ರೈತರ ಕೃಷಿ ಪಂಪಸೆಟ್ಗಳಿಗೆ ಹಗಲು ವೇಳೆಯಲ್ಲಿ ಏಳು ತಾಸು ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ
ಬ್ಯಾಡಗಿ 25: ರೈತರ ಕೃಷಿ ಪಂಪಸೆಟ್ಗಳಿಗೆ ಹಗಲು ವೇಳೆಯಲ್ಲಿ ನಿರಂತರ 7 ತಾಸು ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಬಳಿ ಸಭೆ ನಡೆಸಿದ ನೂರಾರು ಕಾರ್ಯಕರ್ತರು ಬಳಿಕ ಚಾವಡಿ ರಸ್ತೆ, ಮುಖ್ಯರಸ್ತೆ, ಬಸ್ನಿಲ್ದಾಣ, ಹಳೇ ಪುರಸಭೆ ಹಂಸಭಾವಿ ರಸ್ತೆಗಳಲ್ಲಿ ಸಂಚರಿಸಿ ಅಂತಿಮವಾಗಿ ಹೆಸ್ಕಾಂ ಕಚೇರಿಯನ್ನು ತಲುಪಿ ಧರಣಿ ನಡೆಸಲಾರಂಭಿಸಿದರು.
ವಾಡಿಕೆಗಿಂತ ಕಡಿಮೆ ಮಳೆ:ಈ ವೇಳೆ ಮಾತನಾಡಿದ ರೈತ ಮುಖಂಡ ಗಂಗಣ್ಣ ಎಲಿ, ಮುಂಗಾರು ಕೈಕೊಟ್ಟ ಬೆನ್ನಲ್ಲೇ ಕೃಷಿ ನಡೆಸುವುದು ದುಸ್ತರವಾಗಿದೆ ಪ್ರಸಕ್ತ ವರ್ಷ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು ರೈತರು ಕಂಗಾಲಾಗಿದ್ದಾರೆ, ಕೊಳವೆಭಾವಿ ಸೇರಿದಂತೆ ಇನ್ನಿತರ ಮೂಲಗಳಿಂದ ಕೃಷಿನಡೆಸುತ್ತಿರುವ ರೈತರು ಬಿತ್ತನೆ ಮಾಡಿದ್ದಾರೆ, ಆದರೆ ಬಿತ್ತಿದಷ್ಟು ಬೆಳೆಗಳನ್ನು ತೆಗೆದುಕೊಳ್ಳಲು ಹೆಸ್ಕಾಂ ಅಧಿಕಾರಿಗಳು ನಿಯಮಿತವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಹಾಗಿದ್ದರೆ ಕೃಷಿ ನಡೆಸುವುದಾದರೂ ಹೇಗೆ..? ಎಂದು ಪ್ರಶ್ನಿಸಿದರು.
ಹಗಲಿನಲ್ಲಿಯೇ 7 ತಾಸು ವಿದ್ಯುತ್ ಪೂರೈಸಿ: ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕೃಷಿಯನ್ನು ಮುಂದುವರೆಸಬೇಕಾಗಿದಲ್ಲಿ ನೀರಾವರಿ ಸೌಲಭ್ಯ ಅವಶ್ಯಕ ಆದರೆ ಹೆಸ್ಕಾಂನವರು ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಸಮರ್ಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ, ಇದಲ್ಲದೇ ರಾತ್ರಿ ವೇಳೆ ಕೇವಲ 3 ತಾಸು ವಿದ್ಯುತ್ ನೀಡುತ್ತಿರುವುದರಿಂದ, ರೈತರು ನಿದ್ದೆಗೆಟ್ಟು ಭೂಮಿಗಳಿಗೆ ನೀರುಣಿಸಬೇಕಾಗುತ್ತದೆ ಪರಿಸ್ಥಿತಿ ಎದುರಾಗಿದೆ, ಕತ್ತಲಿನಲ್ಲಿ ಯಾವ ಕಡೆಗೆ ನೀರು ಹಾಯುತ್ತದೆ ಎಂಬುದರ ಅರಿವು ಕೂಡ ನಮಗೆ ಆಗದೇ ಇರುವುದರಿಂದ ಹಗಲು ವೇಳೆಯಲ್ಲಿಯೇ 7 ತಾಸು ವಿದ್ಯುತ್ ನೀಡುವಂತೆ ಆಗ್ರಹಿಸಿದರು.
ಅನಾನುಕೂಲವೇ ಹೆಚ್ಚು: ಹೆಚ್ಚುತ್ತಿರುವ ಕಾಡುಪ್ರಾಣಿಗಳ ಹಾವಳಿಗೆ ರೈತರು ಒಂಟಿಯಾಗಿ ಹೊಲಗಳಿಗೆ ತೆರಳುವುದು ಕಷ್ಟ, ಇತ್ತೀಚೆಗೆ ಚಿರತೆಗಳ ಹಾವಳಿಯಿಂದ ರೈತರು ಭಯದಲ್ಲಿಯೇ ಕೃಷಿ ನಡೆಸುತ್ತಿದ್ದಾರೆ, ನಿಷ್ಕ್ರಿಯಗೊಂಡ ಅರಣ್ಯ ಇಲಾಖೆ ವರ್ತನೆಯಿಂದ ಬೇಸತ್ತ ಚಿನ್ನಮುಳಗುಂದ ಗ್ರಾಮದ ರೈತರು ಖುದ್ದಾಗಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ ಹೀಗಾಗಿ ರಾತ್ರಿ ವೇಳೆ ವಿದ್ಯುತ್ ನೀಡುವುದರಿಂದ ಇಡೀ ರಾತ್ರಿ ವಿದ್ಯುತ್ನ್ನೇ ಎದುರು ನೋಡಬೇಕಾಗಿದೆ, ರಾತ್ರಿ ವೇಳೆ ವಿದ್ಯುತ್ ಪೂರೈಕೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಛಾಗಿದ್ದು ಹಗಲು ವೇಳೆ ವಿದ್ಯುತ್ ನೀಡುವಂತೆ ಆಗ್ರಹಿಸಿದರು.
ಹಗಲಿನಲ್ಲಿ ಪೂರೈಕೆ ಮಾಡುವೆ:ರೈತ ಸಂಘದ ಪ್ರತಿಭಟನೆಗೆ ಮಣಿದ ಹೆಸ್ಕಾಂ ಎಇಇ ಹಾಲೇಶ ಅಂತರವಳ್ಳಿ ಮೂರು ಗ್ರಿಡ್ ಗಳಿಂದ ತ್ರಿಫೇಸ್ ವಿದ್ಯುತ್ ಪೂರೈಸುವ ಭರವಸ ನೀಡಿದರು, ಮತ್ತು ಯಾವುದೇ ಸಂದರ್ಭದಲ್ಲಿ ರೈತರು ತಮ್ಮ ಸಂಪರ್ಕಕ್ಕೆ ಬರಲು ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಿ ವಿದ್ಯುತ್ ಪೂರೈಸುವ ಭರವಸೆ ನೀಡಿದರು, ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.
ರೈತ ಮುಖಂಡರಾದ ರುದ್ರಗೌಡ್ರ ಕಾಡನಗೌಡ್ರ, ಕಿರಣ ಗಡಿಗೋಳ, ಚಿಕ್ಕಪ್ಪ ಛತ್ರದ, ಮೌನೇಶ ಕಮ್ಮಾರ, ಕೆ.ವಿ.ದೊಡ್ಡಗೌಡ್ರ, ನಾಗಪ್ಪ ಭಾವಿಕಟ್ಟಿ. ಮಲಕಪ್ಪ ಅರಳೀಕಟ್ಟಿ. ಸಂತೋಷ ಬಡ್ಡಿ, ಶೇಖಪ್ಪ ಕಾಶಿ, ನುಂಜುಡಸ್ವಾಮಿ, ನಿಂಗಪ್ಪ ಬಿದರಿ, ಹರೀಶ ತಳಮನಿ, ವೀರನಗೌಡ ಪಾಟೀಲ, ಚಂದ್ರ್ಪ ದೇಸಾಯಿ, ಬಸವರಾಜ ಕುಮ್ಮೂರ ಸೇರಿದಂತೆ ಹಲವರು ಭಾಗವಹಿಸಿದ್ದರು.