ಬೆಳೆ ವಿಮೆಗಾಗಿ ರೈತರಿಂದ 30 ರಿಂದ ಧರಣಿ ಸತ್ಯಾಗ್ರಹ
ತಾಳಿಕೋಟೆ26: ತಾಲೂಕಿನ ಭಂಟನೂರ, ಕೊಡಗಾನೂರ ಹಾಗೂ ಮುಕಿಹಾಳ ಗ್ರಾಮ ಪಂಚಾಯತ ವ್ಯಾಪ್ತಿಯ ಹಳ್ಳಿಗಳಲ್ಲಿ 2021-22 ನೇ ಸಾಲಿನ ಬೆಳೆ ವಿಮೆ ಜಮಾ ಆಗದಿರುವದನ್ನು ಖಂಡಿಸಿ ತಾಳಿಕೋಟೆ ಪಟ್ಟಣದಲ್ಲಿ ಇದೇ 30 ಗುರವಾರದಂದು ಟ್ಯಾಕ್ಟರ್ ಸಮೇತ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಅಂದಿನಿಂದಲೇ ಧರಣಿ ಸತ್ಯಾಗ್ರಹವನ್ನು ಆರಂಭಿಸಲಾಗುವದು ಎಂದು ರೈತರು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತರು, 2021-22 ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ತೊಗರಿ ಬೆಳೆನ್ನು ಬಹುತೇಕ ರೈತರು ಹೊಲದಲ್ಲಿ ಉಳುಮೆ ಮಾಡಿದ್ದರು. ಬೆಳೆಯು ಸಹ ಚನ್ನಾಗಿ ಬಂದಿತ್ತು. ಆದರೆ ಹಿಂಗಾರು ಮಳೆ ಹೆಚ್ಚಾಗಿ ಆಗಿದ್ದರಿಂದ ತೊಗರಿ ಬೆಳೆ ಹಸಿ ಹೆಚ್ಚಾಗಿ ಹೊಲದಲ್ಲಿ ಬೆಳೆದ ತೊಗರಿ ಅರ್ಧಕ್ಕೂ ಹೆಚ್ಚು ನೆಟೆ ರೋಗದಿಂದ ಒಣಗಿ ಹೋಗಿತ್ತು. ನಂತರ 15 ದಿನದಲ್ಲಿ ಭಾರಿ ಪ್ರಮಾಣದಲ್ಲಿ ಮಂಜು ಆವರಿಸಿ ಸಂಪೂರ್ಣ ಹಾಳಾಗಿದೆ. ಆದರೆ ಅಧಿಕಾರಿಗಳು ತೊಗರಿ ಬೆಳೆ ನಷ್ಟವಾದ ಬಗ್ಗೆ ಸರಿಯಾದ ಮಾಹಿತಿಯನ್ನು ಸರಕಾರಕ್ಕೆ ಕೊಟ್ಟಿಲ್ಲ. ಇದರಿಂದ ಬೆಳೆ ವಿಮೆ ಪಾವತಿಯಾಗಿಲ್ಲ. ಬೆಳೆ ಹಾನಿಯಾಗಿ ರೈತರು ನಷ್ಟದಲ್ಲಿದ್ದರೆ, ನಷ್ಟದಲ್ಲಿದ್ದಾಗ ಕೈಹಿಡಿಯುತ್ತೆ ಅಂತಾ ನಂಬಿದ್ದ ಬೆಳೆ ವಿಮೆ ಸಹ ಬಂದಿಲ್ಲ. ಇದರಿಂದ ರೈತರು ಕಂಗಾಲಾಗುವಂತಾಗಿದೆ. ಬೆಳೆ ವಿಮೆ ಬಾರದಿರುವ ಕುರಿತು ಅಧಿಕಾರಿಗಳ ಗಮನಕ್ಕೆ 15 ದಿನಗಳ ಹಿಂದೆ ತರಲಾಗಿತ್ತು. ಇದಕ್ಕೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದನೆ ನೀಡುತ್ತಿಲ್ಲ. ಹಿಗಾಗಿ ರೈತರು ಹೋರಾಟದ ಹಾದಿ ಹಿಡಿಯಬೇಕಾಗಿರುವದು ದುರ್ದೈವವಾಗಿದೆ. ಇದೇ 30 ರಂದು ಪಟ್ಟಣದಲ್ಲಿ ರೈತರ ಟ್ಯಾಕ್ಟರ್ ಸಮೇತ ಬೃಹತ್ ಪ್ರತಿಭಟನೆ ನಡೆಸಿ ನಂತರ ಬಸವೇಶ್ವರ ವೃತ್ತದಲ್ಲಿ ಧರಣಿ ಸತ್ಯಾಗ್ರಹವನ್ನು ಆರಂಭಿಸಲಾಗುವದು. ಬೆಳೆ ವಿಮೆ ಜಮೆಯಾಗುವವರೆಗೂ ಸಹ ಹೋರಾಟ ನಿಲ್ಲಿಸುವದಿಲ್ಲ ಎಂದು ರೈತರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಂಗನಗೌಡ ಹೆಗರಡ್ಡಿ, ಶಂಕರಗೌಡ ದೇಸಾಯಿ, ಶಿವನಗೌಡ ಪಾಟೀಲ, ಬಸನಗೌಡ ನಾಡಗೌಡ, ಪಂಚಯ್ಯ ಹಿರೇಮಠ, ಜಯಾಪಾಲ ಭಂಟನೂರ, ಸಂಗನಗೌಡ ಪಾಟೀಲ, ಬಸವರಾಜ ಸಿಂಗನಳ್ಳಿ, ಮಲ್ಲನಗೌಡ ಆನೆಸೂರ, ಸಿದ್ದನಗೌಡ ಬಿರಾದಾರ, ಸಂಗನಗೌಡ ಮೂಲಿಮನಿ ಸೇರಿದಂತೆ ಇತರರು ಇದ್ದರು.