ರಾಣೆಬೆನ್ನೂರ

ಬೆಂಗಳೂರು ಮಾದರಿಯಲ್ಲಿ ರಾಣೇಬೆನ್ನೂರು ಅಭಿವೃದ್ಧಿಯ ಗುರಿ: ಸಚಿವ ಆರ್. ಶಂಕರ್

ಬೆಂಗಳೂರು ಮಾದರಿಯಲ್ಲಿ ರಾಣೇಬೆನ್ನೂರು ಅಭಿವೃದ್ಧಿಯ ಗುರಿ: ಸಚಿವ ಆರ್. ಶಂಕರ್

ರಾಣೇಬೆನ್ನೂರು ಜ.15: ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಪಕ್ಷವನ್ನು ತಳಹಂತದಿಂದ ಕಟ್ಟಿ ರಾಜ್ಯದಲ್ಲಿ ಪಕ್ಷಕ್ಕೆ ಗಟ್ಟಿತನವನ್ನು ತಂದುಕೊಡುವುದರ ಮೂಲಕ ಸಮಗ್ರ ಅಭಿವೃದ್ಧಿಗೆ ಕಂಕಣವನ್ನು ಕಟ್ಟಿಕೊಂಡು ನುಡಿದಂತೆ ನಡೆಯುತ್ತಾ ಜನರ ಪ್ರೀತಿ, ವಿಶ್ವಾಸ ಮತ್ತು ಅಭಿಮಾನವನ್ನು ಗಳಿಸಿದ್ದಾರೆ. ಅಂತಹ ಮುಖ್ಯಮಂತ್ರಿಗಳನ್ನು ಪಡೆದಿರುವುದು ನಾಡಿನ ಜನರ ಸೌಭಾಗ್ಯವೆನ್ನಬೇಕಾಗಿದೆ ಎಂದು ವಿಧಾನಪರಿಷತ್ತ ಸದಸ್ಯ, ನೂತನ ಸಚಿವ ಆರ್.ಶಂಕರ ಹೇಳಿದರು. 

ಶುಕ್ರವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ನಗರಕ್ಕೆ ಪ್ರಥಮಭಾರಿಗೆ ಬಂದ ಅವರು, ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪ್ರಥಮ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. 

ತಾವು ಶಾಸಕರಾಗಿ, ಸಚಿವರಾಗಿದ್ದರೂ ರಾಜೀನಾಮೆ ಕೊಟ್ಟು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ ಸಂಪೂರ್ಣ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎನ್ನುವ ಏಕೈಕ ಉದ್ದೇಶದಿಂದ ಹೊರ ಬಂದಿದ್ದು, ಜಿಲ್ಲೆ ಮತ್ತು ರಾಜ್ಯ ಶಾಶ್ವತವಾಗಿ ಅಭಿವೃದ್ಧಿ ಕಾಣುತ್ತದೆ ಎನ್ನುವ ಕನಸು ನನ್ನದಾಗಿತ್ತು. ನನ್ನ ಕನಸಿನಂತೆ ರಾಜ್ಯದಲ್ಲಿ ಸರ್ಕಾರ ಬಂದಿದ್ದು, ಅಭಿವೃದ್ಧಿ ಪರ್ವವೇ ನಡೆದಿದೆ. ಅಲ್ಲದೇ ತಾಲೂಕಿನ ಜನರ ನಿರೀಕ್ಷೆಯಂತೆ ಪೂರ್ಣ ಪ್ರಮಾಣದ ಸಚಿವರಾಗಿ ಬಂದಿದ್ದೇನೆ. ಹಿಂದೆ ತಾವು ಹೇಳಿದಂತೆ ಇನ್ನೂ ಮುಂದೆ ಬೆಂಗಳೂರು ಮಾದರಿಯಲ್ಲಿ ರಾಣೇಬೆನ್ನೂರು ಅಭಿವೃದ್ಧಿಪಡಿಸುವುದೇ ನನ್ನ ಗುರಿಯಾಗಿದೆ ಎಂದರು. 

ಅಂದು ನೀಡಿದ ಭರವಸೆಯಂತೆ ತಾಲೂಕಿನ ಅಭಿವೃದ್ಧಿಗೆ ಈಗಾಗಲೇ 382.98 ಕೋಟಿ ಅನುದಾನ ತಂದಿದ್ದು, ಅವೇ ಕಾಮಗಾರಿಗಳು ಪ್ರಗತಿಯಲ್ಲಿ ಸಾಗಿವೆ ಎಂದು ವಿವರಿಸಿದರು. 

ರಾಣೇಬೆನ್ನೂರು ನಗರಕ್ಕೆ ತಾವು ಪ್ರಥಮ ಭಾರಿಗೆ ರಾಜಕೀಯಕ್ಕೆ ಬಂದಾಗ ಬೆಂಗಳೂರು ಮಾದರಿಯಲ್ಲಿ ವಾಣಿಜ್ಯ ನಗರ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದೆ. ಆ ಭರವಸೆ ಮತ್ತು ನನ್ನ ಕನಸು ಜನರ ನಿರೀಕ್ಷೆ ಎಲ್ಲವೂ ಈಡೇರಿಸುವ ಕಾಲ ಇದೀಗ ಸನ್ನಿಹಿತವಾಗಿದೆ. ಅದಕ್ಕಾಗಿ ಸಾಕಷ್ಟು ಅನುದಾನವನ್ನು ತರುವ ವಿಶ್ವಾಸ ತಮ್ಮದಾಗಿದ್ದು, ಜಿಲ್ಲೆಯ ಅತಿದೊಡ್ಡ ಕೇಂದ್ರ ಸ್ಥಾನ ಸಂಪೂರ್ಣ ಆಧುನಿಕತೆಯಲ್ಲಿ ನಿರ್ಮಾಣ ಮಾಡಲು ಕಂಕಣಬದ್ಧನಾಗಿದ್ದೇನೆ ಎಂದರು. 

ಮಾಧ್ಯಮದವರ ಹತ್ತು ಹಲವು ಪ್ರಶ್ನೆಗಳಿಗೆ ಅತಿಸೂಕ್ಷ್ಮವಾಗಿ ಉತ್ತರಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ತಾಲೂಕಾಧ್ಯಕ್ಷ ಬಸವರಾಜ ಕೇಲಗಾರ, ನಗರಾಧ್ಯಕ್ಷ ದೀಪಕ್ ಹರಪನಹಳ್ಳಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭಾ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಮುಖಂಡರಾದ ರಾಮಣ್ಣ ಕೋಲಕಾರ, ಡಾ. ಬಸವರಾಜ ಕೇಲಗಾರ, ಭಾರತಿ ಜಂಬಗಿ, ರಾಜು ಅಡಿವೆಪ್ಪನವರ, ಮಂಜುಳಾ ಹತ್ತಿ,  ಅಜೇಯ ಮಠದ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. 

ಸುದ್ದಿ ಓದಿ