ಗುತ್ತಿಗೆ ಕಾರ್ಮಿಕರ ಶೋಷಣೆಗೆ ಕಡಿವಾಣ ಹಾಕಿ: ಎಐಸಿಸಿಟಿಯು

ಗುತ್ತಿಗೆ ಕಾರ್ಮಿಕರ ಶೋಷಣೆಗೆ ಕಡಿವಾಣ ಹಾಕಿ: ಎಐಸಿಸಿಟಿಯು

ರಾಯಚೂರು 08 : ಕನಿಷ್ಠ ವೇತನವನ್ನು ತಕ್ಷಣ ಪರಿಷ್ಕರಿಸಿ ತಿಂಗಳಿಗೆ ಕನಿಷ್ಠ ರೂ. 42,000 ನಿಗದಿ ಮಾಡಬೇಕು, ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು ಹಾಗೂ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್‌ (ಎಐಸಿಸಿಟಿಯು) ಜಿಲ್ಲಾ ಸಮಿತಿ ವತಿಯಿಂದ ರಾಯಚೂರು ನಗರದ ಡಾ. ಬಿ.ಆರ್‌. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.ಕಾರ್ಮಿಕರ ಹಕ್ಕುಬಾಧ್ಯತೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ಸಂಘಟನೆಗಳು, ರಾಜ್ಯದಲ್ಲಿ ಕಾರ್ಮಿಕ ವರ್ಗದ ಹಕ್ಕುಗಳ ರಕ್ಷಣೆ ಹಾಗೂ ಅವುಗಳ ಸಮರ​‍್ಕ ಅನುಷ್ಠಾನಕ್ಕಾಗಿ ಸರ್ಕಾರ ತಕ್ಷಣ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು.ಕೇಂದ್ರದ ಮೋದಿ ಸರ್ಕಾರವು 2025ರ ನವೆಂಬರ್ 21 ರಿಂದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿರುವುದು ಕಾರ್ಮಿಕರ ಮೇಲೆ ನೇರ ದಾಳಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ದಶಕಗಳ ಹೋರಾಟ ಮತ್ತು ತ್ಯಾಗದಿಂದ ಕಾರ್ಮಿಕರು ಪಡೆದುಕೊಂಡಿದ್ದ ಹಕ್ಕುಗಳು ಹಾಗೂ ರಕ್ಷಣೆಯನ್ನು ಈ ಸಂಹಿತೆಗಳು ದುರ್ಬಲಗೊಳಿಸುತ್ತಿವೆ.

“ವ್ಯವಹಾರ ಸುಲಭತೆ” ಎಂಬ ಹೆಸರಿನಲ್ಲಿ ಉದ್ಯೋಗದಾತರ ಅಧಿಕಾರವನ್ನು ಹೆಚ್ಚಿಸಿ ಕಾರ್ಮಿಕರ ಶೋಷಣೆಗೆ ದಾರಿ ಮಾಡಿಕೊಡಲಾಗುತ್ತಿದೆ.ವೇತನ, ಉದ್ಯೋಗ ಭದ್ರತೆ ಮತ್ತು ಸಂಘಟನಾ ಹಕ್ಕುಗಳ ಮೇಲಿನ ರಕ್ಷಣೆಯನ್ನು ಕಡಿಮೆ ಮಾಡುವ ಮೂಲಕ ಕಾರ್ಮಿಕರನ್ನು 100ಹಿ150 ವರ್ಷ ಹಿಂದಿನ ನಿಯಂತ್ರಣವಿಲ್ಲದ ಶೋಷಣೆಯ ಕಾಲಕ್ಕೆ ತಳ್ಳುವ ಅಪಾಯ ಇದೆ ಎಂದು ಅವರು ಎಚ್ಚರಿಸಿದರು. “ನೆಲವೇತನ (ಈಟಠರಡಿ ಘಚಿರಜ)” ಎಂಬ ಕಲ್ಪನೆಯೂ ಕನಿಷ್ಠ ವೇತನದ ಹಕ್ಕಿನ ಮೇಲಿನ ನೇರ ದಾಳಿಯಾಗಿದ್ದು, ಇದು ವೇತನ ಹೆಚ್ಚಿಸುವುದಕ್ಕಿಂತ ವೇತನ ಕಡಿಮೆ ಮಾಡುವ ವ್ಯವಸ್ಥೆಯಾಗಿ ಬಳಸುವ ಸಾಧ್ಯತೆ ಇದೆ.ಇದಕ್ಕೆ ಜೊತೆಗೆ ರಾಜ್ಯ ಸರ್ಕಾರವೂ ಕನಿಷ್ಠ ವೇತನ ಪರಿಷ್ಕರಣೆಯಲ್ಲಿ ತನ್ನ ಜವಾಬ್ದಾರಿಯನ್ನು ನಿಭಾಯಿಸಲು ವಿಫಲವಾಗಿದೆ. ಕಾನೂನು ಪ್ರಕಾರ ಐದು ವರ್ಷಕ್ಕೊಮ್ಮೆ ವೇತನವನ್ನು ಪರಿಷ್ಕರಿಸಬೇಕಾದರೂ, ಕೊನೆಯದಾಗಿ 2017ರಲ್ಲಿ ಮಾತ್ರ ಪರಿಷ್ಕರಣೆ ನಡೆದಿದೆ.

ಈಗಾಗಲೇ ಎಂಟು ವರ್ಷಗಳಿಗೂ ಹೆಚ್ಚು ಕಾಲ ಕಳೆದರೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. 2025ರಲ್ಲಿ ಸುಮಾರು ರೂ. 25,000ಕ್ಕೆ ಹೆಚ್ಚಿಸುವ ಪ್ರಾಥಮಿಕ ಅಧಿಸೂಚನೆ ಹೊರಬಂದಿದ್ದರೂ, ಅದನ್ನು ಇನ್ನೂ ಅಂತಿಮಗೊಳಿಸಿಲ್ಲ.ಇದರ ಪರಿಣಾಮವಾಗಿ ಕಾರ್ಮಿಕರು ಬದುಕಲು ಸಾಲದಷ್ಟು ಕಡಿಮೆ ವೇತನದಲ್ಲೇ ಕೆಲಸ ಮಾಡಲು ಬಾಧ್ಯರಾಗಿದ್ದಾರೆ. ವಿಶೇಷವಾಗಿ ಗಾರ್ಮೆಂಟ್ ಮತ್ತು ಬೀಡಿ ಉದ್ಯಮಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರ ಸ್ಥಿತಿ ಇನ್ನಷ್ಟು ದುರ್ಬಲವಾಗಿದೆ.ಆಹಾರ, ಬಟ್ಟೆ, ಮನೆ ಬಾಡಿಗೆ, ಶಿಕ್ಷಣ ಸೇರಿದಂತೆ ಮೂಲಭೂತ ಅಗತ್ಯಗಳನ್ನು ಪರಿಗಣಿಸಿದರೆ, ಒಬ್ಬ ಕಾರ್ಮಿಕನು ಗೌರವಯುತವಾಗಿ ಬದುಕಲು ತಿಂಗಳಿಗೆ ಕನಿಷ್ಠ ರೂ. 42,000 ಅಗತ್ಯವಿದೆ ಎಂದು ಅವರು ಹೇಳಿದರು. ಇದಕ್ಕಿಂತ ಕಡಿಮೆ ವೇತನವು ಕಾರ್ಮಿಕರು ಮತ್ತು ಅವರ ಕುಟುಂಬಗಳನ್ನು ದಾರಿದ್ರ್ಯದತ್ತ ತಳ್ಳುತ್ತದೆ.

ಕನಿಷ್ಠ ವೇತನ ನೀಡದಿರುವುದು ಬಲವಂತದ ಕೆಲಸಕ್ಕೆ ಸಮಾನ ಎಂದು ಸುಪ್ರೀಂ ಕೋರ್ಟ್‌ ಕೂಡ ಹೇಳಿದೆ ಎಂದು ನೆನಪಿಸಿದರು.ಸರ್ಕಾರಿ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರು ಸೇರಿದಂತೆ ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ಗ್ರಂಥಾಲಯಗಳು, ಕಾಲುವೆಗಳ ನಿರ್ವಹಣೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಾನೂನುಬದ್ಧ ಕನಿಷ್ಠ ವೇತನವೇ ನೀಡಲಾಗುತ್ತಿಲ್ಲ ಎಂದು ಅವರು ಆರೋಪಿಸಿದರು. ಕಾರ್ಮಿಕ ಇಲಾಖೆ ಕೂಡ ಕಾನೂನು ಜಾರಿಗೆ ತರುವಲ್ಲಿ ವಿಫಲವಾಗಿದೆ. ಆದ್ದರಿಂದ ಕಾರ್ಮಿಕ ವರ್ಗ ಒಗ್ಗೂಡಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದ ಅವರು, ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ಅವನ್ನು ತಕ್ಷಣ ರದ್ದುಪಡಿಸಬೇಕು ಹಾಗೂ ಕನಿಷ್ಠ ವೇತನವನ್ನು ತಕ್ಷಣವೇ ರೂ. 42,000ಕ್ಕೆ ನಿಗದಿ ಮಾಡಬೇಕು ಎಂದು ಆಗ್ರಹಿಸುತ್ತೇವೆ.  


ಸುದ್ದಿ ಓದಿ