ಬ್ಯಾಡ್ಗಿ

ಮೆಣಸಿನಕಾಯಿ ಮಾರುಕಟ್ಟೆಗೆ ರಾಜುಭಾಯಿ ಭೇಟಿ: ಪರಿಶೀಲನೆ

ಮೆಣಸಿನಕಾಯಿ ಮಾರುಕಟ್ಟೆಗೆ  ರಾಜುಭಾಯಿ ಭೇಟಿ: ಪರಿಶೀಲನೆ
ಪ್ರಸಿದ್ಧ ಎವರೆಷ್ಟ್ ಮಸಾಲಾ ವ್ಯವಸ್ಥಾಪಕ ನಿರ್ದೇಶಕ ರಾಜುಭಾಯಿ ವಾಡಿಭಾಯಿಶಾ ಪಟ್ಟಣದ ಕೋಲ್ಡ್ ಸ್ಟೋರೇಜ್ ಒಂದಕ್ಕೆ ಭೇಟಿ

ಬ್ಯಾಡಗಿ 02:ರಾಜ್ಯದಲ್ಲಿ ಮೆಣಸಿನಕಾಯಿ ಬೆಳೆಗೆ ಗುಣಮಟ್ಟದ ಭೂಮಿ ಮತ್ತು ಹವಾಮಾನವಿದೆ, ಹೀಗಿದ್ದರೂ ಸಹ ಬ್ಯಾಡಗಿ ತಳಿ ಮೆಣಸಿನಕಾಯಿ ತಳಿ ನಶಿಸುವ ಹಂತಕ್ಕೆ ತಲುಪಿದ್ದು ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಶೋಧನಾ ಕೇಂದ್ರ ಆರಂಭಿಸುವುದೂ ಸೇರಿದಂತೆ ಆಂಧ್ರ ಮತ್ತು ತೆಲಂಗಾಣ ಮಾದರಿಯಲ್ಲಿ ರಾಜ್ಯ ಸರ್ಕಾರ ಬೆಳೆವಿಮೆ ವ್ಯಾಪ್ತಿಗೆ ತರುವ ಮೂಲಕ ರೈತ ಬೆಳೆಗಾರನ್ನು ಉತ್ತೇಜಿಸಬೇಕಾಗಿದೆ ಎಂದು ಪ್ರಸಿದ್ಧ ಎವರೆಷ್ಟ್ ಮಸಾಲಾ ವ್ಯವಸ್ಥಾಪಕ ನಿರ್ದೇಶಕ ರಾಜುಭಾಯಿ ವಾಡಿಭಾಯಿಶಾ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ವಿಶ್ವಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ಬ್ಯಾಡಗಿ ತಳಿ ಮೆಣಸಿನಕಾಯಿ ನಶಿಸುವ ಹಂತಕ್ಕೆ ತಲುಪಿದೆ, ಈ ಮೊದಲು ರಾಜ್ಯದಲ್ಲಿ 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಣ ಸಿನಕಾಯಿ ಬೆಳೆಯಲಾಗುತ್ತಿತ್ತು,ಇದೀಗ ಒಂದು ಲಕ್ಷಕ್ಕಿಂತ ಕಡಿಮೆ ಹೆಕ್ಟೇರ್‍ಗೆ ಬಂದಿಳಿದಿರುವುದು ದುರ್ದೈವದ ಸಂಗತಿ ಪ್ರಸಕ್ತ ವರ್ಷ ಗುಣಮಟ್ಟದ ಮೆಣಸಿನಕಾಯಿ ಸರಾಸರಿ ಪ್ರತಿ ಕ್ವಿಂಟಲ್‍ಗೆ ಮೂವತ್ತು ಸಾವಿರ ರೂ.ಗಳಿಗೆ ಮಾರಾಟವಾಗಿದೆ, ಇದರ ಲಾಭವನ್ನು ವ್ಯಾಪಾರಸ್ಥರ ಜೊತೆಗೆ ರೈತರಿಗೂ ತಲುಪಬೇಕಾದಲ್ಲಿ ಬೆಳೆಗಾರರ ಸಂಖ್ಯೆ ಹೆಚ್ಚಿಸಬೇಕಾಗಿದೆ ಎಂದರು.

ಗುಣಮಟ್ಟಣದ ಬೆಳೆಗೆ ಉತ್ತಮ ದರ: ಎವರೆಷ್ಟ ಮಸಾಲಾ ಕಂಪನಿಯು ಗುಣಮಟ್ಟದ ಬೆಳೆಗೆ ಉತ್ತಮ ದರವನ್ನೇ ನೀಡುತ್ತಿದೆ, ಆದರೆ ರೈತ ಸಮುದಾಯ ಹಸಿಬಿಸಿ ಮಾಲನ್ನು ಮಾರಾಟಕ್ಕಿಡುತ್ತಿದ್ದಾರೆ, ಮೆಣಸಿನಕಾಯಿ ತರಕಾರಿಯಂತಲ್ಲ ಒಂದು ಹಂ ತದಲ್ಲಿ ಸುಮಾರು 2 ವರ್ಷಗಳಷ್ಟು ಕಾಲ ಮೆಣಸಿನಕಾಯಿ ಕಾಯ್ದಿಡಬೇಕಾಗುತ್ತದೆ, ಹೀಗಾಗಿ ವೈಜ್ಞಾನಿಕ ರೀತಿಯಲ್ಲಿ ರೈತರು ಅಭಿವೃದ್ಧಿ ಹೊಂದುವ ಮೂಲಕ ಒಣಗಿಸಿದ ಮಾಲನ್ನೇ ಮಾರಾಟಕ್ಕೆ ತರುವಂತೆ ಮನವಿ ಮಾಡಿದರು.

ಲಾಸ್ & ಪ್ರಾಫಿಟ್ ಸರ್ವೇಯಾಗಲಿ: ಮೆಣಸಿನಕಾಯಿ ಕ್ಷೇತ್ರದಲ್ಲಿರುವ ರೈತರು ಮತ್ತು ವ್ಯಾಪಾರಸ್ಥರ ಲಾಭ ನಷ್ಟದ (ಲಾಸ್ & ಪ್ರಾಫಿಟ್) ಕುರಿತು ಸಮೀಕ್ಷೆಗಳು ಸರ್ಕಾರಗಳ ಕೈಯಲ್ಲಿರಬೇಕು, ಇಲ್ಲದಿದ್ದರೇ ಶತಮಾನ ಗತಿಸಿದರೂ ದೇಶದಲ್ಲಿರುವ ಮೆಣಸಿನಕಾಯಿ ಬೆಳೆಗಾರರು ಆರ್ಥಿಕವಾಗಿ ಬಲಿಷ್ಟವಾಗಲು ಸಾಧ್ಯವಿಲ್ಲ ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳುವಂತೆ ಮನವಿ ಮಾಡಿದರು.

ಬೃಹತ್ ಉದ್ಯಮ ಮೆಣಸಿನಕಾಯಿ ಮೊದಲಿನಂತಲ್ಲ, ಕಳೆದ ಮೂರ‍್ನಾಲ್ಕು ದಶಕಗಳಲ್ಲಿ ಒಂದು ದೊಡ್ಡ ಬೃಹತ್ ಉದ್ಯಮ ವಾಗಿ ಬೆಳೆದಿದೆ, ಮೊದಲು ನೂರಾರು ಕೋಟಿ ವಹಿವಾಟಿದ್ದ ಜಾಗದಲ್ಲಿ ಸಾವಿರಾರು ಕೋಟಿಗೆ ಹೆಚ್ಚಿದೆ, ಓಲಿಯೋರಿಸನ್ ಸೇರಿದಂತೆ ಮಸಾಲಾ ಮತ್ತು ಫಾರ್ಮಾಸಿಟಿಕಲ್ ಉದ್ಯಮಗಳಿಗೆ ಮೆಣಸಿನಕಾಯಿ ಆಧಾರ ಸ್ಥಂಭವಾಗಿ ನಿಂತಿದೆ, ಪೌಡರ್ ಫ್ಯಾಕ್ಟರಿ, ಕೋಲ್ಡ್ ಸ್ಟೋರೇಜ್ ಎಲ್ಲೆಂದರಲ್ಲಿ ಸ್ಥಾಪನೆಯಾಗಿವೆ, ಇದರಿಂದ ತೆರಿಗೆ ರೂಪದಲ್ಲಿ ವಿವಿಧ ಹಂತದ ಸರ್ಕಾರಕ್ಕೆ ಆದಾಯ ಸೇರಿದಂತೆ ಲಕ್ಷಾಂತರ ಜನ ಬಡವರಿಗೆ ಉದ್ಯೋಗ ಸೃಷ್ಟಿಸಿದ್ದು ಮೆಣಸಿನಕಾಯಿ ಉದ್ಯಮ ನಿರಂತರವಾಗಿ ಉಳಿಯಬೇಕಾದಲ್ಲಿ ಮೆಣಸಿನಕಾಯಿ ಬೆಳೆಯುವ ರೈತ, ಮಾರಾಟಕ್ಕಿರುವ ಎಪಿಎಂಸಿ ಮತ್ತು ಉದ್ಯಮದಡಿ ಬರುವ ಕಾರ್ಖಾನೆಗಳಿಗೆ ಕೇಂದ್ರ ಸರ್ಕಾರ ಉತ್ತೇಜನ ನೀಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿ.ಎಂ.ಛತ್ರದ, ರಾಜಶೇಖರ ಮಾಗನೂರ, ಮುನ್ನಾ ಗುಲ್ಮಿ, ಎ.ಆರ್.ನದಾಫ್, ಬಸವರಾಜ ಸುಂಕಾಪುರ, ಎಂ.ಎಂ.ಛತ್ರದ, ನವಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚಿಲ್ಲಿ ಬೋರ್ಡ ಸ್ಥಾಪನೆಯಾಗಲಿ:ಕೇಂದ್ರ ಸರ್ಕಾರದ ಸ್ವಾಮಿತ್ವದ ಸಾಂಬಾರು ಮಂಡಳಿ (ಸ್ಪೈಸಿಸ್ ಬೋರ್ಡ)ಯಿಂದ ಮೆಣ ಸಿನಕಾಯಿ ಬೇರ್ಪಡಿಸಿ ಕಾಫಿ ಮತ್ತು ತಂಬಾಕು (ಟೊಬ್ಯಾಕೋ) ಮಾದರಿಯಲ್ಲಿ, ಪ್ರತ್ಯೇಕವಾದ ಚಿಲ್ಲಿ ಬೋರ್ಡ ರಚಿಸುವ ಮೂಲಕ ಅಗತ್ಯ ಅನುದಾನ ಒದಗಿಸಿ, ವೈಜ್ಞಾನಿಕ ಮಾದರಿಯಲ್ಲಿ ಒಣಗಿಸುವಿಕೆ, ಹೊಸ ತಂತ್ರಜ್ಞಾನ ಬಳಸಿ ರೈತರಿಗೆ ರೆಡಿ ಪ್ಯಾಕೇಜ್ ಚೀಲಗಳು ಮಾರಾಟಕ್ಕೆ ತರುವಂತೆ ನೋಡಿಕೊಳ್ಳಬೇಕು..

ರಾಜು ಭಾಯಿ ವಾಡಿಭಾಯಿಶಾ

ಎವರೆಷ್ಟ್ ಮಸಾಲಾ ವ್ಯವಸ್ಥಾಪಕ ನಿರ್ದೇಶಕ 

ಸುದ್ದಿ ಓದಿ