ರಾಣೆಬೆನ್ನೂರ

ಜಿಲ್ಲಾ ಪತಂಜಲಿ ಯೋಗ ಸಮಿತಿ: ರಥಸಪ್ತಮಿ-108 ಸೂರ್ಯ ನಮಸ್ಕಾರ

ಜಿಲ್ಲಾ ಪತಂಜಲಿ ಯೋಗ ಸಮಿತಿ: ರಥಸಪ್ತಮಿ-108 ಸೂರ್ಯ ನಮಸ್ಕಾರ

ಭಾರತೀಯರು ಧರ್ಮಾಚರಣೆಯಿಂದ ಸದಾ ಸುಖಿಗಳು-ಶ್ರೀ ಪ್ರಕಾಶಾನಂದಜಿ 

ರಾಣೀಬೆನ್ನೂರ 20: ನಮ್ಮ ಪೂರ್ವಜರು ಗುರು-ಕುಲ ಆಶ್ರಯದಲ್ಲಿ ಸದಾಕಾಲ ಯೋಗ-ಧ್ಯಾನ-ಪ್ರಾಣಾಯಾಮ ಮಾಡುವುದರ ಮೂಲಕ ಸದಾಕಾಲ ಶಾಂತಿ-ನೆಮ್ಮದಿ-ಮಾನಸಿಕ ಸಂತೃಪ್ತಿ ಜೊತೆಗೆ ನೂರಾರು ವರ್ಷಗಳ ಕಾಲ ಯಾವುದೇ ರೋಗ-ರುಜಿನಗಳು ಇಲ್ಲದೇ ನೆಮ್ಮದಿಯ ಬದುಕನ್ನು ಸಾಗಿಸುತ್ತಿದ್ದರು. ಇದರಿಂದಲೇ ಭಾರತ ಋಷಿ-ಮುನಿಗಳು ಸಾಧು-ಸಂತರು-ಜ್ಞಾನಿಗಳ ಸಂಪದ್ಭರಿತ ರಾಷ್ಟ್ರವಾಗಲು ಕಾರಣವಾಗಿದೆ ಎಂದು ಸ್ಥಳೀಯ ರಾಮಕೃಷ್ಣ-ವಿವೇಕಾನಂದ ಆಶ್ರಮದ ಶ್ರೀ ಪ್ರಕಾಶಾನಂದಜಿ ಮಹಾರಾಜ್ ಹೇಳಿದರು. 

ಅವರು ಶುಕ್ರವಾರ ಇಲ್ಲಿನ ಆದಿಶಕ್ತಿ ದೇವಸ್ಥಾನದ ಧ್ಯಾನ ಮಂದಿರದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿ ಮತ್ತು ವಿವಿಧ ಸಂಘಟನೆಗಳ ಸಹ ಯೋಗದಲ್ಲಿ ನಡೆದ ರಥ ಸಪ್ತಮಿ ಮತ್ತು ಯೋಗ ಸಾಧಕರಿಂದ 108 ಸೂರ್ಯ ನಮಸ್ಕಾರ ಹಾಗೂ ಹೋಮ ಹವನ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಭಗವಾನ್ ಸೂರ್ಯನಾರಾಯಣನು ತನ್ನ ಪಥವನ್ನು ಬದಲಾಯಿಸಿ ರಥದ ಮೂಲಕ ವಿಶ್ವವನ್ನು ಸಂಚರಿಸುತ್ತಾನೆ ಇದು ಪ್ರತಿ ವರ್ಷದ ಶುಕ್ಲಪಕ್ಷ ಮಾಘ ಮಾಸದಲ್ಲಿ ನಡೆಯುವ ಸಂಸ್ಕಾರ ಪರಂಪರೆಯಾಗಿದೆ ಎಂದ ಶ್ರೀಗಳು ಸ್ವಾಮಿಯು ಛಳಿ-ಮಳಿ-ಗಾಳಿ ಮತ್ತು ಬಿಸಿಲು 4 ತಿಂಗಳ ಅವಧಿಯಲ್ಲಿ ಎಲ್ಲರ ಬದುಕಿನಲ್ಲಿ ಆರೋಗ್ಯವನ್ನು ನೀಡುತ್ತಾನೆ ಎಂದು ವಿವರಿಸಿ ಮಾತನಾಡಿದರು. 

ಭಾರತ ಹೊರತುಪಡಿಸಿ ಪಾಶ್ಚಿಮಾತ್ಯ ದೇಶದಲ್ಲಿ ಬಿಸಿಲು ಎನ್ನುವುದು ಹಗಲುಗನಸು ಹಾಗಾಗಿಯೇ ಪಾಶ್ಚಿಮಾತ್ಯರು ಬಿಸಿಲಿಗೆ ಮೈಯೊಡ್ಡುವುದಕ್ಕಾಗಿಯೇ ಭಾರತದ ನದಿಪಾತ್ರದ ಪ್ರದೇಶಗಳಿಗೆ ಬರುತ್ತಾರೆ. ಉದ್ದೇಶ ಬಿಸಿಲಿನ ಶಾಖವನ್ನು ಹೊಂದುವುದೇ ಆಗಿದೆ ಇದರಿಂದ ಯಾವುದೇ ಚರ್ಮರೋಗ ಕಾಯಿಲೆ ಬರುವುದಿಲ್ಲ ಎನ್ನುವುದಾಗಿದೆ ಅದಕ್ಕಾಗಿಯೇ ಭಾರತೀಯರು ಅಂದಿನಿಂದಲೇ ಋತುಮಾನಗಳಲ್ಲಿ ಯಾವ ರೀತಿ ಬದುಕನ್ನು ಸಾಗಬೇಕು ಎನ್ನುವುದನ್ನು ನಮ್ಮ ಪೂರ್ವಜರು ವೇದ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಸೂರ್ಯನ ಆರಾಧನೆ ಮತ್ತು ನಮಸ್ಕಾರ ವರ್ಷಕ್ಕೆ ಮಾತ್ರ ಮೀಸಲಾಗಬಾರದು ಇದು ಮನ ಮತ್ತು ಮನೆಗಳಲ್ಲಿ ನಿತ್ಯದ ದಿನಚರಿಯಾಗಬೇಕು ಇದರಿಂದ ಮನುಷ್ಯನ ಜೀವನ ಸಾರ್ಥಕತೆ ಪಡೆಯಲಿದೆ ಎಂದರು. 

ಮುಖ್ಯ ಅತಿಥಿಗಳಾಗಿ ನಗರಸಭಾಧ್ಯಕ್ಷೆ ರೂಪಾ ರಾಘವೇಂದ್ರ ಚಿನ್ನಿಕಟ್ಟಿ, ಸದಸ್ಯ ಮಲ್ಲಣ್ಣ ಅಂಗಡಿ, ರಾಕ್‍ಕ್ಲೈಂಬರ್ ಜ್ಯೋತಿರಾಜ್, ಮಹಿಳಾ ಪ್ರಭಾರಿ ವಜ್ರೇಶ್ವರಿ ಲದ್ವಾ, ಜ್ಯೋತಿ ಜಂಬಗಿ, ನಾಗಪ್ಪ ಲಮಾಣಿ ಸೇರಿದಂತೆ ಮತ್ತಿತರ ಗಣ್ಯರು ಮಾತನಾಡಿದರು.  ವೇದಿಕೆಯಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ರವೀಂದ್ರ ಬಿಜಾಪುರ, ಬಿಎಸ್ಟಿ ಅಧ್ಯಕ್ಷ ರಾಮಸಿಂಗ್ ರಾಠೋಡ, ಎಸ್.ಜಿ.ಮುಂಡರಗಿ, ಕೆ.ಸಿ.ಕೋಮಲಾಚಾರ್, ರೇಖಾ ರಮಾಳದ ಮತ್ತು ವಿವಿಧ ಸಂಘಟನೆಗಳ ಮುಖಂಡರು ಪದಾಧಿ ಕಾರಿಗಳು ಉಪಸ್ಥಿತರಿದ್ದರು. ಪಾರ್ವತಿ ಹುಲಿಹಳ್ಳಿ ಪ್ರಾರ್ಥಿಸಿ, ಯುವ ಭಾರತ ಪ್ರಭಾರಿ ಕೆ.ಜಿ.ದಿವಾಕರಮೂರ್ತಿ ಸ್ವಾಗತಿಸಿ, ಯೋಗ ಸಾಧಕ ಕೆ.ಸಿ.ಕೋಮಲಾಚಾರ್ ಪ್ರಾಸ್ಥಾವಿಕವಾಗಿ ಮಾತನಾಡಿದರು. ಯೋಗ ಶಿಕ್ಷಕ ಆರ್.ಬಿ.ಪಾಟೀಲ ನಿರೂಪಿಸಿ ಪಾಂಡುರಂಗ ಪೂಜಾರ ವಂದಿಸಿದರು. ನಂತರ ದೇವಸ್ಥಾನ ಸಭಾಂಗಣದಲ್ಲಿ ಸಾಮೂಹಿಕವಾಗಿ ನಡೆದ 108 ಸೂರ್ಯ ನಮಸ್ಕಾರ ಕಾರ್ಯಕ್ರದಲ್ಲಿ 300ಕ್ಕೂ ಹೆಚ್ಚು ಯೋಗ ಸಾಧಕರು ಪಾಲ್ಗೊಂಡು ಸಾರ್ವಜನಿಕರ ಗಮನ ಸೆಳೆದರು. ಬಾಲಪ್ರತಿಭೆ ಸಾಧಕಿ ಕು:ಲೇಖನಾ ನಿರಂಜನ್ ಅವರನ್ನು ಸಮಿತಿಯ ಪರವಾಗಿ ಸಾಧನೆಗೆ ಅಭಿನಂದಿಸಿ ಸನ್ಮಾನಿಸಲಾಯಿತು.

ಸುದ್ದಿ ಓದಿ