ಕಾರವಾರ

ಪದವಿ ಪೂರ್ವ ಉಪನ್ಯಾಸಕರ ಹೆಚ್ಚುವರಿ ಹುದ್ದೆಗಳಿಗೆ ನೇಮಕಾತಿಗೆ ಆಗ್ರಹ

ಪದವಿ ಪೂರ್ವ ಉಪನ್ಯಾಸಕರ  ಹೆಚ್ಚುವರಿ ಹುದ್ದೆಗಳಿಗೆ ನೇಮಕಾತಿಗೆ ಆಗ್ರಹ

ಕಾರವಾರ 21: ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿದ್ದ 1203 ಉಪನ್ಯಾಸಕರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2018 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆಪಟ್ಟಿ ಪ್ರಕಟಿಸಿದ್ದು, ಈ ಆಯ್ಕೆ ಪಟ್ಟಿಯಲ್ಲಿರುವ ಹೆಚ್ಚುವರಿಯಾಗಿ ಶೇ.10 ರಷ್ಟು ಉಪನ್ಯಾಸಕರಿಗೆ ಕೂಡಾ ನೇಮಕಾತಿ ಆದೇಶ ನೀಡಿ ಎಂದು  ಶಿಕ್ಷಣ ಸಚಿವರಾದ ಎಸ್‌.ಸುರೇಶಕುಮಾರಗೆ ವಿಧಾನ ಪರಿಷತ್ ಸದಸ್ಯ ಎಸ್‌.ವ್ಹಿ. ಸಂಕನೂರ ಆಗ್ರಹಿಸಿದ್ದಾರೆ.  

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪದವಿ ಪೂರ್ವ ಇಲಾಖೆಯಲ್ಲಿ 2014 ರಲ್ಲಿ ಖಾಲಿಯಿದ್ದ ಹುದ್ದೆಗಳನ್ನು ಪರಿಗಣಿಸಿ, 28-02-2017 ರಲ್ಲಿ ಅಧಿಸೂಚನೆ ಹೊರಡಿಸಿ, 2018 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಪಟ್ಟಿ ಪ್ರಕಟಿಸಿ ಡಿಸೆಂಬರ್ 2020 ರಲ್ಲಿ ಆದೇಶ ಪತ್ರ ನೀಡಿರುವರು. ಆದರೆ ನೇಮಕಾತಿ ಪ್ರಕ್ರಿಯೆ 6 ವರ್ಷಗಳ ಹಿಂದಿನ ಖಾಲಿಯಿದ್ದ ಹುದ್ದೆಗಳನ್ನು ಪರಿಗಣಿಸಿ ನೇಮಕಾತಿ ಮಾಡಿರುವುದರಿಂದ ಈ ಅವಧಿಯಲ್ಲಿ ಸಾವಿರಾರು ಹುದ್ದೆಗಳು ಪುನಃ ನಿವೃತ್ತಿ, ನಿಧನ, ರಾಜಿನಾಮೆಯಿಂದ ಖಾಲಿಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಶೇ.10 ರಷ್ಟು ಆಯ್ಕೆ ಪಟ್ಟಿಯಲ್ಲಿರುವ ಅರ್ಹ ಅಭ್ಯರ್ಥಿಗಳಿಗೂ ಕೂಡಾ ನೇಮಕಾತಿ ಮಾಡುವುದು ಅವಶ್ಯಕತೆ ಇರುವುದು ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. 

ಹೆಚ್ಚುವರಿ ಶೇ. 10 ರ ಆಯ್ಕೆಪಟ್ಟಿಯಲ್ಲಿರುವ ಅಭ್ಯರ್ಥಿಗಳ ವಯೋಮಿತಿ ಮೀರುತ್ತಿರುವ ಹಿನ್ನಲೆಯಲ್ಲಿ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ನೇಮಕಾತಿ ಮಾಡಿಕೊಳ್ಳಲು ಅನಿವಾರ್ಯವಿದೆ ಎಂದು ಹೇಳಿದ್ದಾರೆ 

ಈ ಕುರಿತಂತೆ 2009ರಲ್ಲಿ ಕೆ.ಪಿ.ಎಸ್‌.ಸಿ ಮೂಲಕ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವಾಗ ಶೇ.10 ರಷ್ಟು ಹೆಚ್ಚುವರಿಯಾಗಿ ನೇಮಿಸಿಕೊಳ್ಳಲಾಗಿದೆ ಅದೇ ರೀತಿ ಇತ್ತಿಚೇಗೆ 2015 ರಲ್ಲಿ ಪರೀಕ್ಷಾ ಪ್ರಾಧಿಕಾರ ಮೂಲಕ ಶೇ.10 ರಷ್ಟು ಸ್ಟಾಫ್ ನರ್ಸ ನೇಮಕ ಮಾಡಿಕೊಂಡಿದೆ. ಇದಲ್ಲದೇ 2017 ರಲ್ಲಿ ಕೆ.ಪಿ.ಎಸ್‌.ಸಿ ಮೂಲಕ ಸೀನಿಯರ್ ಮೆಡಿಕಲ್ ಆಫೀಸರ್ ನೇಮಕ ಮಾಡಿಕೊಳ್ಳುವಾಗ ಕೂಡಾ ಶೇ.10 ರಷ್ಟು ಹೆಚ್ಚುವರಿಯಾಗಿ ಅಭ್ಯರ್ಥಿಗಳನ್ನು ಭರ್ತಿಮಾಡಿಕೊಳ್ಳಲಾಗಿದೆ. ಆದ್ದರಿಂದ ಈ ಹಿಂದೆ ಸರಕಾರ ಅನುಸರಿಸಿದ ಪದ್ದತಿಯಂತೆ ಸಧ್ಯದ ಪದವಿ ಪೂರ್ವ ಉಪನ್ಯಾಸಕರ ನೇಮಕಾತಿ ಪ್ರಕ್ರಿಯಯಲ್ಲಿ ಕೂಡಾ ಶೇ.10ರಷ್ಟು ಹೆಚ್ಚುವರಿ ಉಪನ್ಯಾಸಕರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವುದು ನ್ಯಾಯಯುತವಾಗುತ್ತದೆ ಎಂದು ಹೇಳಿರುವರು. 

ಈ ಕುರಿತು ರಾಜ್ಯ ಮತ್ತು ಕೇಂದ್ರ ಸಚಿವರು, ಶಾಸಕರುಗಳಾದ ಜಗದೀಶ ಶೆಟ್ಟರ, ಪ್ರಹ್ಲಾದ ಜೋಷಿ, ಆನಂದಸಿಂಗ್, ಅದರಂತೆ ವಿರುಪಾಕ್ಷಪ್ಪ ಬಳ್ಳಾರಿ, ಶಶೀಲ ನಮೋಶಿ, ದತ್ತಾತ್ರೆಯ ಪಾಟೀಲ ಮುಂತಾದವರು ಕೂಡಾ ಪತ್ರ ಬರೆದು ಒತ್ತಾಯಿಸಿದ್ದನ್ನು ಸಚಿವರ ಗಮನಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಮೈಸೂರದಿಂದ ಡಾ. ಬಸವರಾಜ ಜಿ.ಆರ್‌. ಗಂಗಾಧರ ಜಿ, ಧಾರವಾಡದಿಂದ ಪ್ರಶಾಂತ, ಬೆಂಗಳೂರದಿಂದ ತಿರುಮಲೇಶ, ಕೋಲಾರದಿಂದ ರೇಣುಕಾ ಎನ್, ಬಳ್ಳಾರಿ ಹಾಗೂ ಹೊಸಪೇಟೆಯಿಂದ ಗುರುಪ್ರಸಾದ ಪಾಟೀಲ, ಸುದರ್ಶನ, ಹಾಗೂ ಶೃತಿ, ಕಲಬುರ್ಗಿಯಿಂದ ಬಸವಂತ, ಕೊಪ್ಪಳದಿಂದ ಚಂದ್ರಿಕಾ ಅದರಂತೆ ಗದಗ, ವಿಜಯಪುರ, ಬೆಳಗಾವಿ,ಹಾವೇರಿ ಉತ್ತರಕನ್ನಡ ಮತ್ತು ಬಾಗಲಕೋಟೆಯ ಆಕಾಂಕ್ಷಿಗಳು ಇದ್ದರು. 


ಸುದ್ದಿ ಓದಿ