ಹೊಲಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಿ: ರೈತರ ಆಕ್ರೋಶ
ತಾಳಿಕೋಟೆ16: ತಾಲೂಕಿನ ಹಿರೂರ, ತಮದಡ್ಡಿ, ಸಾಸನೂರ, ಚಬನೂರ ಗ್ರಾಮಗಳ ರೈತರ ಹೊಲಗಳಿಗೆ ಸಮರ್ಕವಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ರೈತರು ಹೆಸ್ಕಾಂ ಕಚೇರಿಗೆ ಆಗಮಿಸಿದಾಗ ಹೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ ಹೇಳಿಕೆಯಿಂದ ರೈತರು ಆಕ್ರೋಶಗೊಂಡು ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ತಾಲೂಕಿನ ಹಿರೂರ, ತಮದಡ್ಡಿ, ಸಾಸನೂರ, ಚಬನೂರ ಗ್ರಾಮಗಳ ರೈತರ ಜಮೀನುಗಳಿಗೆ ವಿದ್ಯುತ್ ಪೂರೈಕೆಯಲ್ಲಿ ತೊದರೆಯಾಗುತ್ತಿದೆ. ರಾಜ್ಯ ಸರಕಾರ ಹಗಲಿನಲ್ಲಿಯೇ 7 ತಾಸು ತ್ರೀ ಫೇಸ್ ವಿದ್ಯುತ್ ನೀಡುವದಾಗಿ ಹೇಳಿಕೆ ನೀಡಿದೆ. ಅದರಂತೆ ವಿದ್ಯುತ್ ಕೂಡಾ ಸರಬರಾಜು ಆಗುತ್ತಿತ್ತು. ಆದರೆ ಕಳೆದ ಒಂದು ವಾರದಿಂದ ಹಗಲಿನಲ್ಲಿ ಕೇವಲ 3 ತಾಸು ತ್ರೀ ಫೇಸ್ ವಿದ್ಯುತ್ ನೀಡಲಾಗುತ್ತಿದೆ. 4 ಗಂಟೆ ವಿದ್ಯುತ್ ಕೊಡುವದಾಗಿ ಹೇಳಿದರು ಸಹ ಅದರಲ್ಲಿ ಒಂದು ಗಂಟೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಒಂದೆ ಲೈನ್ದಲ್ಲಿರುವ ಬಳಗಾನೂರ, ಮಡಿಕೇಶ್ವರ, ಪಡೇಕನೂರ ರೈತರಿಗೆ 7 ಗಂಟೆ ಹಗಲಿನಲ್ಲಿಯೇ ನೀಡಲಾಗುತ್ತಿದೆ. ಇದು ಯಾಕೆ ಎಂದು ಹೆಸ್ಕಾಂ ಅಧಿಕಾರಿಗಳನ್ನು ರೈತರು ಪ್ರಶ್ನಿಸಿದರು. ಮೇಲಾಧಿಕಾರಿಗಳ ಆದೇಶದ ಹಿನ್ನಲೆಯಲ್ಲಿ ಕಳೆದ ಒಂದು ವಾರದಿಂದ ಮಡಿಕೇಶ್ವರ, ಪಡೇಕನೂರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಹೆಚ್ಚುವರಿಯಾಗಿ ಸೇರೆ್ಡ ಮಾಡಿದ್ದಾರೆ. ಇದರಿಂದ ವೋಲ್ಟೇಜ್ ಸಮಸ್ಯೆಯಾಗುತ್ತಿದೆ. ನಾವೇನು ಮಾಡದ ಸ್ಥಿತಿಯಲ್ಲಿದ್ದೇವೆ ಎಂದು ಹಾರಿಕೆ ಉತ್ತರ ನೀಡಿದರು. ಸಾಸನೂರ, ಚಬನೂರ ಗ್ರಾಮದ ರೈತರು ನಮಗೆ ಕೇಳುವ ಹಕ್ಕಿಲ್ಲ. ನೀವು ಬಸವನಬಾಗೇವಾಡಿ ಉಪವಿಭಾಗ ಕಚೇರಿಗೆ ಹೋಗಿ ಕೇಳಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಂತೆ ಸಿಟ್ಟಿಗೆದ್ದ ರೈತರು ಅಧಿಕಾರಿಗಳನ್ನು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶ ಮಾಡಿದ ಪೊಲೀಸ್ರು ರೈತರನ್ನು ಸಮಾಧಾನಗೊಳಿಸಿದರು. ಸರಕಾರ 7 ತಾಸು ವಿದ್ಯುತ್ ಪೂರೈಸಲಾಗುವದು ಎಂದು ಹೇಳಿದರೂ ಸಹ ಅಧಿಕಾರಿಗಳು ನೀಡುತ್ತಿಲ್ಲ. ಬೇರೆ ಗ್ರಾಮಕ್ಕೆ ಒಂದು ನ್ಯಾಯ ನಮಗೊಂದು ನ್ಯಾಯವೇ, 3 ದಿನ ಅಧಿಕಾರಿಗಳಿಗೆ ಸಮಯ ನೀಡಲಾಗುವದು. ಮೂರು ದಿನದಲ್ಲಿ 7 ತಾಸು ಹಗಲಿನಲ್ಲಿ ವಿದ್ಯುತ್ ಪೂರೈಕೆ ಮಾಡಬೇಕು. ಇಲ್ಲದಿದ್ದರೆ ಸಾವಿರಾರು ರೈತರನ್ನು ಕರೆದುಕೊಂಡು ಬಂದು ಹೆಸ್ಕಾಂ ಕಚೇರಿ ಮುಂದೆ ಉಗ್ರವಾದ ಹೋರಾಟವನ್ನು ಕೈಕೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿ ಮುತ್ತಿಗೆಯನ್ನು ಕೈಬಿಟ್ಟರು.
ಈ ಸಂದರ್ಭದಲ್ಲಿ ರೈತರಾದ ಶಾಂತಪ್ಪ ಚಲವಾದಿ, ಸುರೇಶಗೌಡ ಬಿರಾದಾರ, ರಾಮನಗೌಡ ಬೈರಿಪಾಟೀಲ, ಹಣಮಂತ್ರಾಯ ಕಡಕೋಳ, ಮಲ್ಲನಗೌಡ ಬಸರಕೋಡ, ತಮ್ಮಣ್ಣ ಬೊಮ್ಮನಹಳ್ಳಿ, ವಿರೇಶ ಕಡಕೋಳ, ಮಂಜುನಾಥ ಮಾರಲಬಾವಿ, ಶಂಕ್ರಗೌಡ ಕೊಡಗಾನೂರ, ಶಾಂತಗೌಡ ಇಂಗಳಗೇರಿ, ಸಿದ್ದು ಕುಂಠರಡ್ಡಿ, ಭೀಮನಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.