ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ
ಲೋಕದರ್ಶನ ವರದಿ
ಕಂಪ್ಲಿ, ಆ.14: ಹಿಂದೂಗಳ ಪವಿತ್ರ ಮಾಸಗಳಲ್ಲಿ ಒಂದಾದ ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರೂ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಎಂದು ಬುಕ್ಕಸಾಗರ ಕರಿಸಿದ್ದೇಶ್ವರ ಸಂಸ್ಥಾನ ಮಠದ ಪರಮಪೂಜ್ಯ ಕರಿಸಿದ್ದೇಶ್ವರ ವಿಶ್ವಾರಾಧ್ಯ ಶ್ರೀಗಳು ಹೇಳಿದರು.
ಕಂಪ್ಲಿ ಪಟ್ಟಣದ ಸಾಂಗತ್ರಯ ಸಂಸ್ಕೃತ, ವೈದಿಕ ಹಾಗೂ ಜ್ಯೋತಿಷ್ಯ ಪಾಠಶಾಲೆಯಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ಆಯೋಜಿಸಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪುರಾಣ ಪ್ರವಚನ ಹಾಗೂ ಶರಣರ ಚಿಂತನಾ ಕಾರ್ಯಕ್ರಮಗಳಿಗೆ ಷಟ್ಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ಶ್ರೀಗಳು ಚಾಲನೆ ನೀಡಿ, ಶುಭಾಶೀರ್ವಚನ ನೀಡಿದರು.
ಸಾಂಗತ್ರಯ ಸಂಸ್ಕೃತ, ವೈದಿಕ ಹಾಗೂ ಜ್ಯೋತಿಷ್ಯ ಪಾಠಶಾಲೆಯಲ್ಲಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದ್ದು, ಪಟ್ಟಣ ಸೇರಿದಂತೆ ತಾಲ್ಲೂಕಿನ ಜನರಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಶ್ರೀಗಳು ಹೇಳಿದರು.
ಈ ಪಾಠಶಾಲೆಯಲ್ಲಿ ಹಿಂದಿನಿಂದಲೂ ಸಾವಿರಾರು ಜಂಗಮ ವಟುಗಳು ಸಂಸ್ಕೃತ, ವೈದಿಕ ಹಾಗೂ ಜ್ಯೋತಿಷ್ಯ ಶಾಸ್ತ್ರಗಳನ್ನು ಅಭ್ಯಾಸ ಮಾಡಿ, ನಾಡಿನ ವಿವಿಧೆಡೆ ಸ್ವಾಮೀಜಿಗಳಾಗಿ, ಅರ್ಚಕರಾಗಿ ಹಾಗೂ ಪುರೋಹಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದ ಉನ್ನತಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವುದು ಪಾಠಶಾಲೆಯ ಹೆಗ್ಗಳಿಕೆಯಾಗಿದೆ ಎಂದರು.
ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ಶ್ರೀ ಹಾನಗಲ್ ಕುಮಾರೇಶ್ವರರ ಪುರಾಣ ಪ್ರವಚನ ನಡೆಯಲಿದ್ದು, ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕರಿಸಿದ್ದೇಶ್ವರ ವಿಶ್ವಾರಾಧ್ಯ ಶ್ರೀಗಳ ಪಾದಪೂಜೆಯನ್ನು ಪಾಠಶಾಲೆಯ ನಿರ್ದೇಶಕರಾದ ಡಾ. ಜಗನ್ನಾಥ ಹಿರೇಮಠ ದಂಪತಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪಾಠಶಾಲೆಯ ಅಧ್ಯಕ್ಷ ಇಟಗಿ ಬಸವರಾಜಗೌಡ, ಪದಾಧಿಕಾರಿಗಳಾದ ಜಿ.ಎಚ್. ಶಶಿಧರಗೌಡ, ಅರವಿ ಅಮರೇಶಗೌಡ, ಗೌಳೇರು ಶೇಖರ್ಪ, ಎಂ. ವಿಜಯಕುಮಾರ್, ಹುಲಿಹೈದರ್ ಅಮರೇಶ್, ಕಲ್ಲುಗಡಿ ವಿಶ್ವನಾಥ್, ಡಿ. ವೀರ್ಪ, ಬಾಳೇಕಾಯಿ ಚನ್ನಬಸಪ್ಪ ಸೇರಿದಂತೆ ವಿವಿಧ ಮಠಗಳ ಪಂಡಿತರು, ಪದಾಧಿಕಾರಿಗಳು ಹಾಗೂ ವೀರಶೈವ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಪಟ್ಟಣದಲ್ಲಿ ಆರಂಭಗೊಂಡ ಪುರಾಣ ಪ್ರವಚನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಕರಿಸಿದ್ದೇಶ್ವರ ವಿಶ್ವಾರಾಧ್ಯ ಶ್ರೀಗಳು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.