ಕರ್ನಾಟಕ ಎಸ್ಐಆರ್: 52 ವಿಧಾನಸಭಾ ಕ್ಷೇತ್ರಗಳಲ್ಲಿ 127 ಮತದಾರರು ಭಾರತೀಯರಲ್ಲ ಎಂದು ಗುರುತು
ಬೆಂಗಳೂರು, ಅ. 27 : ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ರಾಜ್ಯದ 52 ವಿಧಾನಸಭಾ ಕ್ಷೇತ್ರಗಳ ಒಟ್ಟು 127 ಮತದಾರರನ್ನು ಚುನಾವಣಾ ದಾಖಲೆಗಳಲ್ಲಿ "ಭಾರತೀಯ ನಾಗರಿಕರಲ್ಲ" (Not an Indian Citizen) ಎಂದು ಗುರುತಿಸಲಾಗಿದೆ. ರಾಜಕೀಯ ಸಂಶೋಧನಾ ಸಲಹಾ ಸಂಸ್ಥೆ ಸಂಕಲ್ಪ ಬಿಡುಗಡೆ ಮಾಡಿರುವ ಕ್ಷೇತ್ರವಾರು ಅಂಕಿಅಂಶಗಳಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ರಾಜ್ಯದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನಿಯಮಾನುಸಾರ ಕ್ರಮಗಳ ಪಾಲನೆ ಕುರಿತು ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ ಈ ಅಂಕಿಅಂಶಗಳು ಮುನ್ನೆಲೆಗೆ ಬಂದಿವೆ.
ಈ ವಿಭಾಗದಲ್ಲಿ ಹೆಬ್ಬಾಳ ಕ್ಷೇತ್ರವು ಅತಿ ಹೆಚ್ಚು ಅಂದರೆ 13 ಮತದಾರರನ್ನು ಹೊಂದಿದ್ದು, ಪದ್ಮನಾಭನಗರದಲ್ಲಿ 10, ಶಿವಾಜಿನಗರದಲ್ಲಿ ಎಂಟು ಹಾಗೂ ಮಹದೇವಪುರದಲ್ಲಿ ಏಳು ಮಂದಿಯನ್ನು ಗುರುತಿಸಲಾಗಿದೆ. ಚಿತ್ತಾಪುರ, ಬ್ಯಾಟರಾಯನಪುರ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರಗಳಲ್ಲಿ ತಲಾ ಐದು ಹಾಗೂ ಹೊನ್ನಾಳಿಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ.
ವಿಜಯಪುರ ನಗರ, ಸೇಡಂ, ತೀರ್ಥಹಳ್ಳಿ, ಶಿರಾ, ಚಿಕ್ಕಪೇಟೆ, ಆನೇಕಲ್, ಮಳವಳ್ಳಿ ಮತ್ತು ಮೇಲುಕೋಟೆ ಕ್ಷೇತ್ರಗಳಲ್ಲಿ ತಲಾ ಮೂರು ಪ್ರಕರಣಗಳು ವರದಿಯಾಗಿವೆ. ಇನ್ನು ಹಲವು ಕ್ಷೇತ್ರಗಳಲ್ಲಿ ತಲಾ ಒಂದು ಅಥವಾ ಎರಡು ಪ್ರಕರಣಗಳು ದಾಖಲಾಗಿವೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲು ಸಲ್ಲಿಸಲಾದ ಒಟ್ಟು ಅರ್ಜಿಗಳಿಗೆ ಹೋಲಿಸಿದರೆ, ಭಾರತೀಯರಲ್ಲ ಎಂದು ಗುರುತಿಸಲಾದ ಮತದಾರರ ಸಂಖ್ಯೆ ಕಡಿಮೆಯಿದೆ ಎಂಬುದನ್ನು ಈ ಅಂಕಿಅಂಶಗಳು ಸೂಚಿಸುತ್ತವೆ. ಆದರೆ, ಈ ವರ್ಗದಲ್ಲಿ ಹೆಸರಿರುವುದರಿಂದ ಮಾತ್ರ ಯಾವುದೇ ವ್ಯಕ್ತಿಯ ರಾಷ್ಟ್ರೀಯತೆ ಅಥವಾ ವಲಸೆ ಸ್ಥಿತಿಯನ್ನು ಖಚಿತಪಡಿಸಲು ಸಾಧ್ಯವಿಲ್ಲ.
ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಬಳಸುವ ಫಾರ್ಮ್-7 ಅರ್ಜಿಗಳ ನಿರ್ವಹಣೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಹೆಸರುಗಳನ್ನು ತೆಗೆದುಹಾಕಲು ಪ್ರಸ್ತಾಪಿಸಿದ ಕಾರಣಗಳನ್ನು ದಾಖಲಿಸದೆ ಕನಿಷ್ಠ 61,059 ಫಾರ್ಮ್-7 ಅರ್ಜಿಗಳನ್ನು ಚುನಾವಣಾಧಿಕಾರಿಗಳು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಆಕ್ಷೇಪಣೆಗಳನ್ನು ನಿಗದಿತ ನಿಯಮಗಳ ಪ್ರಕಾರ ಸಲ್ಲಿಸಬೇಕೆಂಬ ಕಡ್ಡಾಯ ನಿಯಮವಿದ್ದರೂ ಈ ಬೆಳವಣಿಗೆ ನಡೆದಿದೆ.
ಮ್ಯಾಪಿಂಗ್ ಸಮಸ್ಯೆಗಳು ಅಥವಾ ತಾರ್ಕಿಕ ವ್ಯತ್ಯಾಸಗಳಿಗೆ ಸಂಬಂಧಿಸಿದ ವಿಚಾರಣೆಗಳ ಸಂದರ್ಭದಲ್ಲಿ ಮತದಾರರನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಈ ಅರ್ಜಿಗಳನ್ನು ಸ್ವಯಂಚಾಲಿತವಾಗಿ ಸೃಷ್ಟಿಸಲಾಗಿದೆ ಎಂದು ತಿಳಿದುಬಂದಿದೆ. ಮನೆ ಬದಲಾಯಿಸಿದ ಮತದಾರರು, ನಕಲಿ ಹೆಸರುಗಳು, ಅಪ್ರಾಪ್ತ ವಯಸ್ಕರು, ಮೃತಪಟ್ಟವರು ಹಾಗೂ ಭಾರತೀಯರಲ್ಲ ಎಂದು ಪರಿಗಣಿಸಲಾದ ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರಕರಣಗಳು ಈ ಪ್ರಕ್ರಿಯೆಯಲ್ಲಿ ಸೇರಿವೆ.
ಸೆಪ್ಟೆಂಬರ್ 23ರಂದು ಹಕ್ಕು ಮತ್ತು ಆಕ್ಷೇಪಣೆಗಳ ಅವಧಿ ಮುಕ್ತಾಯಗೊಂಡ ಬಳಿಕ ಫಾರ್ಮ್-7 ಅರ್ಜಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಕೇವಲ 192 ಅರ್ಜಿಗಳು ಸ್ವೀಕೃತವಾಗಿದ್ದರೆ, ಸೆಪ್ಟೆಂಬರ್ 24ರಿಂದ ಅಕ್ಟೋಬರ್ 22ರವರೆಗೆ 60,800ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಗೆ ಕೊನೆಯ ದಿನವಾಗಿದ್ದ ಅಕ್ಟೋಬರ್ 22ರಂದು ಚುನಾವಣಾಧಿಕಾರಿಗಳು 10,105 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅಕ್ಟೋಬರ್ 21ರಂದು 10,314, ಅಕ್ಟೋಬರ್ 17ರಂದು 11,132 ಹಾಗೂ ಅಕ್ಟೋಬರ್ 19ರಂದು 11,760 ಅರ್ಜಿಗಳು ಸಲ್ಲಿಕೆಯಾಗಿವೆ.
ಮಾದರಿ ಪರಿಶೀಲನೆ ವೇಳೆ, ಅರ್ಜಿಗಳನ್ನು ಸಲ್ಲಿಸುವುದಕ್ಕೂ ಮುನ್ನವೇ ಸಂಬಂಧಪಟ್ಟ ಕೆಲವು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು ಎಂಬುದು ವರದಿಯಾಗಿದೆ. ಗಡುವು ಮುಗಿದ ಬಳಿಕ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದ ಪ್ರಕರಣಗಳೂ ಇದರಲ್ಲಿ ಸೇರಿವೆ.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿದ ಅಂಕಿಅಂಶಗಳು ಮತ್ತು ಭಾರತದ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿರುವ ಒಟ್ಟು ಫಾರ್ಮ್-10 ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿದೆ. ಸೆಪ್ಟೆಂಬರ್ 24ರಿಂದ ಅಕ್ಟೋಬರ್ 22ರವರೆಗೆ 1,70,442 ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದ್ದರೆ, ಚುನಾವಣಾ ಆಯೋಗದ ಸಂಯೋಜಿತ ದಾಖಲೆಗಳಲ್ಲಿ 1,56,634 ಅರ್ಜಿಗಳು ದಾಖಲಾಗಿವೆ. ಈ ಎರಡೂ ಅಂಕಿಅಂಶಗಳ ನಡುವೆ 13,808 ಅರ್ಜಿಗಳ ವ್ಯತ್ಯಾಸವಿದೆ.
ಎಸ್ಐಆರ್ ಪ್ರಕ್ರಿಯೆಯಡಿ ಕರ್ನಾಟಕದ ಅಂತಿಮ ಮತದಾರರ ಪಟ್ಟಿಯನ್ನು ಮಂಗಳವಾರ ಪ್ರಕಟಿಸಲು ನಿಗದಿಪಡಿಸಲಾಗಿದೆ.
ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗುವ ಮುನ್ನ, 2026ರ ಜೂನ್ 16ರ ವೇಳೆಗೆ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದರು. ಇವರಲ್ಲಿ ಗೈರುಹಾಜರಾದವರು, ಸ್ಥಳಾಂತರಗೊಂಡವರು, ಮೃತಪಟ್ಟವರು, ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರು ಹಾಗೂ ಇತರ ನಿರ್ದಿಷ್ಟ ವರ್ಗಗಳಿಗೆ ಸೇರಿದ 1,07,96,339 ಮತದಾರರನ್ನು ಗುರುತಿಸಲಾಗಿತ್ತು.
ಆಗಸ್ಟ್ 24ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 4,46,35,975 ಮತದಾರರ ಹೆಸರುಗಳಿದ್ದವು. ಮತದಾರರ ವಿವರಗಳಲ್ಲಿನ ತಾರ್ಕಿಕ ವ್ಯತ್ಯಾಸಗಳು ಮತ್ತು ಮ್ಯಾಪಿಂಗ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು 43,82,824 ನೋಟಿಸ್ಗಳನ್ನು ಸಹ ಜಾರಿಗೊಳಿಸಿತ್ತು.
ಈ ಬೆಳವಣಿಗೆಗಳು ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸೂಕ್ತ ದಾಖಲೆಗಳ ನಿರ್ವಹಣೆಯ ಅಗತ್ಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿವೆ. ವಿಶೇಷವಾಗಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಸಂದರ್ಭದಲ್ಲಿ ನಿಯಮಾನುಸಾರ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಒತ್ತಾಯ ಕೇಳಿಬಂದಿದೆ.