ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ
ರಾಣೇಬೆನ್ನೂರ:ಫೆ06: ರಾಜ್ಯ ಸರ್ಕಾರ ಗ್ರಾಮೀಣ ರಸ್ತೆಗಳ ಸುಗಮ ಸಂಚಾರ ಮತ್ತು ಸಮಗ್ರ ಅಭಿವೃದ್ಧಿಗೆ ಸದಾ ಬದ್ದವಾಗಿದೆ. ಗ್ರಾಮೀಣ ರಸ್ತೆಗಳು ಪರಿಪೂರ್ಣಗೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧಿಸದಂತಾಗುತ್ತದೆ ಎನ್ನುವ ಮಹತ್ವದ ಉದ್ದೇಶವನ್ನು ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ರಾಜ್ಯದ ಸಂಪೂರ್ಣ ಅಭಿವೃದ್ಧಿಗೆ ಮುಂದಾಗಿದ್ದು, ಜನರ ಪ್ರೀತಿ ವಿಶ್ವಾಸಕ್ಕೆ ಸರ್ಕಾರ ಪಾತ್ರವಾಗಿದೆ ಎಂದು ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕ ಅರುಣಕುಮಾರ ಪೂಜಾರ ಹೇಳಿದರು. ಶನಿವಾರ ತಾಲೂಕಿನ ಅಂಕಸಾಪುರ ತಾಂಡೆಯ ಸೇವಾಲಾಲ್ ದೇವಸ್ಥಾನ ಸಭಾಂಗಣದಲ್ಲಿ ನಡೆದ ಗ್ರಾಮ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ನಂತರ ಮಾಧ್ಯಮದೊಂದಿಗೆ ಕ್ಷೇತ್ರ ಅಭಿವೃದ್ಧಿ ಕುರಿತಂತೆ ಸುಧೀರ್ಘವಾಗಿ ಮಾತನಾಡಿದರು. ಅಂಕಸಾಪುರ ತಾಂಡೆಯ ಸೇವಾಲಾಲ್ ದೇವಸ್ಥಾನ ರಸ್ತೆಯಲ್ಲಿ 30 ಲಕ್ಷ ರೂ. ವೆಚ್ಚದ ಕಾಮಗಾರಿ ಇಂದಿನಿಂದ ಪೂಜೆ ಸಲ್ಲಿಸಿ ಆರಂಭಿಸಲಾಗಿದೆ. ಜಲಸಂಪನ್ಮೂಲ ಮತ್ತು ಲೊಕೋಪಯೋಗಿ ಇಲಾಖೆಯಿಂದ ಒಟ್ಟು 4.80 ಲಕ್ಷ, 3 ಕೋಟಿ ಸೇರಿ ಒಟ್ಟು 7.80 ಕೋಟಿ ಹಣ ಬಿಡುಗಡೆಯಾಗಿದೆ. ಹೊಳೆಆನ್ವೇರಿ ಯೋಜನೆಯಿಂದ 18 ಕೆರೆಗೆ ನೀರು ಹರಿಯಲಿದೆ. ಇದಕ್ಕಾಗಿ 206 ಕೋಟಿ ಜಲಸಂಪನ್ಮೂಲ ಇಲಾಖೆ ಸಣ್ಣ ನೀರಾವರಿ ಸಚಿವರಾದ ಮಾಧುಸ್ವಾಮಿ ಅವರು ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಇದೇ ವೇಳೆ ನಗರ ಹೊರವಲಯದ ಅಡವಿ ಆಂಜನೇಯ ಬಡಾವಣೆಯಲ್ಲಿ ಆಶ್ರಯ ಯೋಜನೆಯ 490 ಮನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು. ರಾಣೇಬೆನ್ನೂರಗೆ ದಿನದ 24 ತಾಸು ನೀರು ಹರಿಸಲು ಸಿದ್ಧತೆಯಾಗಿದೆ. ರೈತರ ಅನುಕೂಲತೆಗಾಗಿ ಎಪಿಎಂಸಿ ಭವನ ನಿರ್ಮಿಸಲಾಗಿದ್ದು, ಇದರ ಉದ್ಘಾಟನೆಗೆ ಇದೇ ತಿಂಗಳು ಮುಖ್ಯಮಂತ್ರಿಗಳು ನಗರಕ್ಕೆ ಬರಲಿದ್ದಾರೆ. ಅಂದೇ 206 ಕೋಟಿ ಕಾಮಗಾರಿ ಶಂಕು ಸ್ಥಾಪನೆ ನೆರವೇರಿಸಲಾಗುವುದು. 260 ಶಾಲೆಗಳ ಪೈಕಿ 42 ಶಾಲೆಗಳಲ್ಲಿ ಸ್ಮಾರ್ಟ್ಸ್ಕ್ಲಾಸ್ ಅಳವಡಿಸಲು ಗುರುತಿಸಲಾಗಿದೆ. 86 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ಶೌಚಾಲಯಗಳ ನಿರ್ಮಿಸಲು ಮುಂದಾಗಿದ್ದೇವೆ ಎಂದರು.
ನಗರ ವ್ಯಾಪ್ತಿಯಲ್ಲಿ 13 ಕೊಳಚೆ ಪ್ರದೇಶವೆಂದು ಗುರುತಿಸಲಾಗಿದ್ದು, ಅಭಿವೃದ್ಧಿ ಮಂಡಳಿಯಿಂದ ಒಟ್ಟು 2 ಸಾವಿರ ಮನೆಗಳ ನಿರ್ಮಾಣಕ್ಕೆ ಅವಕಾಶ ಸಿಕ್ಕಿದೆ. ಪ.ಜಾ, ಪ.ಪಂ ಸೇರಿದಂತೆ ಇತರೆ ಯವರಿಗೆ ಮೂಲ ಧನ ನೀಡುವ ಕುರಿತಂತೆ ಅಭಿವೃದ್ಧಿ ಮಂಡಳಿ ನಿಗದಿಪಡಿಸಿದೆ. 8 ಲಕ್ಷಕ್ಕೂ ಅಧಿಕ ರೂ ವೆಚ್ಚದಲ್ಲಿ ಹೊಸ ಮನೆಗಳು ನಿರ್ಮಾಣವಾಗಲಿವೆ ಎಂದು ಅರುಣಕುಮಾರ ವಿವರಿಸಿದರು ಸುದ್ದಿಗೋಷ್ಠಿಯಲ್ಲಿ ಮೇಡ್ಲೇರಿ ಜಿಪಂ ಸದಸ್ಯ ಬಸವರಾಜ ಹುಲ್ಲತ್ತಿ, ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರು, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ ಸೇರಿದಂತೆ ತಾಪಂ, ಗ್ರಾಪಂ ಸದಸ್ಯರು ಮುಖಂಡರು ಉಪಸ್ಥಿತರಿದ್ದರು.