ತಾಳಿಕೋಟಿ

ಟೈಲರ್ ಕ್ಷೇಮ ನಿಧಿ ಮಂಡಳಿ ರಚಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಟೈಲರ್ ಕ್ಷೇಮ ನಿಧಿ ಮಂಡಳಿ ರಚಿಸುವಂತೆ ಒತ್ತಾಯಿಸಿ ಪ್ರತಿಭಟನೆ

ತಾಳಿಕೋಟೆ26: ಟೈಲರಿಂಗ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಟೈಲರ್‌ಗಳಿಗಾಗಿ ಟೈಲರ್ ಕ್ಷೇಮ ನಿಧಿ ಮಂಡಳಿ ರಚಿಸಿ, ಭವಿಷ್ಯ ನಿಧಿ ಹಾಗೂ ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಪಟ್ಟಣದ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ ಮೂಲಕ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು. 

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸೇರಿದ ನೂರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ತಹಶಿಲ್ದಾರ ಕಚೇರಿಗೆ ಆಗಮಿಸಿ ಮನವಿಯನ್ನು ಸಲ್ಲಿಸಿದರು.  ರಾಜ್ಯಾದ್ಯಂತ ಹೊಲಿಗೆ ಕೆಲಸದಿಂದ ಜೀವನ ಸಾಗಿಸುತ್ತಿರುವ ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೆಲ್ಲ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅವರ ನೇರವಿಗೆ ಸರಕಾರ ಬರಬೇಕಾಗಿದೆ. ಹಿಗಾಗಿ ಕೂಡಲೇ ರಾಜ್ಯಾದ್ಯಂತ ಬಟ್ಟೆ ಹೊಲಿದು ಜೀವನ ಸಾಗಿಸುತ್ತಿರುವ ಟೈಲರ ವೃತ್ತಿ ಬಾಂಧವರಿಗೆ ಕೂಡಲೇ ಟೈಲರ ಕ್ಷೇಮನಿಧಿ ಮಂಡಳಿಯನ್ನು ರಚಿಸಬೇಕು. ಟೈಲರಗಳಿಗಾಗಿ ಭವಿಷ್ಯನಿಧಿ ಪಿಂಚಣಿ ಯೋಜನೆಯನ್ನು ಹಾಗೂ ಆರೋಗ್ಯ ವಿಮೆಯನ್ನು ಕೂಡಲೇ ಜಾರಿಗೊಳಿಸಬೇಕು. ಈವರೆಗೆ ಹಣ ಸಂದಾಯ ಮಾಡಿದ 60 ವರ್ಷ ತುಂಬಿದ ಎಲ್ಲಾ ಎನ್‌ಪಿಎಸ್ ಲೈಟ್ ಫಲಾನುಭವಿಗಳಿಗೆ ಮಾಸಿಕ ರೂ 3000 ನಿವೃತ್ತಿ ವೇತನ ಘೋಷಣೆ ಮಾಡಬೇಕು. ಹೊಲಿಗೆ ಕೆಲಸಗಾರರ ಹೆಣ್ಣು ಮಕ್ಕಳ ವಿವಾಹಕ್ಕೆ ಧನ ಸಹಾಯ ನೀಡಬೇಕು. ಮಹಿಳಾ ಹೊಲಿಗೆ ಕೆಲಸಗಾರರಿಗೆ ವಿವಾಹ ಧನ ಮತ್ತು ಹೆರಿಗೆ ಭತ್ಯ ನೀಡಬೇಕು. ಹೊಲಿಗೆ ಕೆಲಸಗಾರರ ಸ್ವಂತ ವಾಸಕ್ಕಾಗಿ ಮನೆ ಕೊಂಡುಕೊಳ್ಳಲು, ಮನೆ ಕಟ್ಟಲು ಅಥವಾ ಪುನರ ನಿರ್ಮಾಣ ಮಾಡಲು ಧನ ಸಹಾಯ ಮತ್ತು ಕಡಿಮೆ ಬಡ್ಡಿಯ ಸಾಲ ನೀಡಬೇಕು. ಹೊಲಿಗೆ ಕೆಲಸಗಾರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನವನ್ನು ನೀಡಬೇಕು ಎಂದು ಒತ್ತಾಯಿಸಿದರು. ಸರಕಾರ ಟೈಲರಿಂಗ ವೃತ್ತಿಯಲ್ಲಿ ಜೀವನ ಸಾಗಿಸುತ್ತಿರುವ ಕಾರ್ಮಿಕರ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಕೈಕೊಳ್ಳಲಾಗುವದು ಎಂದು ಎಚ್ಚರಿಕೆಯನ್ನು ನೀಡಿದರು. 

ಈ ಸಂದರ್ಭದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್‌ನ ತಾಲೂಕು ಘಟಕದ ಅಧ್ಯಕ್ಷ ಗೀರಿಶ ರಾಂಪೂರೆ, ಪ್ರಧಾನ ಕಾರ್ಯದರ್ಶಿ ಹೈದರ ಮಕಾನದಾರ, ಖಜಾಂಚಿ ಶರಣಪ್ಪ ಬಿಳೆಭಾವಿ, ಕಲಕೇರಿ ವಲಯ ಅಧ್ಯಕ್ಷ ರಮೇಶ ಮೋಪಗಾರ, ನಬಿಲಾಲ ನಾಯ್ಕೋಡಿ, ಶಾಂತಯ್ಯ ಹಿರೇಮಠ, ಸಿದ್ದು ಅಂಗಡಿ, ಅಂಬರೀಶ ದೇಸಾಯಿ, ಸೋಫಿ ಟೇಲರ್, ಡಿ.ಎನ್‌.ನವಲೆ, ರತನ ಟೇಲರ್, ರಫೀಕ್ ಟೇಲರ್, ಶಂಕರ ನಾಜಿರೆ ಸೇರಿದಂತೆ ಕಲಕೇರಿ ವಲಯ ಹಾಗ ತಾಳಿಕೋಟೆ ವಲಯದ ವಿವಿಧ ಗ್ರಾಮಗಳ ಟೇಲರ್‌ಗಳು ಭಾಗವಹಿಸಿದ್ದರು. 


ಸುದ್ದಿ ಓದಿ