ರಾಣೆಬೆನ್ನೂರ

ವಾರದೊರಳಗೆ ಪರಿಹಾರ ನೀಡದಿದ್ದರೆ ಪ್ರತಿಭಟನೆ

ವಾರದೊರಳಗೆ ಪರಿಹಾರ ನೀಡದಿದ್ದರೆ ಪ್ರತಿಭಟನೆ
ಮುದೇನರ ಗ್ರಾಮದ ಮೃತ ಕುಟುಂಬದ ವೃದ್ಧ ತಂದೆ ತಾಯಿಗಳಿಗೆ ತಾಲೂಕಾ ರೈತ ಸಂಘದ ಕಾರ್ಯಕರ್ತರ ವತಿಯಿಂದ ಆಹಾರ ಧಾನ್ಯಗಳನ್ನು ರ

ರಾಣಿಬೆನ್ನೂರ 18:  ಅಕ್ರಮ ಮರಳುಗಾರಿಕೆ ಟಿಫರ್ ಹರಿದು ಮೃತಪಟ್ಟ ಕುಟುಂಬಕ್ಕೆ ಜಿಲ್ಲಾಡಳಿತ ಘೋಷಿಸಿದ 10 ಲಕ್ಷ ಪರಿಹಾರ ನೀಡದೆ ಆಗಲೇ ಮರಳುಗಾರಿಕೆಗೆ ಅನುಮತಿ ನೀಡಿದ ಜಿಲ್ಲಾಡಳಿತ ಕ್ರಮ ಖಂಡನೀಯ. ವಾರದೊಳಗೆ ಪರಿಹಾರ ನೀಡದಿದ್ದಲ್ಲಿ ಅಪಘಾತ ನಡೆದ ಸ್ಥಳದಲ್ಲಿ ಮೃತಪಟ್ಟವರ ಭಾವಚಿತ್ರಗಳನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡ ರವಿಂದ್ರಗೌಡ ಪಾಟೀಲ ಎಚ್ಚರಿಸಿದರು.

ಬುಧವಾರ ತಾಲೂಕಿನ ಮುದೇನರ ಗ್ರಾಮದ ಮೃತ ಕುಟುಂಬದ ವೃದ್ಧ ತಂದೆ ತಾಯಿಗಳಿಗೆ ತಾಲೂಕಾ ರೈತ ಸಂಘದ ವತಿಯಿಂದ ಆಹಾರ ಧಾನ್ಯಗಳನ್ನು ವಿತರಿಸಿ ಮಾತನಾಡಿದ ಅವರು, ಕಳೆದ ಫೆಬ್ರುವರಿ 25 ನೇ ತಾರೀಖಿನ ಗುರುವಾರ ಸಂಜೆ 4 ಗಂಟೆಗೆ ಇಟಗಿ  ಮುದೇನೂರು ರಸ್ತೆಯಲ್ಲಿ ಅಕ್ರಮ ಮರಳುಗಾಡಿ ರಭಸದಿಂದ ಹರಿದು ರಸ್ತೆ ಬದಿ ತನ್ನ ಮಕ್ಕಳಿಗೆ ನೀರು ಕುಡಿಸಲು ನಿಂತಿದ್ದ ಮುದೇನೂರ ಗ್ರಾಮದ ಶಿದ್ದಪ್ಪ ಹನುಮಂತಪ್ಪ ನಾಗೇನಹಳ್ಳಿ (43) ಮತ್ತು ಆತನ ಪತ್ನಿ ಅನುಸೂಯ (32), ಮಕ್ಕಳಾದ ವನಿತಾ (11), ವಿನೋದ (9) ಇಡೀ ಕುಟುಂಬ ಮೃತಪಟ್ಟ ಘಟನೆ ಇಡೀ ರಾಜ್ಯವನ್ನೆ ತಲ್ಲಣಗೊಳಿಸಿತ್ತು ಎಂದರು.

ಈ ದುರ್ಘಟನೆ ಘಟಿಸಿದಾಗ ಸಾಕಷ್ಟು ಅನುಕಂಪದ ಮಾತುಗಳನ್ನಾಡಿದ  ಗಣ್ಯರು ಇಷ್ಟು ಬೇಗ ಆ ಕುಟುಂಬವನ್ನು ಮರೆತದ್ದು ನಾಚಿಕೆಗೇಡು.  ತಕ್ಷಣ ಮೃತ ಕುಟುಂಬದ ತಂದೆ ತಾಯಿಗಳಿಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಅಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ಮೃತ ಕುಟುಂಬದ ತಂದೆ ತಾಯಿಗಳನ್ನು ದುಡಿದು ಸಾಕುವ ಮಗ ಹಾಗೂ ಸೊಸೆ ಮತ್ತು ಮೊಮ್ಮಕ್ಕಳು ದುರ್ಘಟನೆಯಲ್ಲಿ ಮೃತಪಟ್ಟ ಕಾರಣ ಆ ವೃದ್ಧರು ಆನಾಥರಾಗಿದ್ದು. ಅವರ ಜೀವನ ನಡೆಸುವುದು ಆಗದೆ ಇರುವುದನ್ನು ಮನಗಂಡ ರೈತ ಸಂಘದ ಕಾರ್ಯಕರ್ತರ ನೆರವಿನಿಂದ ಆಹಾರ ಧಾನ್ಯಗಳನ್ನು ಅವರ ಮನೆಗೆ ತೆರಳಿ ವಿತರಿಸಲಾಗಿದೆ. ಈ ಆಹಾರ ಧಾನ್ಯಗಳು ತೀರುವ ಮುನ್ನ 10 ಲಕ್ಷ ರೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸುರೇಶ ಮಲ್ಲಾಪುರ ಹರಿಹರಗೌಡ ಪಾಟೀಲ, ದಿಳ್ಳೆಪ್ಪ ನಿತ್ಯಪ್ಪನವರ, ಬಸವರಾಜ ಯಲ್ಲಪ್ಪನವರ, ಬುಳ್ಳಜ್ಜ ಬಾವಿಕಟ್ಟಿ, ಅಡಿವೆಪ್ಪ ನಾಗೇನಹಳ್ಳಿ,  ಭಾಗವ್ವ ಬಣಕಾರ,  ಗಂಗೆನಗೌಡ್ರ ಮತ್ತಿತರರು ಇದ್ದರು.

ಸುದ್ದಿ ಓದಿ