ಸತ್ತಿಗೇರಿಯಲ್ಲಿ ರಾಮೋತ್ಸವ: ಹೋಮ ಹವನ, ಭಜನಾ ಹಾಗೂ ಮಹಾಪ್ರಸಾದ
ಯರಗಟ್ಟಿ 22: ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಳಿಮಲ್ಲೇಶ್ವರ ರಂಗಮಂದಿರದಲ್ಲಿ ನಡೆದ ರಾಮೋತ್ಸವದಲ್ಲಿ ಹೋಮ ಹವನ ಹಾಗೂ ಭಜನಾ, ಮಹಾಪ್ರಸಾದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಪಾಲ್ಗೊಂಡರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಗೋಡಿ
ಕಳೆದ ಹಲವು ಶತಮಾನಗಳಿಂದ ಕೋಟ್ಯಂತರ ಭಕ್ತರ ನೀರೀಕ್ಷೆಯಾಗಿದ್ದ ಶ್ರೀರಾಮನು ಜನಿಸಿದ ಸ್ಥಳದಲ್ಲಿಯೇ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಅಭೀಷ್ಟೆಯು ಸಾಕಾರವಾಗುತ್ತಿರುವ ಅಮೃತ ಘಳಿಗೆ ಇದು ಎಂದರು.
ಅಯೋಧ್ಯೆಯಲ್ಲಿ 2020ರ ಆ.5ರಂದು ದೇಶದ ಗಣ್ಯ ಮಾನ್ಯರು, ಸಾಧು, ಸತ್ಪುರುಷರು, ಮಠಾಧೀಶರ ದಿವ್ಯ ಸಾನ್ನಿಧ್ಯದಲ್ಲಿ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಶ್ರೀರಾಮನ ದೇಗುಲಕ್ಕೆ ರಜತ ಇಟ್ಟಿಗೆಗಳನ್ನಿಟ್ಟು ಶಿಲಾನ್ಯಾಸ ನೆರವೇರಿಸಿದ್ದರು.
ಆ ಶುಭ ಸಂದರ್ಭದಲ್ಲಿ ನಾವೂ ಉಪಸ್ಥಿತರಿದ್ದು ಸಾಕ್ಷೀಕರಿಸಿದ್ದು ಸದ್ಭಕ್ತರಿಗೆಲ್ಲ ಹೆಮ್ಮೆಯ ವಿಷಯವಾಗಿತ್ತು. ಅಂತೆಯೇ ಮಂದಿರ ಲೋಕಾರೆ್ಣಯ ಈ ಶುಭ ಸಂದರ್ಭವೂ ಕೂಡ. ಶ್ರೀರಾಮನನ್ನು ಶ್ರದ್ಧಾಭಕ್ತಿಯಿಂದ ಅರ್ಚಿಸುವ ಭಾರತೀಯರಿಗೆ 2024ರ ಜನವರಿ 22 ಅವಿಸ್ಮರಣೀಯ ದಿನವಾಗಿದೆ.
ರಾಮ ರಾಜ್ಯದ ಹರಿಕಾರ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಭಾರತೀಯರ ಪಾಲಿನ ಆರಾಧ್ಯ ದೈವ. ಮಹಾವಿಷ್ಣುವಿನ ಅವತಾರಿ. ಹಲವು ಮಂದಿ ಮಹಾತ್ಮರು, ಅವತಾರ ಪುರುಷರು ಬಾಳಿ ತಮ್ಮ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಸಿದ ಈ ಪುಣ್ಯ ಭೂಮಿ ಭಾರತದ ಮಹತ್ವವನ್ನು ಸಾರಿದವರಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನಿಗೆ ಅಗ್ರಸ್ಥಾನ ಶ್ರೀರಾಮಚಂದ್ರ ಒಬ್ಬ ಉತ್ತಮ ಆಡಳಿಗಾರನೂ ಹೌದು.
ಹೆತ್ತವರಿಗೆ ಸತ್ಪುತ್ರ ನಾಗಿದ್ದ, ಪ್ರಜೆಗಳ ಪಾಲಿಗೆ ಆದರ್ಶ ಪುರುಷೋತ್ತಮನಾಗಿದ್ದ. ಶ್ರೀರಾಮಚಂದ್ರ ಮತ್ತು ಮಾತೆ ಜಾನಕಿಯ ಜೀವನ ಸ್ತ್ರೀ ಪುರುಷರೆನ್ನದೆ ಸಕಲರಿಗೂ ಆದರ್ಶ. ರಾಮ ಎಂದರೆ ದೈವ, ರಾಮ ಎಂದರೆ ಬೆಳಕು. ರಾಮ ಎಂದರೆ ಧರ್ಮ, ರಾಮ ಎಂದರೆ ಸಂಸ್ಕೃತಿ. ಪ್ರಜಾಕಲ್ಯಾಣಕ್ಕಾಗಿ ಸದಾ ಸ್ಪಂದಿಸುತ್ತಿದ್ದ ರಾಜಾರಾಮ ಎಂದಿಗೂ ಜೀವಂತ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾದೇವಪ್ಪ ಗೋಡಿ, ಗುರು ವಾಲಿ, ಬಸವರಾಜ ಮಿರ್ಜಿ, ಉಮೇಶ ಮಾಗುಂಡನ್ನವರ, ಶ್ರೀಶೈಲ ಯರಗಣವಿ, ಈರಣ್ಣಾ ಹೊಸಮನಿ, ಪ್ರಕಾಶ ವಾಲಿ, ಶ್ರೀಶೈಲ ಸಂಗಪ್ಪನವರ, ಪ್ರಕಾಶ ಪತ್ತಾರ ದಂಪತಿಗಳು, ಪ್ರಮೋದ ಮಠಪತಿ, ಪತ್ರೆಪ್ಪ ಮಿಲ್ಲಾನಟ್ಪಿ, ವಿಠ್ಠಲ ಭಾಂಗಿ ಸೇರಿದಂತೆ ಅನೇಕ ಇದ್ದರು.