ತಾಳಿಕೋಟಿ

24*7 ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ನೀಡುವಂತೆ ಸಿಎಂಗೆ ಮನವಿ

24*7 ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ನೀಡುವಂತೆ ಸಿಎಂಗೆ ಮನವಿ

ತಾಳಿಕೋಟೆ26: ಪಟ್ಟಣಕ್ಕೆ 24*7 ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ನೀಡಬೇಕು. ನಗರಾಭಿವೃದ್ಧಿಯಡಿಯಲ್ಲಿ ಹೆಚ್ಚುವರಿ ರೂ.10 ಕೋಟಿ ಹಣವನ್ನು ಮಂಜೂರು ಮಾಡಬೇಕು ಎಂದು ಪಟ್ಟಣದ ಪುರಸಭೆಯ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. 

ಪಟ್ಟಣದಲ್ಲಿ ಸಾಧ್ವಿ ಶಿರೋಮಣಿ ಹೇಮರೆಡ್ಡಿ ಮಲ್ಲಮ್ಮತಾಯಿಯವರ  ಮೂರ್ತಿ ಪ್ರತಿಷ್ಠಾಪನೆ, ದೇವಸ್ಥಾನ ಉದ್ಘಾಟನೆ ಸಾಂಸ್ಕೃತಿಕ ಭವನ ಹಾಗೂ ಸಮುದಾಯ ಭವನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಆಗಮಿಸಿದ್ದ ನಾಡದೊರೆ ಬೊಮ್ಮಾಯಿಯವರಿಗೆ  ಪುರಸಭೆ ವತಿಯಿಂದ ನಾಗರಿಕ ಗೌರವ ಸನ್ಮಾನ ಮಾಡಿ ಗೌರವಿಸಿ ಮನವಿಯನ್ನು ಸಲ್ಲಿಸಲಾಯಿತು. 

ತಾಳಿಕೋಟೆ ಪಟ್ಟಣ ಐತಿಹಾಸಿಕ ನಗರಿಯಾಗಿದ್ದು ಅನೇಕ ಕೋಟೆ-ಕೊತ್ತಲಗಳು, ಪ್ರಾಚೀನ ದೇವಸ್ಥಾನಗಳನ್ನು ಹೊಂದಿದೆ. ಸುಮಾರು 50 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು, 24*7 ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಅವಶ್ಯಕತೆ ಇದ್ದು, ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ನೀಡಬೇಕು. ಪಟ್ಟಣದ ಸರ್ವಾಂಗೀಣ ಅಭಿವೃದ್ದಿಗೆ ನಗರಾಭಿವೃದ್ದಿ ಇಲಾಖೆಯಿಂದ ಹೆಚ್ಚುವರಿಯಾಗಿ 10 ಕೋಟಿ ಅನುದಾನ ನೀಡಬೇಕು. ಐತಿಹಾಸಿಕ ಸ್ಮಾರಕಗಳ ಜಿರ್ಣೋದ್ದಾರಕ್ಕೆ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿಯನ್ನು ಮಾಡಿದರು. ಮುಖ್ಯಮಂತ್ರಿಗಳನ್ನು ಪಟ್ಟಣದ ಆರಾಧ್ಯ ದೈವ ಖಾಸ್ಗತೇಶ್ವರ ಮಠದ ವಿರಕ್ತ ಸ್ವಾಮೀಜಿಗಳ ಭಾವಚಿತ್ರ ನೀಡಿ ಗೌರವಿಸಲಾಯಿತು. 

ಈ ಸಂದರ್ಬದಲ್ಲಿ ಪುರಸಭೆ ಅಧ್ಯಕ್ಷ ಸಂಗಮೇಶ್ ಇಂಗಳಗಿ, ಉಪಾಧ್ಯಕ್ಷ ಮುಸ್ತಫಾ ಚೌದ್ರಿ, ಸದಸ್ಯರಾದ ವಾಸುದೇವ ಹೆಬಸೂರ, ನಿಂಗಣ್ಣ ಕುಂಟೋಜಿ, ಜೈಸಿಂಗ ಮೂಲಿಮನಿ, ಪರಶುರಾಮ ತಂಗಡಗಿ, ಅಕ್ಕಮಹಾದೇವಿ ಕಟ್ಟಿಮನಿ, ಮುದಕಣ್ಣ ಬಡಿಗೇರ, ಶರಣು ಗೋಟಖಂಡ್ಕಿ, ಎಸ್‌.ಎಸ್‌.ಹಿರೇಮಠ, ಅಣ್ಣಪ್ಪ ಜಗತಾಪ, ಹುಸೇನ ಜಮಾದಾರ, ಮಂಜೂರ ಬೇಪಾರಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ