ಬ್ಯಾಡ್ಗಿ

ನಿವೇಶನ ಹಂಚಿಕೆ ವಿಳಂಬ ಖಂಡಿಸಿ ಪ್ರತಿಭಟನೆ

ನಿವೇಶನ ಹಂಚಿಕೆ ವಿಳಂಬ ಖಂಡಿಸಿ ಪ್ರತಿಭಟನೆ

ಬ್ಯಾಡಗಿ 29: ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ವಾಸಿಸುವ ನಿವೇಶನ ರಹಿತ ಬಡ ಫಲಾನುಭವಿಗಳನ್ನು ಆಯ್ಕೆ ಮಾಡಿ ವರ್ಷಗಳೇ ಕಳೆದರೂ ಕೂಡ ನಿವೇಶನವನ್ನು ಹಂಚಿಕೆ ಮಾಡಲು ಅನುಸರಿಸುತ್ತಿರುವ ವಿಳಂಬ ಧೋರಣೆ ಖಂಡಿಸಿ ಭ್ರಷ್ಟಾಚಾರ ವಿರೋಧಿ ಜನಾಂದೋಲನ ನ್ಯಾಸ ಘಟಕದ ನೇತೃತ್ವದಲ್ಲಿ ನಿವೇಶನ ರಹಿತ ನೂರಾರು ಮಹಿಳೆಯರು ಗುರುವಾರ ಬೆಳಿಗ್ಗೆ ಪುರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬಳಿಕ ಮಾತನಾಡಿದ ಜಿಲ್ಲಾ ಸಂಚಾಲಕಿ ಫರೀದಾ ನದ್ದಿಮುಲ್ಲಾ, ಫಲಾನುಭವಿಗಳಿಗೆ ನಿವೇಶನ ಹಂಚಿಕೆಗಾಗಿ ಪಟ್ಟಣದ ವ್ಯಾಪ್ತಿಯಲ್ಲಿ ಬರುವ  ಮಲ್ಲೂರು ರಸ್ತೆಯಲ್ಲಿ ನಿಯಮಾನುಸಾರ ಹತ್ತು ಎಕರೆ ಜಮೀನು ಖರೀದಿಸಿದ್ದರೂ ಸಹ  ನಿವೇಶನಗಳನ್ನು ಹಂಚಿಕೆ ಮಾಡದೇ ಕಾಲಹರಣ ಮಾಡುತ್ತ ಮೂರ್ನಾಲ್ಕು ವರ್ಷಗಳನ್ನು ಕಳೆಯಲಾಗಿದೆ. ಈಗಲಾದರೂ ಪುರಸಭೆಯ ಆಡಳಿತ ಮಂಡಳಿ ನಿವೇಶನ ರಹಿತ ಜನರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಮತ್ತೆ ಪುರಸಭೆಯ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಪುರಸಭಾಧ್ಯಕ್ಷೆ ಕವಿತಾ ಸೊಪ್ಪಿನಮಠ ಅವರು, ಈ ಬಗ್ಗೆ ಈಗಾಗಲೇ ಪರಿಶೀಲನೆ ನಡೆಸಿದ್ದು ಆದಷ್ಟು ಬೇಗನೆ ಅರ್ಹ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಿ ಶಾಸಕರ ನೇತೃತ್ವದಲ್ಲಿ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 

ನ್ಯಾಸ ಘಟಕದ ರಾಜ್ಯ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಸೇರಿದಂತೆ ನೂರಾರು ಮಹಿಳಾ ಫಲಾನುಭವಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ