ಪರೀಕ್ಷೆಯಲ್ಲಿ ಉತ್ತರ ಬರೆಯುವ ಕೌಶಲ್ಯವನ್ನು ಅರಿತುಕೊಳ್ಳಿ: ಕಳಸನ್ನವರ
ಗೋಕಾಕ 30: ಸುಲಭವಾಗಿ ಓದಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನಿಸಿ, ಪರೀಕ್ಷೆಯ ಪ್ರಶ್ನೆಗಳ ಮತ್ತು ಸ್ವರೂಪದ ಬಗ್ಗೆ ಅರಿವಿರಲಿ ಎಂದು ಗೋಕಾಕದ ನ್ಯೂ ಇಂಗ್ಲೀಷ್ ಶಾಲೆಯ ವಿಜ್ಞಾನ ಶಿಕ್ಷಕ ಆಯ್ ಆರ್. ಕಳಸನ್ನವರ ಹೇಳಿದರು.ಅವರು ತಾಲೂಕಿನ ಮಮದಾಪೂರದ ಏಳು ಕೋಣೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮದ ರಸಸವೀ ಫೌಂಡೇಶನ್ ಅಡಿಯಲ್ಲಿ ಜರುಗಿದ ಪಾಕ್ಷಿಕ ’ಜ್ಞಾನಾಕ್ಷಯ’ ಚಿಂತಕರ ಚಾವಡಿ 28ನೇ ಮಾಲಿಕೆಯಲ್ಲಿ ಪರೀಕ್ಷಾ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು ಕುರಿತು ಅರಿವು ಉಪನ್ಯಾಸ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.
ನೆನಪಿನ ಶಕ್ತಿಗೆ ಯಾವದೇ ಓಷಧಿಗಳಿಲ್ಲ ಮಿತ ಆಹಾರ, ಹಿತವಾದ ನಿದ್ದೆ ಮತ್ತು ನೀಲಿ, ಕೆಂಪು ಮತ್ತು ಹಸಿರು ಬಣ್ಣದಲ್ಲಿರುವ ಆಹಾರಗಳು ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸಿ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಸಾಕಷ್ಟು ನಿದ್ರೆ ಮಾಡಿ (ದಿನಕ್ಕೆ 7 ಗಂಟೆಗಳು) ನಿಮ್ಮನ್ನು ಸರಿಯಾದ ಮನಸ್ಸಿನ ಚೌಕಟ್ಟಿನಲ್ಲಿ ಇರಿಸುತ್ತದೆ ಮತ್ತು ಪರೀಕ್ಷೆಗೆ ತಯಾರಾಗುವ ಒತ್ತಡ ಮತ್ತು ಉದ್ವೇಗವನ್ನು ಸರಾಗಗೊಳಿಸುತ್ತದೆ. ಮನಸ್ಸನ್ನು ಏಕಾಗ್ರತೆಯಲ್ಲಿರಿಸಿಕೊಳ್ಳಿ ಸಮಯ ವ್ಯರ್ಥ ಮಾಡದಿರಿ. ಅವಕಾಶಕ್ಕೆ ಕಾಯುತ್ತಿರಿ. ಕಠಿಣ ವಿಷಯದತ್ತ ಹೆಚ್ಚು ಗಮನಹರಿಸಿ. ಕೇವಲ ಓದಿ ವಿಷಯ ಗ್ರಹಿಸಿದ್ದರೆ ಆಗೋದಿಲ್ಲ, ಪರೀಕ್ಷಾ ಕೊಠಡಿಯಲ್ಲಿ ಉತ್ತರ ಬರೆಯುವ ಕೌಶಲ್ಯವನ್ನು ಅರಿತುಕೊಳ್ಳಿ ಮತ್ತು ಸಾಧಕರ ಸಾಧನೆಯ ಗುಟ್ಟನ್ನು ನಿಮ್ಮ ಶಿಕ್ಷಕರಿಂದ ತಿಳಿಕೊಳ್ಳುವಂತೆ ಮಕ್ಕಳ ಮನ ಒಲಿಸಿದರು.
ನಾಟಕ ಗುರುಗಳಾದ ಮಾಳೇಶ ಸುಣಧೋಳಿ ಬಹು ಉಪಯುಕ್ತ ವಿಚಾರಗಳ ಕುರಿತು ಚಿಂತನೆ ನಡೆಯುತ್ತಿರುವುದನ್ನು ಸವಿಯುತ್ತಿರುವ ನೀವೆ ಪುಣ್ಯವಂತರು ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತ ನಾವೆಲ್ಲಾ ಹೈಸ್ಕೂಲಲ್ಲಿ ಓದುತ್ತಿರುವಾಗ ಈ ಸೌಲಭ್ಯಗಳು ಸಿಕ್ಕಿಲ್ಲ ಎಂದು ನೋವು ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿಕೊಂಡ ಬೆಳಗಾವಿ ತಾಲೂಕಾ ಹುದಲಿಯ ಶಾರದಾ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಮಲ್ಲಿಕಾರ್ಜುನ ಕೊಳದೂರ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಸ್ವಾಮಿ ವಿವೇಕಾನಂದರ ಬಾಲ್ಯದ ತುಂಟಾಟದ ದಿನಗಳ ಕಥೆ ಹೇಳುವುದರ ಮೂಲಕ ವಿದ್ಯಾರ್ಥಿ ತನಗೆ ದೊರೆತಿರುವ ಅವಕಾಶದ ಅಂದ ಚೆಂದ ಗಮನಿಸದೇ ಆ ಸಂದರ್ಭವನ್ನು ಸಮಯೋಚಿತವಾಗಿ ಬಳಸಿಕೊಂಡು ಸಾಧನೆಯ ಶಿಖರವನ್ನು ಏರುವಂತೆ ಕಿವಿಮಾತು ಹೇಳಿದರು.
ಅನ್ನಪೂರ್ಣೇಶ್ವರಿ ಮುರಗೋಡ ವಿಜ್ಞಾನ ಗೀತೆಯನ್ನು ಹಾಡಿದರು. ಮಹೇಶ ಗಿಡಗೌಡ್ರ ಸ್ವಾಗತಿಸಿದರು. ಕಾರ್ಯಕ್ರಮ ಆಯೋಜಿಸಿದ ಸ್ಥಳಿಯ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಜ್ಞಾನಾಕ್ಷಯ ಚಿಂತಕರ ಚಾವಡಿ ಸಂಚಾಲಕ ರವೀ ದೇಮಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಸ್ವತಿ ನೇಸರಗಿ ನಿರೂಪಿಸಿದರು. ವಿಜಯ ಕುಂಬಾರ ಕೂಡಲ ಸಂಗಮನವರ ವಚನವನ್ನು ವಾಚಿಸಿದರು.