ತಾಳಿಕೋಟಿ

ಖಾಸ್ಗತ ಶಿವಯೋಗಿಗಳ ಸಂಭ್ರಮದ ರಥೋತ್ಸವ

ಖಾಸ್ಗತ ಶಿವಯೋಗಿಗಳ ಸಂಭ್ರಮದ ರಥೋತ್ಸವ

ತಾಳಿಕೋಟೆ12: ಪಟ್ಟಣದ ಆರಾಧ್ಯ ದೈವ ಖಾಸ್ಗತೇಶ್ವರ ಮಠದ ಜಾತ್ರಾ ಮಹೋತ್ಸವದಂಗವಾಗಿ ಮಂಗಳವಾರ ಸಂಜೆ ಮಹಾರಥೋತ್ಸವವು ಭಕ್ತಿ, ಶ್ರದ್ಧೆಗಳಿಂದ ನೆರವೇರಿತು.   

ಬೆಳಿಗ್ಗೆ ಗಂಗಸ್ಥಳ ನಿಮಿತ್ತ ಪಲ್ಲಕ್ಕಿ ಉತ್ಸವ ಹಾಗೂ ಖಾಸ್ಗತ ಶಿವಯೋಗಿಗಳ ಭವ್ಯ ಭಾವಚಿತ್ರದ ಮೆರವಣಿಗೆ ನಡೆಯಿತು. ಬೆಳ್ಳಿಬಣ್ಣದ ಸಾರೋಟಿನಲ್ಲಿ ಪೀಠಾಧಿಪತಿ ಸಿದ್ದಲಿಂಗದೇವರು ಭಕ್ತರಿಗೆ ಆಶೀರ್ವಾದ ನೀಡುತ್ತ ಮುನ್ನಡೆದರು.  ಇವರ ಮುಂದೆ ಆನೆ ಅಂಬಾರಿಯ ಮೇಲೆ ಖಾಸ್ಗತ ಶಿವಯೋಗಿಗಳ ಬೆಳ್ಳಿ ಮೂರ್ತಿಯನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. 

ಸಂಜೆ ಹೂ-ತೋರಣಗಳಿಂದ ಕಬ್ಬು ಬಾಳೆಗಳಿಂದ ಭವ್ಯವಾಗಿ ಅಲಂಕೃತವಾಗಿದ್ದ ರಥವನ್ನು ಶ್ರೀಮಠದಿಂದ ಅಂಬಾಭವಾನಿ ಮಂದಿರದವರೆಗೆ ಭಕ್ತಾದಿಗಳು ಎಳೆಯುವ ಮೂಲಕ ಮಹಾರಥೋತ್ಸವ ಸಂಪನ್ನವಾಯಿತು. ರಥೋತ್ಸವದ ಇಕ್ಕೆಲಗಳಲ್ಲಿ ನೆಲ, ಕಟ್ಟೆ ಮಾಳಿಗೆಗಳ ಮೇಲೆ ಸೇರಿದ್ದ ಭಕ್ತರು ರಥೋತ್ಸವದಲ್ಲಿ ಹೂವು, ಕಾಯಿ, ಹಣ್ಣು, ಉತ್ತತ್ತಿ, ಬಾಳೆ, ಕಬ್ಬು ಎಸೆದು ಭಕ್ತಿಯಿಂದ ಮಣಿದು  ಸಂಭ್ರಮಿಸಿದರು. ಜಾತ್ರೆಯಲ್ಲಿ ದೊರೆವ ದೊಡ್ಡ ಸದ್ದು ಮಾಡುವ ಪೀಪಿಗಳನ್ನು ಊದುತ್ತ, ಬಲೂನಗಳನ್ನು ಮೇಲೆ ಹಾರಿಸುತ್ತ ಯುವಪಡೆಗಳು ಜನತೆಗೆ ಸಂಭ್ರಮ ಹೆಚ್ಚಿಸಿದರು. 

ಜಿಟಜಿಟಿ ಮಳೆಯಲ್ಲೂ ತಗ್ಗದ ಸಂಭ್ರಮ:- ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ ಜಿಟಿಜಿಟಿ ಮಳೆ ಇಂದೂ ಮುಂದುವರೆದಿತ್ತು. ಇದು ಭಕ್ತರ ಜಾತ್ರಾ ಸಂಭ್ರಮಕ್ಕೆ ಅಡ್ಡಿಯಾಗಲಿಲ್ಲ. ಉತ್ಸವದಲ್ಲಿ ಕರಡಿಮಜಲು, ಗೊಂಬೆ ಮೇಳ, ಪಟ್ಟಣದ ಬ್ಯಾಂಡ್ ಸೆಟ್, ಡಿಜೆಗಳು ಮೆರವಣಿಗೆಯ ಮೆರುಗು, ಉತ್ಸಾಹ ಹೆಚ್ಚಿಸಿದವು. ಬಣ್ಣದ ಹೊಗೆ, ಪಟಾಕಿ ಸದ್ದು ಕಿವಿಗಡಚಿಕ್ಕುವ ಡಿಜೆ ಸದ್ದಲ್ಲಿ ಡಿಜೆ ಸದ್ದಿಗೆ ಯುವಪಡೆ ಕುಣಿದು ಕುಪ್ಪಳಿಸಿದರು. ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲದೇ ನೆರೆ ರಾಜ್ಯಗಳಿಂದಲೂ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.   

ಪ್ರಸಾದ- ಪಾನೀಯ ವಿತರಣೆ ಪೈಪೋಟಿ:- ಜಾತ್ರೆಗೆ ಬರುವ ಭಕ್ತಾಧಿಗಳಿಗಾಗಿ ಯುವಕರು ಹಾಗೂ ವಿವಿಧ ತಂಡಗಳು ಪೈಪೋಟೊಗೆ ಬಿದ್ದರವಂತೆ ಪ್ರಸಾದ ವ್ಯವಸ್ಥೆ ಮಾಡಿದ್ದರು. ವಿಠ್ಠಲ ಮಂದಿರದ ಬಳಿ ಭಗತಸಿಂಗ ಯುವಕ ಮಂಡಳ, ನಮ್ಮ ಗೆಳೆಯರ ಬಳಗ, ಸಹೃದಯಿ ಗೆಳೆಯರ ಬಳಗ, ಎಬಿಡಿ ಪೌಂಡೇಶನ್ ಹಾಗೂ ಕುಚಿಕು ಗೆಳೆಯರ ಬಳಗ, ಸಜ್ಜನ ಸಮಾಜ ಬಾಂಧವರು,ಅನಂತಪುರ ಪೇಟೆ ಗೆಳೆಯರ ಬಳಗ, ಭಗವತಿ ಜ್ಯುವೆಲ್ಲರ್ಸ್‌, ಎಸ್‌.ಎಸ್‌.ಅಗರವಾಲ, ರಾಜವಾಡೆಯಲ್ಲಿ ಮುಸ್ಲಿಂ ಯುವಕರು ಬಂದ ಭಕ್ತಾದಿಗಳಿಗಾಗಿ ಪ್ರಸಾದ, ನೀರಿನ ವ್ಯವಸ್ಥೆ ಮಾಡಿದ್ದರು. 


ಸುದ್ದಿ ಓದಿ