ಬ್ಯಾಡ್ಗಿ

ಗ್ರಾಮೀಣ ಆಶ್ರಯ ನಿವೇಶನ ಹಕ್ಕು ಪತ್ರ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ

ಗ್ರಾಮೀಣ ಆಶ್ರಯ ನಿವೇಶನ ಹಕ್ಕು ಪತ್ರ  ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ

ಬ್ಯಾಡಗಿ: ಗ್ರಾಮೀಣ ಆಶ್ರಯ ನಿವೇಶನ ಹಕ್ಕುಪತ್ರದಂತೆ ಹದ್ದುಬಸ್ತು ಮಾಡಿ ತಮಗೆ ವಾಸಿಸಲು ನಿವೇಶನ ಸಹಿತ ಮನೆ ಒದಗಿಸುವಂತೆ ಆಗ್ರಹಿಸಿ ಅಲೆಮಾರಿ ಜನಾಂಗದ ಮಹಿಳೆಯರು ಗುರುವಾರ ತಾಲೂಕ ಕಛೇರಿಯ ಎದುರು ಪ್ರತಿಭಟನೆ ನಡೆಸಿದರು.

ತಹಶೀಲ್ದಾರ ಎಸ್.ಎ.ಪ್ರಸಾದ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಮಂಜಮ್ಮ ದುರಮುರಗಿ ಅವರು, ಕಳೆದ 20ವರ್ಷಗಳಿಂದ ಚಿಕ್ಕಣಜಿ ಕ್ರಾಸ್ ಬಳಿ ಇರುವ ದೊಡ್ಡಕೆರೆಯಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದೇವೆ. ನಿರಾಶ್ರಿತರಾಗಿದ್ದ ತಮ್ಮನ್ನು ಕಂಡ ಜನಪ್ರತಿನಿಧಿಗಳು 2015-16ರಲ್ಲಿ ಕಾಗಿನೆಲೆ ಹೊಬಳಿಯ ಮತ್ತೂರು ಗ್ರಾಪಂ ವ್ಯಾಪ್ತಿಯ ರಿಸನಂ.92ರಲ್ಲಿ 22 ಜನರಿಗೆ ಹಕ್ಕುಪತ್ರವನ್ನು ನೀಡಿ ಜಿಪ್ಲಸ್1 ಮನೆ ನಿರ್ಮಾಣ ಮಾಡಿ ಕೊಡುವುದಾಗಿ ಭರವಸೆ ನೀಡಿದ್ದರು. 

ಆದರೆ ಈವರೆಗೂ ನಮಗೆ ಹಕ್ಕುಪತ್ರದ ಪ್ರಕಾರ ಖಾಲಿ ನಿವೇಶನ ತೋರಿಸುತ್ತಿಲ್ಲ. ನಮ್ಮ ಜಾಗೆಯನ್ನು ಹದ್ದುಬಸ್ತು ಮಾಡಿ ಕೊಡುವಂತೆ ಹಲವಾರು ಬಾರಿ ಮನವಿ ಮಾಡಿದರೂ ಸಹ ಅಧಿಕಾರಿಗಳು ಮನವಿ ಪತ್ರವನ್ನು ಪಡೆದು ಮೌನಕ್ಕೆ ಶರಣಾಗುತ್ತಾರೆ. ಇದರಿಂದ ನಮಗೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳಲನ್ನು ತೊಡಿಕೊಂಡರು.

ಗ್ರಾಪಂ ಸದಸ್ಯ ಬಸವರಾಜ ಕೋಣನವರ ಮಾತನಾಡಿ, ಸುಮಾರು 48ಕುಟುಂಬಗಳು ಚಿಕ್ಕಣಜಿ ಕ್ರಾಸ್ನಲ್ಲಿರುವ ದೊಡ್ಡಕೆರೆಯಲ್ಲಿ ವಾಸಿಸುತ್ತಿದ್ದು, ಕಳೆದ ಎರಡ್ಮೂರು ವರ್ಷಗಳಿಂದ ಸುರಿದ ಮಳೆಯಿಂದ ಕೆರೆ ತುಂಬಿದ್ದು ವಾಸಿಸಲು ತೀವ್ರ ಸಮಸ್ಯೆಯಾಗಿದೆ. ಈ ಜನರ  ಕಷ್ಟಗಳನ್ನು ಪರಿಹರಿಸುವಂತೆ 2016ರಿಂದ ಅಧಿಕಾರಿಗಳಲ್ಲಿ ಮನವಿಯನ್ನು ನೀಡುತ್ತಾ ಬಂದಿದ್ದರೂ ಯಾವ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು.

ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಪ್ರಸಾದ್ ಅವರು ಇನ್ನೊಂದು ವಾರದಲ್ಲಿ ಈ ಸಮಸ್ಯೆಯ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಮಂಜಮ್ಮ ಜೋಗಿಸ್, ಜಯಲಕ್ಷ್ಮವ್ವ ಜೊಗಿಸ್, ಜೋಗಿಸ್, ಚೌಡಮ್ಮ ಕುಂಚಿಗೊರವ, ಮುತ್ತಮ್ಮ ದುರಮುರಗಿ, ದ್ಯಾಮವ್ವ ಕುಂಚಿಕೊರವರ, ಮಲ್ಲಮ್ಮ ದುರಮುರಗಿ, ಲಕ್ಷ್ಮವ್ವ ಜೋಗಿಸ್, ಮಂಜಮ್ಮ ದುರಮುರಗಿ, ಈರಮ್ಮ ಪರ್ವತೆರ, ದುರುಗಪ್ಪ ಹಿಂದೂವಡ್ಡರ, ಹನುಮವ್ವ ದುರಮುರಗಿ, ರಾಧಿಕಾ ದುರಮುರಗಿ, ಅಕ್ಕಮ್ಮ ದುರಮುರಗಿ, ಸುಂಕವ್ವ ದುರಮುರಗಿ, ನೇತ್ರಮ್ಮ ಹಂದಿಜೋಗಿಸ್, ಮಾಲಮ್ಮ ಹಂದಿಜೋಗಿಸ್, ತುಳಸಮ್ಮ ಹಂದಿಜೋಗಿಸ್, ಯಲ್ಲಮ್ಮ ಕುಂಚಿಕೊರವರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸುದ್ದಿ ಓದಿ