೃಷಿ ಕಾನೂನು ರದ್ದುಪಡಿಸುವಂಂತೆ ಒತ್ತಾಯಿಸಿ ಮನವಿ
ಬ್ಯಾಡಗಿ 29: "ಕೃಷಿಯನ್ನು ಉಳಿಸಿ, ಪ್ರಜಾಪ್ರಭುತ್ವವನ್ನು ರಕ್ಷಿಸಿ”, ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಘಟಕ ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ತಹಶೀಲ್ದಾರ ಮುಖಾಂತರ ಸೋಮವಾರ ಸಲ್ಲಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಪಟ್ಟಣದ ತಾಲೂಕ ಕಚೇರಿಯ ಆವರಣದಲ್ಲಿ ತಹಶೀಲ್ದಾರ ಅವರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ತಾಲೂಕಾ ಘಟಕದ ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ, ಭಾರತದ ರೈತರಾದ ನಾವುಗಳು ರಾಷ್ಟ್ರದ ಮುಖ್ಯಸ್ಥರಾದ ನಿಮಗೆ ತೀವ್ರ ದುಃಖ ಮತ್ತು ಹತಾಶೆಯಿಂದ ಈ ಪತ್ರವನ್ನು ಬರೆಯುವಂತಾಗಿದೆ. ಜೂನ್ 26 ರಂದು ದೆಹಲಿಯ ಗಡಿಯಲ್ಲಿ ರೈತರ ಪ್ರತಿಭಟನೆಗಳು ನಿರಂತರವಾಗಿ ಏಳು ತಿಂಗಳನ್ನು ಪೂರ್ಣಗೊಳಿಸಿದ ನಂತರ ಮತ್ತು ಈ ದೇಶದಲ್ಲಿ ತುರ್ತು ಪರಿಸ್ಥಿತಿಯ 47ನೇ ವಾರ್ಷಿಕೋತ್ಸವದಂದು ನಮ್ಮ ಕೃಷಿಯನ್ನು ಉಳಿಸುವ ಮತ್ತು ನಮ್ಮ ಪ್ರಜಾಪ್ರಭುತ್ವ ಉಳಿಸುವ ಅವಳಿ ಸವಾಲಿನ ಬಗ್ಗೆ ಭಾರತದ ಮೂಲೆ ಮೂಲೆಗಳಿಂದ ನಾವು ನಿಮಗೆ ಪತ್ರ ಬರೆಯುತ್ತಿದ್ದು, ಭಾರತೀಯ ಸಮಾಜವು ನಮ್ಮನ್ನು ಅಂದರೆ ರೈತರನ್ನು ‘ಅನ್ನದಾತರು” ದೇಶದ ಬೆನ್ನಲೆಬು ಎಂದು ಕರೆಯುತ್ತಿರುವುದು ಏತಕ್ಕಾಗಿ.? ಎಂದು ಪ್ರಶ್ನಿಸಿದರಲ್ಲದೇ ದೇಶದಲ್ಲಿ ಕಾರ್ಪೊರೇಟರ್ ಓಲೈಕೆಗಾಗಿ ರೈತ ವಿರೋಧಿ ಕಾಯ್ದೆಗಳನ್ನು ಜಾರಿ ತಂದು ಕೇಂದ್ರ ಸರ್ಕಾರ ಈಗ ರೈತರ ಬೆನ್ನಲೆಬನ್ನೇ ಮುರಿಯುತ್ತಿರುವುದು ಯಾವ ನ್ಯಾಯ..ಎಂದರು.
ರೈತ ಸಂಘದ ಕಾರ್ಯದರ್ಶಿ ಗಂಗಣ್ಣ ಎಲಿ ಮಾತನಾಡಿ, ಕೊರೊನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ, ಅರ್ಥಿಕತೆಯ ಇತರ ಕ್ಷೇತ್ರಗಳು ಕ್ಷೀಣಿಸಿ ಕುಸಿದರೂ ರೈತ ಸಮುದಾಯ ಕೃಷಿಯಲ್ಲಿ ದಾಖಲೆಯ ಉತ್ಪಾದನೆಯನ್ನು ಸಾಧಿಸಿದೆ. ರೈತರು ತಮ್ಮ ಜೀವವನ್ನೇ ಪಣಕ್ಕಿಟ್ಟು ಧಾನ್ಯಗಳು ಗೋದಾಮುಗಳಲ್ಲಿ ತುಂಬಿ ಹರಿಯುವುದನ್ನು ಖಾತ್ರಿಪಡಿಸಿದ್ದಾರೆ. ಹೀಗಿದ್ದರೂ ಕೂಡ ಕೇಂದ್ರ ಸರ್ಕಾರವು ರೈತ ಸಮುದಾಯದ ಮೇಲೆ ಮೂರು ರೈತ ವಿರೋಧಿ ಕರಾಳ ಕಾನೂನುಗಳನ್ನು ಹೇರಿ ಅವುಗಳಿಂದ ನಮ್ಮ ಕೃಷಿಯನ್ನು ಮತ್ತು ಮುಂದಿನ ಪೀಳಿಗೆಗಳನ್ನು ನಾಶಪಡಿಸುವ ಹುನ್ನಾರವಾಗಿದೆ. ಕೃಷಿಯನ್ನು ನಮ್ಮ ಕೈಯಿಂದ ಕಸಿದುಕೊಂಡು ದೊಡ್ಡ ಕಾರ್ಪೊರೇಟರ್ ಸಂಸ್ಥೆಗಳಿಗೆ ಹಸ್ತಾಂತರಿಸುವ ಕಾನೂನುಗಳ ಜೊತೆಗೆ ಇತರ ಕೆಲವು ಕಾನೂನಿನ ಕತ್ತಿಗಳು ರೈತರ ತಲೆಯ ಮೇಲೆ ತೂಗುತ್ತಿವೆ ಎಂದು ಆರೋಪಿಸಿದರು.ರೈತ ಮುಖಂಡ ಮಲ್ಲೇಶಪ್ಪ ಡಂಬಳ ಮಾತನಾಡಿ, ಮೂರೂ ಕೇಂದ್ರ ಕೃಷಿ ಕಾನೂನುಗಳು ಅಸಂವಿಧಾನಿಕ, ಏಕೆಂದರೆ ಈ ಶಾಸನಗಳು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಇಂತಹ ಕಾನೂನುಗಳನ್ನು ರಚಿಸುವ ಮೊದಲು, ರೈತರೊಂದಿಗೆ ಯಾವುದೇ ಸಮಾಲೋಚನೆ ಮತ್ತು ಸಂವಾದಗಳನ್ನು ನಡೆಸಲಾಗಿಲ್ಲ. ಸರಿಯಾದ ಕಾರಣವನ್ನು ಕೇಳದೆ ಮತ್ತು ವಿವರಣೆ ನೀಡದೆ, ಇವುಗಳನ್ನು ರಹಸ್ಯವಾಗಿ ಸುಗ್ರೀವಾಜ್ಞೆ ರೂಪದಲ್ಲಿ ತರಲಾಯಿತು. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಇತರರು ರಚಿಸಿದ ನಮ್ಮ ಸಂವಿಧಾನದ ಮೊದಲ ರಕ್ಷಕರಾಗಿ, ಅಂತಹ ಅಸಂವಿಧಾನಿಕ, ಪ್ರಜಾಪ್ರಭುತ್ವ ವಿರೋಧಿ ಮತ್ತು ರೈತ ವಿರೋಧಿ ಕಾನೂನುಗಳಿಗೆ ನಿಮ್ಮ ಒಪ್ಪಿಗೆಯನ್ನು ನೀಡಬಾರದಿತ್ತು. ಈಗಲೂ ರೈತ ಸಮುದಾಯದ ಪರವಾಗಿ ಕಾಯ್ದೆಗಳನ್ನು ಹಿಂಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಬಿ.ಎಸ್. ಕುಮ್ಮೂರ, ಎನ್.ಜಿ.ಹಡಪದ, ಅಶೋಕ ಮಾಳೇನಹಳ್ಳಿ, ನಿಂಗಪ್ಪ ಹೆಗ್ಗಣ್ಣನವರ, ಬಿ.ಎಸ್.ಪಾಟೀಲ, ಮೌನೇಶ್ ಕಮ್ಮಾರ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.