ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಇಂಡಿ 20: ನಗರದಲ್ಲಿ ಗುರುವಾರ ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ ಹಾಗೂ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ ಅವರ ನೇತೃತ್ವದಲ್ಲಿ ನೂರಾರು ಜನರು ಸೇರಿ ಪ್ರತಿಭಟನೆ ಮಾಡಿದರು.
ಪ್ರತಿಭಟನೆಕಾರರು ನಗರದ ಅಂಬೇಡ್ಕರ್ ವೃತ್ತದ ಮೂಲಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಬಸವೇಶ್ವರ ವೃತ್ತದ ಬಳಿ ಮಾನವ ಸರಪಳಿ ಹಾಕಿ ಹತ್ತು ನಿಮಿಷಗಳ ಕಾಲ ರಸ್ತೆ ತಡೆದು ಪ್ರತಿಭಟನೆ ಮಾಡಿದರು.ಬಿಜೆಪಿ ವಿಧಾನಸಭಾ ಪರಾಜಿತ ಅಭ್ಯರ್ಥಿ ಕಾಸುಗೌಡ ಬಿರಾದಾರ ಅವರು ಮಾತನಾಡಿ ಕಾಂಗ್ರೆಸ್ ಸರ್ಕಾರ ದುರಾಡಳಿತ ನೀತಿ ಅನುಸರಿಸುತ್ತಿದೆ, ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಿದೆ, ವಾಲ್ಮೀಕಿ ನಿಗಮದ ಹಗರಣ, ರೈತರ ಬಿತ್ತನೆ ಬೀಜಕ್ಕೆ ಬೆಲೆ ಏರಿಕೆ ಮಾಡಿ, ಜನ ಸಾಮಾನ್ಯರ ವಿಶ್ವಾಸ ಕಳೆದುಕೊಂಡಿದೆ ಎಂದು ಕಾಂಗ್ರೆಸ್ ಸರ್ಕಾರ ದುರಾಡಳಿತ ನೀತಿಯನ್ನು ಖಂಡಿಸಿದರು.
ವಿಧಾನಸಭಾ ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ ಡಿ ಪಾಟೀಲ ಅವರು ಮಾತನಾಡಿ ಗ್ಯಾರಂಟಿ ಹೆಸರಿನಲ್ಲಿ ಬಂದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಿದೆ ಹಾಗೂ ಇಪ್ಪತ್ತು ರೂಪಾಯಿ ಮೌಲ್ಯ ಬಾಂಡ್ ಪೇಪರ್ ಈಗ ನೂರು ರೂಪಾಯಿ ಮಾಡಿದೆ, ಹತ್ತು ರೂಪಾಯಿ ಪಹಣಿ ಇಪ್ಪತ್ತೈದು ರೂಪಾಯಿ ಮಾಡಿದೆ. ಇತರ ವಸ್ತುಗಳ ಬೆಲೆ ಏರಿಕೆ ಮಾಡಿದೆ, ಇಂಡಿ ತಾಲ್ಲೂಕಿನಾದ್ಯಂತ ರಸ್ತೆಗಳು ಸಂಪೂರ್ಣ ಹಾಳಾಗಿವೆ, ಕಳೆದ ಬಾರಿ ಭೀಕರ ಬರಗಾಲದಿಂದ ತತ್ತರಿಸಿರುವ ರೈತರು ಈ ಬಾರಿ ಬಿತ್ತನೆ ಮಾಡಬೇಕು ಎಂದರೆ, ಬಿತ್ತನೆ ಬೀಜಗಳ ಬೆಲೆ ಏರಿಕೆ ಮಾಡಿದೆ, ಒಟ್ಟಿನಲ್ಲಿ ರೈತರ ಹಾಗೂ ಜನಸಾಮಾನ್ಯರ ಹಿತ ಕಾಪಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇಂಡಿ ಮಂಡಲ ಬಿಜೆಪಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಿವಡೆ, ಬಿಜೆಪಿ ಮುಖಂಡರಾದ ರಾಮಸಿಂಗ್ ಕನ್ನೊಳ್ಳಿ, ಅಶೋಕಗೌಡ ಬಿರಾದಾರ, ಹಣಮಂತರಾಗೌಡ ಪಾಟೀಲ, ಅನೀಲ ಜಮಾದಾರ, ದೇವಿಂದ್ರ್ಪ ಕುಂಬಾರ, ವೆಂಕಟೇಶ್ ಕುಲಕರ್ಣಿ, ಶರಣಗೌಡ ಬಂಡಿ, ಸಂಜು ದಶವಂತ, ನಾಗೇಶ್ ಹೇಗಡ್ಯಾಳ, ಅಣ್ಣಾರಾಯ ಮದರಿ, ಮಹಿಬೂಬ ಬೇವನೂರ, ಶಾಂತು ಕಂಬಾರ, ಶಿವು ಬಗಲಿ, ವಿಜಯಲಕ್ಷ್ಮಿ ರೂಗಿಮಠ, ಸುನಂದಾ ಗಿರಣಿವಡ್ಡರ, ಅನುಸೂಯಾ ಮದರಿ, ಭೌರಮ್ಮ ನಾವಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.