ಪರಿಸರ ರಕ್ಷಣೆಗೆ ಸಾರ್ವಜನಿಕ ಸಹಕಾರ ಅವಶ್ಯಕ: ತಹಶೀಲ್ದಾರ ಗೊಟೂರ
ತಾಳಿಕೋಟೆ17: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು ಸಸಿಗಳನ್ನು ನೆಡುವುದು, ಗಿಡಮರಗಳ ರಕ್ಷಣೆ, ನಗರ ನೈರ್ಮಲ್ಯ, ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸುವುದು, ನೈಸರ್ಗಿಕ ಸಪನ್ಮೂಲಗಳ ರಕ್ಷಣೆ, ಸರಳ ಜೀವನದ ಮೂಲಕ ಪರಿಸರ ಸಂರಕ್ಷಣೆಗೆ ನಾವೆಲ್ಲ ನೆರವಾಗಬಹುದು ಎಂದು ತಹಶೀಲ್ದಾರ ಶ್ರೀಧರ ಗೊಟೂರ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಮಾದರಿ ಶಾಲೆ ಆವರಣದಲ್ಲಿ ಆಲಮಟ್ಟಿ ಕೆಬಿಜೆಎನ್ನೆಲ್ ಅರಣ್ಯ ಇಲಾಖೆ ವತಿಯಿಂದ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪಟ್ಟಣದಲ್ಲಿ ಉದ್ಯಾನಗಳ ಅಭಿವೃದ್ಧಿಯಾಗಬೇಕು. ಈಗಾಗಲೇ ಅರಣ್ಯ ಇಲಾಖೆ, ಪುರಸಭೆ, ಹಸಿರು ಸಂಪದ ಬಳಗ ಪಟ್ಟಣದ ಹಸೀರಿಕರಣ ಕಾರ್ಯ ಮಾಡುತ್ತಿವೆ. ಸಾರ್ವಜನಿಕರೂ ಕೂಡ ಕೈ ಜೋಡಿಸಬೇಕು. ಪರಿಸರ ರಕ್ಷಣೆಗೆ ಸಾರ್ವಜನಿಕ ಸಹಭಾಗಿತ್ವ ಮುಖ್ಯವಾಗಿದೆ ಎಂದರು.
ತಾಲೂಕು ಪಂಚಾಯತಿ ಇಓ ಬಿ.ಆರ್.ಬಿರಾದಾರ, ಪಿಎಸೈ ರಂಗನಾಥ ಭಂಗಿ, ಕೆಬಿಜೆಎನ್ಎಲ್ ವಲಯ ಅರಣ್ಯಾಧಿಕಾರಿ ಯಶವಂತ ರಾಠೋಡ, ಎಸಿಎಫ್ ಸದಾನಂದ ಪಾತ್ರೋಟ, ಡಿಆರ್ಎಫ್ಓ ಮೃತ್ಯುಂಜಯ ಬಿದರಕುಂದಿ,ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಅನಿತಾ ಸಜ್ಜನ, ಕನ್ನಡ ಮಾದರಿ ಶಾಲೆಯ ಸಹಶಿಕ್ಷಕಿ ದೇವಶೆಟ್ಟಿ, ಸಿ.ಎ.ಪಿ ರಾಜು ವಿಜಾಪುರ, ಶಿರಸ್ತೇದಾರ ಜಿ.ಆರ್.ಜೈನಾಪುರ, ಗ್ರಾಮ ಲೆಕ್ಕಾಧಿಕಾರಿಗಳಾದ ಶಿವಾನಂದ ಅಂಗಡಿ, ಎಂ.ಎಂ.ಅತ್ತಾರ, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಮಾದರಿ ಶಾಲೆ, ಸರ್ಕಾರಿ ಉರ್ದು ಹೆಣ್ಣುಮಕ್ಕಳ ಶಾಲೆ ಸಿಬ್ಬಂದಿ, ತಹಶೀಲ್ದಾರ ಕಚೇರಿ ಸಿಬ್ಬಂದಿ ಇತರರು ಉಪಸ್ಥಿತರಿದ್ದರು. 150ಕ್ಕೂ ಅಧಿಕ ಸಸಿಗಳನ್ನು ಆವರಣದಲ್ಲಿ ನೆಡಲಾಯಿತು.