ರಾಣಿಬೆನ್ನೂರ ನಿಷೇಧಾಜ್ಞೆಯಿಂದ ನಗರದ ವಿವಿಧ ಮಾರುಕಟ್ಟೆ ಬಂದ್
ರಾಣಿಬೆನ್ನೂರ 24: ದೇಶದಲ್ಲಿ ಕೊರೊನಾ ವೈರೈಸ್ ಮಹಾಮಾರಿ ಹರಡದಂತೆ ಮುಂಜಾಗೃತ ಕ್ರಮವಾಗಿ ಸರ್ಕಾರದ ಕೊವಿಡ್ ಮಾರ್ಗಸೂಚಿ ಅನ್ವಯ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿದ ಹಿನ್ನಲೆಯಲ್ಲಿ ತಾಲೂಕಾ ಆಡಳಿತ ಕಟ್ಟುನಿಟ್ಟಿನ ಕ್ರಮಕೈಗೊಂಡ ಕಾರಣ ನಗರ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಶನಿವಾರ ಅಂಗಡಿ ಮುಂಗಟ್ಟುಗಳು ಮುಚ್ಚಿರುವುದರಿದ ಕೊರೊನಾ ವೈರಸ್ ತಡೆಗೆ ಬೆಂಬಲ ಕಂಡು ಬಂದಿತು.
ಸರ್ಕಾರದ ಕೊವಿಡ್ ಮಾರ್ಗಸೂಚಿ ಅನ್ವಯ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಶನಿವಾರ ಬೆಳಗ್ಗೆ 6 ಗಂಟೆಯಿಂದ 10ರ ವರೆಗೆ ಅಗತ್ಯ ಸೇವೆಗಳಾದ ಹಣ್ಣು, ತರಕಾರಿ, ಹಾಲು ಹಾಗೂ ಪತ್ರಿಕೆ ಸೇವೆಗಳಿಗೆ ಅವಕಾಶ ನೀಡಿದ್ದರಿಂದ 4 ಗಂಟೆಗಳ ಕಾಲ ನಿರಾತಂಕವಾಗಿ ವ್ಯವಹಾರ ವಹಿವಾಟ ನಡೆದವು. 10 ಗಂಟೆಯ ನಂತರ ವ್ಯವಹಾರ ವಹಿವಾಟ ನಡೆಸುತ್ತಿರುವವರಿಗೆ ಪೊಲೀಸರು ಎಚ್ಚರಿಕೆ ನೀಡಿ ಬಾಗಿಲು ಮುಚ್ಚಿಸಿದ್ದು ಕಂಡು ಬಂದಿತು. ಅದರಲ್ಲೂ ಮೊಂಡುತನದಿಂದ ಓಡಾಡುತ್ತಿರುವ ಕೆಲವರನ್ನು ಪೊಲೀಸರು ಚಾಟಿ ಏಟು ನೀಡುವ ಮೂಲಕ ಮನೆಗೆ ವಾಪಾಸ ಕಳುಹಿಸಿದ್ದು ಕಂಡು ಬಂದಿತು. ಒಟ್ಟಾರೆ ನಗರ ನಿಶಬ್ದವಾಗಿತ್ತು.
ಬಸ್ ನಿಲ್ದಾಣದಲ್ಲಿ ಕೆಲವು ಅಗತ್ಯ ಸೇವೆಗಳಿಗಾಗಿ ಬಸ್ಗಳು ಸಂಚರಿಸಿದವು. ಬೆಳಗ್ಗೆ 10 ಗಂಟೆಯವರೆಗೆ ಕೆಲವು ಆಟೋ, ಮತ್ತಿತರರ ಖಾಸಗಿ ವಾಹನಗಳು ಸಂಚರಿಸಿದವು. ಸರಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳು ರಜೆ ಇದ್ದ ಪ್ರಯುತ್ತ ವಿದ್ಯಾರ್ಥಿಗಳು ಕಂಡು ಬರಲಿಲ್ಲ. ಇದರಿಂದ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಬಿಕೋ ಎನ್ನುತ್ತಿತ್ತು.
ಎಪಿಎಂಸಿ ಮಾರುಕಟ್ಟೆ ಮತ್ತು ದನದ ಮಾರುಕಟ್ಟೆ, ನೇಹರು ಮತ್ತು ದೊಡ್ಡಪೇಟೆ ತರಕಾರಿ ಮಾರುಕಟ್ಟೆ, ದಲಾಲಿ ಅಂಗಡಿಗಳು, ಅಂಗಡಿ-ಮುಗ್ಗಟ್ಟುಗಳು, ಚಲನಚಿತ್ರ ಮಂದಿರಗಳು ಮತ್ತು ಮಸೀದಿ, ಚರ್ಚ, ದೇವಸ್ಥಾನಗಳು ಸಂಪೂರ್ಣ ಬಂದಾಗಿದ್ದವು. ಹೋಟಲ್ಗಳು, ಬಾರುಗಳು, ರೆಸ್ಟೋರೆಂಟುಗಳು ಪಾರ್ಸಲ ಮಾತ್ರ ಸೀಮಿತವಾಗಿದ್ದವು. ಕಿರಾಣಿ, ಬಟ್ಟೆ ಮತ್ತಿತರ ಅಂಗಡಿಗಳು ಬಾಗಿಲು ಮುಚ್ಚಿದ್ದರಿಂದ ನಗರ ಬಿಕೋ ಅನ್ನುತ್ತಿತ್ತು.
ರೈಲ್ವೆ ನಿಲ್ದಾಣ, ಅಂಚೆ ವೃತ್ತ ಮತ್ತಿತರ ಜನನಿಭೀಡ ಪ್ರದೇಶಗಳಲ್ಲಿ ಜನಜಂಗುಳಿ ಕಂಡು ಬರಲಿಲ್ಲ. ಒಟ್ಟಾರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅತೀ ಕಡಿಮೆ ಜನರ ಸಂಚಾರ ಕಂಡು ಬಂದಿತು. ಕೊರೋನಾ ವೈರೈಸ್ ಮಹಾಮಾರಿಗೆ ಬೆದರಿದ ಜನರು ಸ್ವಯಂಪ್ರೇರಿತರಾಗಿ ಮನೆಯ ಹೊರಗೆ ಕಂಡು ಬರಲಿಲ್ಲ. ಸೆಮಿ ಲಾಕ್ ಡೌನ್ ಯಶಸ್ವಿಯಾಯಿತು.