ಫಸಲ್ ಬಿಮಾ ಯೋಜನೆ ಹಣ ಬಿಡುಗಡೆ ಮಾಡಿ
ತಾಳಿಕೋಟೆ26: ತಾಲೂಕಿನಾದ್ಯಂತ ಬೆಳೆ ವಿಮೆಯನ್ನು ತುಂಬಿರುವ ರೈತರಿಗೆ ಕಳೆದ ಎರಡು ವರ್ಷಗಳಿಂದ ಬೆಳೆ ವಿಮೆ ಸರಿಯಾಗಿ ಜಮೆಯಾಗಿರುವದಿಲ್ಲ. ಆದ್ದರಿಂದ ಕೂಡಲೇ ಅಧಿಕಾರಿಗಳು ಬೆಳೆ ವಿಮೆ ಜಮೆ ಮಾಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ತಹಶೀಲ್ದಾರ ಮೂಲಕ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಮಾತನಾಡಿ, ವಿಮೆ ಕಂಪನಿಯವರೋ ಅಥವಾ ವೀಕ್ಷಣೆ ಮಾಡುವ ಅಧಿಕಾರಿಗಳ ನಿರ್ಲಕ್ಷ-್ಯದಿಂದಲೋ ಒಂದೇ ಪ್ರದೇಶದ ಕೆಲವೊಬ್ಬರಿಗೆ ವಿಮೆ ಹಣ ಜಮಾ ಆದರೆ, ಉಳಿದವರಿಗೆ ಬಂದಿಲ್ಲ, ಕೆಲವರಿಗೆ ಒಂದು ಎಕರೆಗೆ ಹೆಚ್ಚು ಹಣ ಜಮಾವಾದರೆ ಉಳಿದವರಿಗೆ ಕಡಿಮೆ ಹಣ ಬಂದಿದೆ, ಇನ್ನೂ ಉಳಿದವರಿಗೆ ಹಣವೇ ಬಂದಿರುವುದಿಲ್ಲ. ವಿಮೆ ಕಂಪನಿಯವರು ಹಾಗೂ ಅವೈಜ್ಞಾನಿಕವಾಗಿ ವಿಕ್ಷಣೆ ಮಾಡಿ ವರದಿ ಸಲ್ಲಿಸಿದ ಅಧಿಕಾರಿಗಳ ಕುಮ್ಮಕ್ಕಿನಿಂದ ವಿಮೆ ಗೋಲಮಾಲ ನಡೆದಿದೆ ಎನ್ನುವುದು ಕೇಳಿ ಬರುತ್ತಿದೆ, ವಿಕ್ಷಣೆ ಮಾಡುವವರು ಬೇರೆಕಡೆ ಕುಳಿತು ಸ್ಥಳ ವಿಕ್ಷಣೆ ಮಾಡದೇ ಅಂದಾಜು ವರದಿ ಸಲ್ಲಿಸಿದಾಗಲೂ ಈ ಘಟನೆ ನಡೆದಿರಲು ಸಾಧ್ಯತೆಗಳಿವೆ. 2020-2021 ನೇ ಸಾಲಿನಲ್ಲಿ 10,05,978 ರೈತರು 123,40,48,913 ರೂಗಳ ವಿಮೆಮಾಡಿಸಿದ್ದರೆ, 2021-2022 ನೇ ಸಾಲಿನಲ್ಲಿ 12,68,010 ರೈತರು 125,38,63,016 ರೂಗಳ ವಿಮೆ ಮಾಡಿಸಿದ್ದಾರೆ. ಅದೇರೀತಿ ಈ ವರ್ಷವೂ ಕೂಡಾ ಮಂಗಾರಿನಲ್ಲಿ ಜನ ವಿಮೆ ಮಾಡಿಸುತ್ತಿದ್ದಾರೆ. ಸರಕಾರ ಹಾಗೂ ಫಸಲ್ ಬಿಮಾ ಯೋಜನೆಯ ಬಗ್ಗೆ ರೈತರು ಸಂಪೂರ್ಣ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ, ಅದಕ್ಕೂ ಮುಂಚೆ ಜನರಿಗೆ ಸೂಕ್ತ ನ್ಯಾಯ ಒದಗಿಸಬೇಕು, ಅದೇರೀತಿ ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಮುಂಗಾರು ಸಂಪೂರ್ಣ ಕೈಕೊಟ್ಟು ರೈತರು ಬೀಜ ಗೊಬ್ಬರ ಭೂಮಿಗೆ ಚೆಲ್ಲಿ ಮುಗಿಲಿನತ್ತ ಮುಖ ಮಾಡಿದ್ದಾರೆ. ಅದಕ್ಕೆ ಮಾಡಿದ ಸಾಲ ಹೇಗೆ ತೀರಿಸುವುದು ಎಂಬ ಚಿಂತೆಯಲ್ಲಿದ್ದಾರೆ, ಆದಷ್ಟು ಬೇಗ ಹಳೆಯ ವಿಮೆ ಜಮಾ ಆಗುವಂತೆ ಮತ್ತು ಈ ವರ್ಷದ ಮುಂಗಾರು ಸಂಪೂರ್ಣ ವಿಫಲ ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕಾಗಿ ಎಂದು ಒತ್ತಾಯಿಸಿದರು. ಉಪ ತಹಶೀಲ್ದಾರ ಅಶೋಕ ಶರ್ಮಾ ಮನವಿಯನ್ನು ಸ್ವಿಕರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಲಕೇರಿ ಅಧ್ಯಕ್ಷರಾದ ಶಾಂತಯ್ಯ ಗಣಾಚಾರಿ, ಹೋಬಳಿ ಅಧ್ಯಕ್ಷರಾದ ಮೆಹೆಬೂಬ ಬಾಷಾ ಮನಗೂಳಿ, ಉಪಾಧ್ಯಕ್ಷರಾದ ಪುಂಡಲಿಕ ಚವ್ಹಾಣ ಉಪಸ್ಥಿತರಿದ್ದರು.