ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಎನ್ಎಸ್ಯುಐ ಪ್ರತಿಭಟನೆ
ತಾಳಿಕೋಟೆ15: ಪೆಟ್ರೋಲ್, ಡಿಸೈಲ್ ಹಾಗೂ ಅಡುಗೆ ಅನೀಲ ಬೆಲೆ ಏರಿಕೆಯನ್ನು ಖಂಡಿಸಿ ಎನ್ಎಸ್ಯುಐ ಸಂಘಟನೆ ನೇತೃತ್ವದಲ್ಲಿ ಯುವ ಕಾಂಗ್ರೇಸ್ ಕಾರ್ಯಕರ್ತರು ಸೈಕಲ್ ಜಾಥಾ ಮೂಲಕ ಪ್ರತಿಭಟನೆ ನಡೆಸಿ ತಹಶಿಲ್ದಾರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ಸೈಕಲ್ ಜಾಥಾ ಮೂಲಕ ತಹಸಿಲ್ದಾರ ಕಚೇರಿಯವರೆಗೆ ಆಗಮಿಸಿದ ಕಾರ್ಯಕರ್ತರು ಜಾಥಾದುದ್ದಕ್ಕೂ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ತಹಶಿಲ್ದಾರ ಅನೀಲಕುಮಾರ ಢವಳಗಿ ಅವರಿಗೆ ಮನವಿಯನ್ನು ಸಲ್ಲಿಸಿದರು. ಎನ್ಎಸ್ಯುಐ ಸಂಘಟನೆ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ ಮಾತನಾಡಿ, ಒಂದಡೆ ಕೊರೊನಾ ಜನರ ಬದುಕನ್ನು ಕಸಿದುಕೊಂಡಿದ್ದರೆ ಇತ್ತ ಅಚ್ಚೆದಿನ ಹೆಸರಲ್ಲಿ ಪ್ರಧಾನಿ ನರೇಂದ್ರ ಮೋದಿ ತೈಲ ಬೆಲೆ ಗಗನಕ್ಕೇರಿಸಿ ಬಡವರ ಹಾಗು ಮಧ್ಯಮ ವರ್ಗದ ಜನರ ಬದುಕನ್ನು ದುಸ್ತರವಾಗಿಸಿದ್ದಾರೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ದರ ಹೆಚ್ಚಳ ಮಾಡುವ ಮೂಲಕ ಕೇಂದ್ರ ಬಿಜೆಪಿ ಸರಕಾರ ಸಾರ್ವಜನಿಕರ ಲೂಟಿಗಿಳಿದಿದೆ. ತೈಲ ದರ ಏರಿಕೆಯಿಂದ ಸರಕು ಸಾಗಣೆ ವೆಚ್ಚ ದುಬಾರಿಯಾಗಿ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಅಚ್ಚೆ ದಿನದ ಭ್ರಮೆ ಸೃಷ್ಠಿಸಿದ ಬಿಜೆಪಿ ದೇಶದ ಜನಸಾಮಾನ್ಯರಿಗೆ ಕೆಟ್ಟ ದಿನಗಳ ಅನುಭವ ಮೂಡಿಸುತ್ತಿದೆ ಎಂದರು.
ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸಿದ್ದನಗೌಡ ಪಾಟೀಲ ನಾವದಗಿ, ರಫೀಕ್ ಶಿರೋಳ, ಆಸಿಫ್ ಕೆಂಬಾವಿ, ಬಸನಗೌಡ ಬಗಲಿ, ಸಂಗನಗೌಡ ಪಾಟೀಲ, ಸೋಮಶೆಖರ ಹಿರೇಮಠ, ಬಸವರಾಜ ಜೀರಲಬಾವಿ, ಸಲೀಮ ಶಾಪಾರಿ, ಬುದ್ದಾ ಗೋಗಿ, ಜಿ.ಎಮ್.ಪಾಟೀಲ, ಎ.ಎಮ್.ಸರ್ಜಾಪೂರ, ಸಂಗನಗೌಡ ಅಸ್ಕಿ, ಮುರಗೇಶ ಬಿರಾದಾರ ಸೇರಿದಂತೆ ಇತರರು ಇದ್ದರು.