ಮಾಶಾಸನ ಹೆಚ್ಚಿಸಲು ಒತ್ತಾಯಿಸಿ ದೇವದಾಸಿ ಮಹಿಳೆಯರಿಂದ ಪ್ರತಿಭಟನೆ
ಲೋಕದರ್ಶನ ವರದಿ
ಹೊಸಪೇಟೆ ಜು.14: ತಮ್ಮದಲ್ಲದ ತಪ್ಪಿಗೆ ಸಮಾಜದ ಪಟ್ಟಭದ್ರರು ಹೇರಲ್ಪಟ್ಟ ದೇವದಾಸಿ ಅನಿಷ್ಠ ಪದ್ಧತಿಗೆ ಸಿಲುಕಿರುವ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಈ ನಿಟ್ಟಿನಲ್ಲಿ ಸರ್ಕಾರಗಳು ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕಿದೆ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾಧ್ಯಕ್ಷೆ ಕೆ.ನಾಗರತ್ನಮ್ಮ ಆಗ್ರಹಿಸಿದರು.
ದೇವದಾಸಿ ಮಹಿಳೆಯರಿಗೆ ಭರಸೆ ನೀಡಿದ ರಾಜ್ಯ ಸರ್ಕಾರವು ಈಗಿರುವ ಒಂದು ಸಾವಿರದ ಐದು ನೂರು ರೂಪಾಯಿಗಳ ಬದಲು ಎರಡು ಸಾವಿರ ರೂಪಾಯಿಗಳನ್ನು ನಿಗದಿಪಡಿಸುವುದಾಗಿ ಭರವಸೆಯನ್ನು ನೀಡಲಾಗಿತ್ತು. ಆದರೆ ಇದುವರೆಗೆ ಐದು ನೂರು ರೂಪಾಯಿಗಳನ್ನು ಹೆಚ್ಚಿಸಲಾಗಿಲ್ಲವಾದ್ದರಿಂದ ರಾಜ್ಯದ ಎಲ್ಲಾ ತಾಲ್ಲೂಕು ಕಛೇರಿಗಳ ಮುಂದೆ ಈ ದಿನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರ್ಕಾರ ಇದೇ ರೀತಿ ವಿಳಂಬ ದೋರಣೆಯನ್ನು ಅನುಸರಿಸಿದರೆ; ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಇರುವ ದೇವದಾಸಿ ಮಹಿಳೆಯರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸದೇ ತಕ್ಷಣ ಹೆಚ್ಚುವರಿ ಐದು ನೂರು ರೂಪಾಯಿಗಳ ಮಾಶಾಸನವನ್ನು ಕೊಡಬೇಕು ಎಂದರು.
ಸಂಘಟನೆಯ ತಾಲ್ಲೂಕು ಅಧ್ಯಕ್ಷೆ ಕೆ.ಹಂಪಮ್ಮ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಸರ್ವೇ ಪಟ್ಟಿಯಿಂದ ಬಿಟ್ಟು ಹೋದ ದೇವದಾಸಿ ಮಹಿಳೆಯರನ್ನು ಸರ್ವೇ ಪಟ್ಟಿಗೆ ಸೇರೆ್ಡ ಮಾಡಬೇಕು. ಕನಿಷ್ಠ 80 ಅಡಿ ಉದ್ದ 80 ಅಡಿ ಅಗಲದ ನಿವೇಶನ ಹಂಚುವುದರ ಜೊತೆಗೆ ಕೃಷಿ ಅವಲಂಬಿತ ಚಟುವಟಿಕೆಗಳಿಗೆ ಸಾಲ ಸೌಲಭ್ಯ ಒದಗಿಸಬೇಕು ಎಂದರು. ಸಂಘಟನೆಯ ತಾಲ್ಲೂಕು ಕಾರ್ಯದರ್ಶಿ ಎಸ್ ಯಲ್ಲಮ್ಮ ಇದೇ ಸಂದರ್ಭದಲ್ಲಿ ಮಾತನಾಡಿ, ದೇವದಾಸಿ ಮಹಿಳೆಯರ ಮಕ್ಕಳ ಮದುವೆಗೆ ನೀಡುವ ಪ್ರೋತ್ಸಾಹಧನಕ್ಕೆ ಈಗಿರುವ 28 ಷರತ್ತುಗಳನ್ನು ಕೈಬಿಡಬೇಕು. ಐದು ಎಕರೆ ಭೂಮಿಯನ್ನು ಪ್ರತಿ ಕುಟುಂಬಕ್ಕೆ ಹಂಚಿಕೆ ಮಾಡಬೇಕು. ದೇವದಾಸಿ ಪದ್ಧತಿ ನಿರ್ಮೂಲನೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದರು. ಪ್ರತಿಭಟನೆಯಲ್ಲಿ ನೂರಾರು ದೇವದಾಸಿ ಮಹಿಳೆಯರು ಭಾಗವಹಿಸಿದ್ದರು.