ಖಾಯಂಯೇತರ ಕಾರ್ಮಿಕರ ಖಾಯಂಗೆ ಒತ್ತಾಯಿಸಿ ಪ್ರತಿಭಟನೆ ಮನವಿ

ಖಾಯಂಯೇತರ ಕಾರ್ಮಿಕರ ಖಾಯಂಗೆ ಒತ್ತಾಯಿಸಿ ಪ್ರತಿಭಟನೆ ಮನವಿ

ಲೋಕದರ್ಶನ ವರದಿ 

ವಿಜಯಪುರ 30: ಮಾಸಿಕ ಸರಾಸರಿ ರೂ.36 ಸಾವಿರ ಕನಿಷ್ಠ ವೇತನ ನಿಗದಿ, ಕಾರ್ಮಿಕ ಸಂಹಿತೆಗಳಿಗೆ ಕರ್ನಾಟಕ ತಿದ್ದುಪಡಿಗಳಿಗಾಗಿ ಹಾಗೂ ಖಾಯಂಯೇತರ ಕಾರ್ಮಿಕರ ಖಾಯಂಗೆ ಶಾಸನಕ್ಕಾಗಿ ಒತ್ತಾಯಿಸಿ ಪ್ರತಿಭಟನೆಯ ಮೂಲಕ ಜಿಲ್ಲಾಧಿಕಾರಿಗಳ ಕಛೇರಿ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಸಂಚಾಲಕರಾದ ಲಕ್ಷ್ಮಣ ಹಂದ್ರಾಳ ಮಾತನಾಡಿ, ವೈಜ್ಞಾನಿಕವಾಗಿ ಎಲ್ಲಾ ಕಾರ್ಮಿಕರಿಗೂ ಕನಿಷ್ಠ ವೇತನ ನಿಗದಿಪಡಿಸಿ ಜಾರಿ ಮಾಡಿ ಕರ್ನಾಟಕ ರಾಜ್ಯ ಸರ್ಕಾರವು ಕನಿಷ್ಠ ವೇತನವನ್ನು ಪರಿಷ್ಕರಿಸಿ, ಪ್ರತಿ ಉದ್ದಿಮೆಗೆ ಪ್ರತ್ಯೇಕವಾಗಿ ಕನಿಷ್ಠ ವೇತನ ನಿಗದಿ ಮಾಡದೇ ಬಹುತೇಕ ಉದ್ದಿಮೆಗಳಿಗೆ ಏಕರೂಪವಾಗಿ ಹಾಗೂ ಹಿಂದೆ ಇದ್ದ ನಾಲ್ಕು ವಲಯಕ್ಕೆ ಬದಲಾಗಿ ಮೂರು ವಲಯಗಳಾಗಿ ಮಾಡಿ ಮೇ 22ರಂದು ಹೊರಡಿಸಿರುವ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಸಿಐಟಿಯು ಸ್ವಾಗತಿಸುತ್ತಲೇ ಇದರಲ್ಲಿರುವ ನೂನ್ಯತೆಗಳನ್ನು ಸರಿಪಡಿಸಬೇಕೆಂದು ಆಗ್ರಹಿಸುತ್ತದೆ. 

ಕಾರ್ಮಿಕರ ಜೀವನ ನಿರ್ವಹಣಾ ವೆಚ್ಚ ಮತ್ತು ಇವತ್ತಿನ ಬೆಲೆಗಳಿಗೆ ಅನುಗುಣವಾಗಿ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ‘ರೆಪ್ತಕೋಸ್ ಬ್ರೆಟ್ ಆಂಡ್ ಕಂ’ (ಖಜಠಿಣಚಿಞ ಃಡಿಜಣಣ) ಪ್ರಕರಣದಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಆಧರಿಸಿ ರಾಜ್ಯದಲ್ಲಿ ಕನಿಷ್ಠ ವೇತನ ಪರಿಷ್ಕರಿಸಬೇಕೆಂಬುದು ಕರ್ನಾಟಕ ಹೈಕೋರ್ಟ್‌ ನಿರ್ದೇಶನ ಹಾಗೂ ಸಿಐಟಿಯು, ಕಾರ್ಮಿಕ ಸಂಘಟನೆಗಳ ಆಗ್ರಹವಾಗಿತ್ತು ಎಂಬುದನ್ನು ನೆನಪಿಸುತ್ತೇವೆ. ರಾಜ್ಯ ಸರ್ಕಾರ ಪ್ರಕಟಿಸಿರುವ ಕನಿಷ್ಠ ವೇತನದಿಂದ ಒಂದು ಕೋಟಿಗಿಂತ ಹೆಚ್ಚಿನ ಕಾರ್ಮಿಕರಿಗೆ ಪ್ರಯೋಜನವಾಗಲಿದೆ ಎಂಬುದನ್ನು ಸಿಐಟಿಯು ಮನಗಾಣುತ್ತಲೇ ಹೆಚ್ಚಳ ಮಾಡಿರುವ ಕನಿಷ್ಠ ವೇತನವು ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ ಮಾನದಂಡಗಳಿಗೆ ಪೂರಕವಾಗಿಲ್ಲ. ಇವತ್ತಿನ ಬೆಲೆಗಳು ಮತ್ತು ಜೀವನ ವೆಚ್ಚಕ್ಕೆ ಅನುಗುಣವಾಗಿ ಸರಾಸರಿ 36 ಸಾವಿರ ಕನಿಷ್ಠ ವೇತನ ನಿಗದಿ ಮಾಡಬೇಕೆಂದು ಸಿಐಟಿಯು ಒತ್ತಾಯಿಸುತ್ತದೆ ಎಂದರು. ಕೇರಳ ಮಾಜಿ ಮುಖ್ಯಮಂತ್ರಿಗಳಾದ ಪಿನ್‌ರಾಯ್ ವಿಜಯನ್ ಇವರ ಮೇಲೆ ಇಡಿ ಮಾಡಿದನ್ನು ತೀವ್ರವಾಗಿ ಖಂಡಿಸುತ್ತದೆ. ಎಸ್‌ಐಆರ್‌ಅನ್ನು ಸಂಘಟಣೆಯು ವಿರೋಧಿಸುತ್ತದೆ.  

ಸಿಐಟಿಯು ಸಹ ಸಂಚಾಲಕರಾದ ಸುರೇಶ ಜಿ.ಬಿ. ಮಾತನಾಡಿ, ರಾಜ್ಯ ಸರ್ಕಾರ ಕನಿಷ್ಠ ವೇತನದ ಕರಡು ಅಧಿಸೂಚನೆ ಹೊರಡಿಸಿದ ದಿನಾಂಕವಾದ 2025 ಏಪ್ರಿಲ್ 11 ರಿಂದಲೇ ಪೂರ್ವಾನ್ವಯಿಸಿ  ಕನಿಷ್ಠ ವೇತನ ಜಾರಿಗೆ ತರುವ ಬದಲಾಗಿ 2026 ಮೇ 22 ರಂದು ಅಧಿಸೂಚನೆ ಹೊರಡಿಸಿದ ದಿನದಿಂದ ಜಾರಿಗೆ ತಂದಿರುವುದು ಬಹುಸಂಖ್ಯಾತ ಕಾರ್ಮಿಕರಿಗೆ ಒಂದು ವರ್ಗದ ಅರಿಯರ್ಸ್‌ ಸಿಗದಂತೆ ಮಾಡಿದೆ. ಹಾಗಾಗಿ ಕನಿಷ್ಠ ವೇತನವನ್ನು ಏಪ್ರಿಲ್ 2025 ರಿಂದಲೇ ಜಾರಿಗೆ ಬರುವಂತೆ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಬೇಕೆಂದು ಸಿಐಟಿಯು ಒತ್ತಾಯಿಸುತ್ತದೆ. 

ಈ ಅಧಿಸೂಚನೆಯಿಂದ ಗಾಮೆಂರ್ಟ್ಸ್‌ , ಪ್ಲಾಂಟೇಷನ್, ಬೀಡಿ, ಅಗರಬತ್ತಿ, ಕೈಮಗ್ಗ ಸೇರಿ 19 ವಿಭಾಗದ ಉದ್ದಿಮೆಗಳನ್ನು ಹೊರಗಿಟ್ಟಿರುವ ರಾಜ್ಯ ಸರ್ಕಾರದ ಕ್ರಮದಿಂದ ಬಹುಸಂಖ್ಯಾತ ಮಹಿಳಾ ಕಾರ್ಮಿಕರು ಕನಿಷ್ಠ ವೇತನ ಹೆಚ್ಚಳದಿಂದ ವಂಚಿತರಾಗಲಿದ್ದಾರೆ. ಪ್ರಸ್ತುತ ಮೇ 22 ರಂದು ಜಾರಿಗೆ ತಂದಿರುವ ಕನಿಷ್ಠ ವೇತನವನ್ನೆ ಈ 19 ಉದ್ದಿಮೆಗಳಿಗೂ ವಿಸ್ತರಿಸಿ ಕೂಡಲೇ ಅಧಿಸೂಚನೆ ಹೊರಡಿಸಬೇಕು. ಸ್ಕೀಂ ನೌಕರರನ್ನು ಕನಿಷ್ಠ ವೇತನ ವ್ಯಾಪ್ತಿಗೆ ತರಬೇಕೆಂಬುದು ಸಿಐಟಿಯು ಒತ್ತಾಸೆಯಾಗಿದೆ ಪ್ರಸ್ತುತ ಪ್ರಕಟಿತ ಕನಿಷ್ಠ  ವೇತನದಿಂದ ಕಾರ್ಮಿಕರಿಗೆ ಸ್ವಲ್ಪ ಪ್ರಮಾಣದಲ್ಲಿ ವೇತನ ಹೆಚ್ಚಳ ಆಗುವುದರಿಂದ ಮಾಲೀಕರ ಯಾವುದೇ ಒತ್ತಡಕ್ಕೆ ಮಣಿಯದೆ ಈ ಪರಿಷ್ಕೃತ ಕನಿಷ್ಠ ವೇತನದ ಆದೇಶವನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕೆಂದು ಸಿಐಟಿಯು ಒತ್ತಾಯಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿದರು.  ಈ ಸಂದರ್ಭದಲ್ಲಿ ಗ್ರಾ. ಪಂ ನೌಕರರ ಸಂಘದ ನಾರಾಯಣ ಬಡಿಗೇರ, ಲಾಲ್ ಅಹ್ಮದ ಶೇಖ, ಪಿಂಟು ಕೊಂಡಗೂಳಿ, ಶಿವಾನಂದ ಅನಮಿ, ಸುರೇಖಾ ವಾಗ್ಮೋರೆ, ನೀಲಮ್ಮ ತಡ್ಲಗಿ, ನೀಲಮ್ಮ ಅಥಣಿ, ದಾನಮ್ಮ ಶಾಪೇಟಿ, ಶೋಭಾ ಪಾಂಡ್ರೆ, ಈರಣ್ಣ ಬೆಳ್ಳುಂಡಗಿ ಮುಂತಾದವರು ಇದ್ದರು. 


ಸುದ್ದಿ ಓದಿ