ಮರು ಹರಾಜು: ಪುರಸಭೆಗೆ 1 ಕೋಟಿ 6.0 ಲಕ್ಷ ಹೆಚ್ಚುವರಿ ಆದಾಯ
ಲೋಕದರ್ಶನ ವರದಿ
ಅಥಣಿ 11: ಪುರಸಭೆಯ 17 ವಾಣಿಜ್ಯ ಮಳಿಗೆಗಳ ಮರು ಹರಾಜು ಪ್ರಕ್ರಿಯೆಯಲ್ಲಿ ಅಥಣಿ ಪುರಸಭೆಗೆ 1 ಕೋಟಿ 6.0 ಲಕ್ಷ ಹೆಚ್ಚುವರಿ ಆದಾಯ ಬಂದಿದೆ.
ಕೆಲ ತಿಂಗಳ ಹಿಂದೆ ಸ್ಥಳೀಯ ಅಂಬೇಡ್ಕರ ವೃತ್ತದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ 21 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆದಿತ್ತು. ಆ ಸಂದರ್ಭದಲ್ಲಿ ಹರಾಜುದಾರರ ಹೊಂದಾಣಿಕೆ ಪರಿಣಾಮ ಕೇವಲ 88 ಲಕ್ಷ ರೂ.ಗಳ ಆದಾಯ ಗಳಿಕೆಯಾಗಿತ್ತು. ಹೀಗಾಗಿ ಕೆಲ ಪುರಸಭಾ ಸದಸ್ಯರು ತಕ್ಷಣ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಹಾಗೂ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಇವರಿಗೆ ದೂರು ಸಲ್ಲಿಸಿದರು.
ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಸೂಚನೆ ನೀಡಿದ ಪರಿಣಾಮ ಉಪ ವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಸ್ಥಳೀಯ ಪುರಸಭಾ ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿ ವಾಣಿಜ್ಯ ಮಳಿಗೆಗಳ ಮರು ಹರಾಜು ಪ್ರಕ್ರಿಯೆಗೆ ಸೂಚಿಸಿದರು. ಮಂಗಳವಾರ ನಡೆದ ಮರು ಹರಾಜು ಪ್ರಕ್ರಿಯೆಯಲ್ಲಿ 25 ಲಕ್ಷ ರೂ.ಗಳ ಅತೀ ಹೆಚ್ಚು ಠೇವಣಿಗೆ ಜಿ.5 ವಾಣಿಜ್ಯ ಮಳಿಗೆ ಹರಾಜಾಯಿತು. ಅಥಣಿ ಪುರಸಭೆಗೆ ಹೆಚ್ಚುವರಿ ಆದಾಯ ಬಂದ ಹಿನ್ನೆಲೆಯಲ್ಲಿ ದೂರು ನೀಡಿದ ಪುರಸಭಾ ಸದಸ್ಯರು ಹರ್ಷ ವ್ಯಕ್ತ ಪಡಿಸಿದರು. ಹಿಂದಿನ ಹರಾಜು ಪ್ರಕ್ರಿಯೆಯನ್ನು ರದ್ದು ಮಾಡಬೇಕು ಎಂದು ಪುರಸಭಾ ಸದಸ್ಯರಾದ ಮೃಣಾಲಿನಿ ದೇಶಪಾಂಡೆ, ಪ್ರಮೋದ ಬಿಳ್ಳೂರ, ವಿನಯ ಪಾಟೀಲ ಸೇರಿದಂತೆ ಅನೇಕರು ದೂರು ನೀಡಿದ್ದರು.
ಇಂದಿನ ಹರಾಜು ಪ್ರಕ್ರಿಯೆ ಪುರಸಭಾ ಮುಖ್ಯಾಧಿಕಾರಿ ಈರಣ್ಣ ದಡ್ಡಿ ನೇತೃತ್ವದಲ್ಲಿ ನಡೆಯಿತು. ಕಂದಾಯ ವಿಭಾಗದ ಎಸ್.ಆರ್.ಮಾಂಗ, ಪುರಸಭಾ ಸಿಬ್ವಣದಿಗಳಾದ ರಾಜು ವಾಳವೇಕರ, ಮಹೇಶ ಜಾಧವ, ಪ್ರವೀಣ ಪಾಟೀಲ, ಅನೀಲ ಘಟಕಾಂಬಳೆ, ಅನೀಲ ಮೈಗೂರ, ಬಾಳಪ್ಪ ಭಜಂತ್ರಿ, ಗುರು ಕೆಂಪಸತ್ತಿ, ರೇವಣಸಿದ್ಧ ಹೂಗಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಬಸವರಾಜ ನಾಯಿಕ, ಪ್ರಮೋದ ಬಿಳ್ಳೂರ, ವಿನಯ ಪಾಟೀಲ, ಸಿದ್ಧು ಪಾಟೀಲ, ಉದಯ ಸೋಳಸಿ, ರವಿ ಭಡಕಂಬಿ, ವಿಶ್ವನಾಥ ಗಡದೆ, ಬಸವರಾಜ ಹಳ್ಳದಮಳ, ರಮೇಶ ಪವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.